ಮಡಿಕೇರಿ, ನ. ೨೩; ಬರೋಬ್ಬರಿ ೨೪ ವರ್ಷಗಳ ಬಳಿಕ ಪದವಿ ಪೂರ್ವ ಹಾಕಿ ಇತಿಹಾಸದ ಪುಟದಲ್ಲಿ ಕೊಡಗಿನ ಬಾಲಕರು ಗೆಲುವಿನ ಇತಿಹಾಸ ಬರೆದಿದ್ದಾರೆ. ಬಾಗಲಕೋಟೆಯ ಜಮಖಂಡಿಯಲ್ಲಿ ನಡೆದ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಚಿನ್ನದ ಪದಕದೊಂದಿಗೆ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ತಂಡವನ್ನು ರಾಷ್ಟçಮಟ್ಟಕ್ಕೆ ಕೊಂಡೊಯ್ದಿದ್ದಾರೆ.

ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ, ಬಾಗಲಕೋಟೆಯ ಜಮಖಂಡಿ ತುಂಗಳ ವಿಜ್ಞಾನ ಸಂಯುಕ್ತ ಮದವಿ ಪೂರ್ವ ಮಹಾ ವಿದ್ಯಾಲಯದ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಕೊಡಗು ತಂಡ ಬಲಿಷ್ಠ ಬೆಂಗಳೂರು ಉತ್ತರ ತಂಡವನ್ನು ಮಣಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದೆ. ಬಹುತೇಕ ಮಾದಾಪುರ ಶ್ರೀಮತಿ ಡಿ. ಚೆನ್ನಮ್ಮ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು, ಕೂಡಿಗೆ ಹಿರಿಯ ಕ್ರೀಡಾಶಾಲೆಯ ಕ್ರೀಡಾರ್ಥಿಗಳನ್ನೊಳಗೊಂಡ ತಂಡ ೨೪ ವರ್ಷಗಳ ನಂತರ ಈ ಸಾಧನೆ ಮಾಡಿದೆ.

ಅಂತಿಮ ಪಂದ್ಯಾಟದ ಪ್ರಥಮಾರ್ಧದಲ್ಲಿ ಕೊಡಗು ತಂಡದ ಮಯೂರ್ ಒಂದು ಗೋಲು ಬಾರಿಸುವ ಮೂಲಕ ೧-೦ ಮುನ್ನಡೆ ತಂದುಕೊಟ್ಟರು. ದ್ವಿತಿಯಾರ್ಧದಲ್ಲಿ ಬೆಂಗಳೂರು ತಂಡ ಗೋಲು ದಾಖಲಿಸಿ ಅಂತರವನ್ನು ಸಮಗೊಳಿಸಿತು. ನಂತರ ನೀಡಲಾದ ಟೈಬ್ರೇಕರ್‌ನಲ್ಲಿ ಕೊಡಗು ತಂಡ ೪-೨ ಗೋಲುಗಳ ಅಂತರದಿAದ ಜಯದ ನಗು ಬೀರಿತು. ಕೊಡಗು ತಂಡದ ಪರ ಮಯೂರ್, ಮೋಕ್ಷಿತ್, ಮನ್ವಿತ್, ಯಶವಂತ್ ಗೋಲು ಬಾರಿಸಿದರು.

ಇದಕ್ಕೂ ಮುನ್ನ ನಡೆದ ಸೆಮಿ ಫೈನಲ್ ಪಂದ್ಯಾವಳಿಯಲ್ಲಿ ಬಳ್ಳಾರಿ ತಂಡವನ್ನು ಸೋಲಿಸಿತ್ತು. ಪಂದ್ಯಾವಳಿಯ ಪ್ರಥಮಾವಧಿಯಲ್ಲಿ ಬಳ್ಳಾರಿ ತಂಡ ಗೋಲು ಬಾರಿಸುವದರೊಂದಿಗೆ ಮುನ್ನಡೆ ಕಾಯ್ದುಕೊಂಡಿತು. ದ್ವಿತಿಯಾವಧಿಯಲ್ಲಿ ಕೊಡಗು ತಂಡದ ಮಯೂರ್ ಗೋಲು ದಾಖಲಿಸುವ ಮೂಲಕ ಸಮಬಲ ಸಾಧಿಸಿದರು. ನಂತರ ನೀಡಲಾದ ಟೈ ಬ್ರೇಕರ್ ಅವಕಾಶದಲ್ಲಿ ಕೊಡಗು ತಂಡ ೪-೩ ಗೋಲುಗಳಿಂದ ಬಳ್ಳಾರಿ ತಂಡವನ್ನು ಸೋಲಿಸಿ ಫೈನಲ್‌ಗೇರಿತು. ಕೊಡಗು ಪರ ಆಕಾಶ್, ಮಯೂರ್, ಮನ್ವಿತ್, ಮೋಕ್ಷಿತ್ ಗೋಲು ದಾಖಲಿಸಿದರು. ಟೈಬ್ರೇಕರ್ ಸಂದರ್ಭದಲ್ಲಿ ಕೊಡಗು ತಂಡದ ಹರ್ಷ ಬೋಪಣ್ಣ ಶ್ರಮಪಟ್ಟು ಗೋಲಾಗುವದನ್ನು ತಡೆದು ತಂಡ ಜಯಗಳಿಸುವಲ್ಲಿ ನೆರವಾದರು.

ಇತ್ತ ಮತ್ತೊಂದು ಸೆಮಿ ಫೈನಲ್ಸ್ನಲ್ಲಿ ಬೆಂಗಳೂರು ತಂಡ ಚಿಕ್ಕೋಡಿ ತಂಡವನ್ನು ೨-೧ ಗೋಲುಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತ್ತು. ಬಾಲಕರ ವಿಭಾಗದಲ್ಲಿ ಒಟ್ಟು ೨೪ ತಂಡಗಳು ಭಾಗವಹಿಸಿದ್ದವು. ಈ ಪೈಕಿ ಕೊಡಗು ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.

ತರಬೇತುದಾರರ ಶ್ರಮ

ಐತಿಹಾಸಿಕ ದಾಖಲೆ ಮಾಡಿರುವ ಕೊಡಗು ಬಾಲಕರ ತಂಡದ ಗೆಲುವಿನ ಹಿಂದೆ ತರಬೇತುದಾರರು ಹಾಗೂ ವ್ಯವಸ್ಥಾಪಕರ ಶ್ರಮ ಅಡಗಿದೆ. ತಂಡ ರಚನೆ ಮಾಡುವದರೊಂದಿಗೆ, ತರಬೇತುದಾರರಾಗಿ ಮಾದಾಪುರ ಶ್ರೀಮತಿ ಡಿ.ಚೆನ್ನಮ್ಮ ಪ.ಪೂ. ಕಾಲೇಜಿನ ದೈಹಿಕ ಶಿಕ್ಷಕರರಾಗಿರುವ ಮೂಕಚಂಡ ನಿರನ್ ನಾಚಪ್ಪ ಕಾರ್ಯನಿರ್ವಹಿಸಿದ್ದಾರೆ. ತಂಡದ ವ್ಯವಸ್ಥಾಪಕರಾಗಿ ಗೋಣಿಕೊಪ್ಪದ ವಿನೋದ್‌ಕುಮಾರ್ ಜೆಸಿಬಿ ಕಾರ್ಯನಿರ್ವಹಿಸಿದರು. ಇವರೊಂದಿಗೆ ಬೆಂಗಳೂರು ಪ.ಪೂ.ಶಿಕ್ಷಣ ಇಲಾಖೆ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ)

ನಿವೃತ್ತ ನಿರ್ದೇಶಕರಾದ ಗೋಪಾಲಕೃಷ್ಣ ಅವರು ಎಲ್ಲ ರೀತಿಯಲ್ಲೂ ಸಹಕಾರ ನೀಡಿದ್ದಾರೆ.

ಬಾಲಕಿಯರು ದ್ವಿತೀಯ

ಬಾಲಕಿಯರ ವಿಭಾಗದಲ್ಲಿ ಕೊಡಗು ತಂಡ ದ್ವಿತೀಯ ಸ್ಥಾನ ಗಳಿಸಿದೆ. ಅಂತಿಮ ಪಂದ್ಯಾವಳಿಯಲ್ಲಿ ಮೈಸೂರು ತಂಡ ಕೊಡಗು ತಂಡವನ್ನು ೨-೦ ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಇದಕ್ಕೂ ಮುನ್ನ ನಡೆದ ಸೆಮಿಫೈನಲ್ಸ್ನಲ್ಲಿ ಕೊಡಗು ತಂಡ ಬಾಗಲಕೋಟೆ ತಂಡವನ್ನು ೪-೦ ಗೋಲುಗಳ ಅಂತರದಿAದ ಸೋಲಿಸಿ ಫೈನಲ್‌ಗೇರಿತು. ಕೊಡಗು ಪರ ಪೂರ್ವಿ ಪೊನ್ನಮ್ಮ ಹಾಗೂ ನೀಲಮ್ಮ ತಲಾ ಎರಡು ಗೋಲು ಗಳಿಸಿದರು. ಮತ್ತೊಂದು ಪಂದ್ಯದಲ್ಲಿ ಮೈಸೂರು ತಂಡ ಚಿಕ್ಕೋಡಿ ತಂಡವನ್ನು ೫-೦ ಗೋಲಿನಿಂದ ಮಣಿಸಿ ಫೈನಲ್ ಪ್ರವೇಶಿಸಿತ್ತು. ಬಾಲಕಿಯರ ವಿಭಾಗದಲ್ಲಿ ೨೧ ತಂಡಗಳು ಭಾಗವಹಿಸಿದ್ದವು.

- ಕುಡೆಕಲ್ ಸಂತೋಷ್