ವೀರಾಜಪೇಟೆ, ನ. ೨೩: ತಾಲೂಕು ಮೈದಾನದಲ್ಲಿ ಕೂರ್ಗ್ ಫುಟ್‌ಬಾಲ್ ಮಾಸ್ಟರ್ಸ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ೩ನೇ ವರ್ಷದ ೫೦ ವರ್ಷ ಮೇಲ್ಪಟ್ಟವರ ಹೊನಲು ಬೆಳಕಿನ ಕಾಲ್ಚೆಂಡು (ಫುಟ್‌ಬಾಲ್) ಪಂದ್ಯಾಟವು ಅತ್ಯಂತ ರೋಚಕವಾಗಿ ಮೂಡಿಬಂದಿತು. ಟೀಮ್ ಕಣ್ಮಣಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಪಂದ್ಯಾಟದಲ್ಲಿ ನಗರದ ೮ ತಂಡಗಳ ಒಟ್ಟು ೬೪ ಹಿರಿಯ ಕ್ರೀಡಾಪಟುಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.

ತೀವ್ರ ಪೈಪೋಟಿಯಿಂದ ಕೂಡಿದ್ದ ಅಂತಿಮ (ಫೈನಲ್) ಪಂದ್ಯದಲ್ಲಿ ಟೀಮ್ ಕಣ್ಮಣಿ ಹಾಗೂ ಬ್ಲಾಕ್ ಆ್ಯಂಡ್ ವೈಟ್ ತಂಡಗಳು ಮುಖಾಮುಖಿಯಾದವು. ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿದ ಕಾರಣ, ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ರೋಚಕ ಪೆನಾಲ್ಟಿ ಶೂಟೌಟ್‌ನಲ್ಲಿ ಮೇಲುಗೈ ಸಾಧಿಸಿದ ಟೀಮ್ ಕಣ್ಮಣಿ ಪ್ರಥಮ ಸ್ಥಾನದೊಂದಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನವನ್ನು ಮುಡಿಗೇರಿಸಿಕೊಂಡಿತು. ಉತ್ತಮ ಪೈಪೋಟಿ ನೀಡಿದ ಬ್ಲಾಕ್ ಆ್ಯಂಡ್ ವೈಟ್ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟು, ಟ್ರೋಫಿ ಮತ್ತು ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು.

ಪAದ್ಯಾಟದ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್, ವಕೀಲರಾದ ಟಿ.ಪಿ. ಕೃಷ್ಣ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಬಿ.ಎಂ. ಗಣೇಶ್, ಸಿ. ಉಲ್ಲಾಸ್ ಶೇಟ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಎಂ. ರಮೇಶ್, ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ಅಧ್ಯಕ್ಷ ಸುಮೇಶ್, ಪುರಸಭೆ ಮಾಜಿ ಸದಸ್ಯರಾದ ರಜನಿಕಾಂತ್, ಜಲೀಲ್ ಅಹಮದ್, ಸಮಾಜ ಸೇವಕರಾದ ನಸೀರ್, ರಾನ್ಸಿ, ಜಗನ್ ಹಾಗೂ ಟಿ. ವಿನಾಯಕ ಟ್ರಾವೆಲ್ಸ್ ಮಾಲೀಕರಾದ ಹೇಮಂತ್ ಆರ್. ಗಣೇಶ್ ಆಗಮಿಸಿ, ವಿಜೇತರಿಗೆ ಬಹುಮಾನ ವಿತರಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕೂರ್ಗ್ ಫುಟ್‌ಬಾಲ್ ಮಾಸ್ಟರ್ಸ್ ಕ್ಲಬ್‌ನ ಅಧ್ಯಕ್ಷ ಎಲ್.ಜಿ. ಭಾಸ್ಕರ್, ಉಪಾಧ್ಯಕ್ಷ ಸಿ.ಕೆ. ಪೃಥ್ವಿನಾಥ್, ಕಾರ್ಯದರ್ಶಿ ಎಸ್.ಬಿ.ಐ. ಆನಂದ್, ಖಜಾಂಚಿ ಅಲ್ತಾಫ್ ಸೇರಿದಂತೆ ಕ್ಲಬ್‌ನ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.