ಮಡಿಕೇರಿ, ನ. ೨೩: ಪೊಲೀಸ್ ಇಲಾಖೆಯ ಕರ್ತವ್ಯಗಳು ನಿರಂತರ ಒತ್ತಡದಿಂದ ಕೂಡಿದ್ದು, ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆ ಮತ್ತು ದೈಹಿಕ ಚಟುವಟಿಕೆಗಳು ಅತ್ಯಂತ ಅವಶ್ಯಕ ಎಂದು ಮೈಸೂರು ವಲಯ ಪೊಲೀಸ್ ಉಪ ಮಹಾನಿರೀಕ್ಷಕ ಪುಟ್ಟಮಾದಯ್ಯ ಅಭಿಪ್ರಾಯಪಟ್ಟರು.

ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಆಯೋಜಿಸಲಾಗಿದ್ದ ವಾರ್ಷಿಕ ಕ್ರೀಡಾಕೂಟವು ಸಂಭ್ರಮದಿAದ ನಡೆದಿದ್ದು, ಸೋಮವಾರ ವರ್ಣರಂಜಿತ ಸಮಾರಂಭದೊAದಿಗೆ ತೆರೆಕಂಡಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಪುಟ್ಟಮಾದಯ್ಯ ಅವರು, ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಣೆ ಹಾಗೂ ಅಪರಾಧ ಪ್ರಕರಣಗಳ ತನಿಖೆ ಸುಲಭದ ಕೆಲಸವಲ್ಲ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು, ಅಪರಾಧಗಳನ್ನು ನಿಯಂತ್ರಿಸುವುದು ಹಾಗೂ ಪತ್ತೆಹಚ್ಚುವುದು ಪೊಲೀಸರ ಪ್ರಮುಖ ಜವಾಬ್ದಾರಿಗಳಾಗಿವೆ. ಹೀಗಾಗಿ ಪೊಲೀಸರು ನಿರಂತರ ಒತ್ತಡದ ನಡುವೆ ಕಾರ್ಯನಿರ್ವಹಿಸಬೇಕಾಗುತ್ತದೆ. ವಿಶ್ರಾಂತಿರಹಿತ ಕರ್ತವ್ಯದಿಂದಾಗಿ ವೈಯಕ್ತಿಕ ಬದುಕಿಗೂ ಸಮಯ ನೀಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರು.

ಪೊಲೀಸರ ದೈಹಿಕ ಚಟುವಟಿಕೆ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ಮೂಡಲಿ ಎಂಬ ಉದ್ದೇಶದಿಂದ ವಾರ್ಷಿಕ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ. ಕ್ರೀಡಾಕೂಟಗಳು ಒತ್ತಡವನ್ನು ಕಡಿಮೆ ಮಾಡುವುದರೊಂದಿಗೆ ಹೊಸ ಚೈತನ್ಯ ಮತ್ತು ಸ್ಫೂರ್ತಿ ತುಂಬುತ್ತವೆ. ಪ್ರತಿಯೊಬ್ಬರೂ ನಿತ್ಯ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಮಾನಸಿಕ ಆರೋಗ್ಯಕ್ಕೂ ಆದ್ಯತೆ ನೀಡಬೇಕು. ದೈಹಿಕ ಸಮಸ್ಯೆಗಳು ಜೀವನದ ಮೇಲೆ ಗಂಭೀರ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಪರಿಣಾಮ ಬೀರಬಹುದು. ಆದ್ದರಿಂದ ಕ್ರೀಡೆಯ ಮೂಲಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಾಚೀನ ಕಾಲದಲ್ಲಿ ಬದುಕುಳಿಯುವ ಹೋರಾಟದ ಭಾಗವಾಗಿದ್ದ ಬೇಟೆಯಂತಹ ಚಟುವಟಿಕೆಗಳು ಕಾಲಕ್ರಮೇಣ ಕ್ರೀಡೆಯಾಗಿ ರೂಪುಗೊಂಡು ವಿವಿಧ ಕ್ರೀಡಾ ಪ್ರಕಾರಗಳು ಹುಟ್ಟಿಕೊಂಡವು. ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಆದರೆ ಭಾಗವಹಿಸುವಿಕೆ ಮುಖ್ಯ. ಸೇನಾ ಜಿಲ್ಲೆಯೆಂದೇ ಗುರುತಿಸಿಕೊಂಡಿರುವ ಕೊಡಗು ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸ್ಥಾನಮಾನ ಹೊಂದಿದ್ದು, ದೇಶದ ಸೇನೆಗೆ ಮಹತ್ವದ ಕೊಡುಗೆ ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ ಮಾತನಾಡಿ, ಪ್ರತಿವರ್ಷದಂತೆ ಈ ಬಾರಿಯೂ ವಾರ್ಷಿಕ ಕ್ರೀಡಾಕೂಟ ಯಶಸ್ವಿಯಾಗಿ ನಡೆದಿದೆ. ಜಿಲ್ಲೆಯ ಪೊಲೀಸರಿಗೆ ಕರ್ತವ್ಯದ ಒತ್ತಡದಿಂದ ಹೊರಬಂದು ಮನೋಲ್ಲಾಸ ಪಡೆಯಲು ಕ್ರೀಡಾಕೂಟ ಪೂರಕವಾಗಿದೆ. ಇದರಿಂದ ಹೊಸ ಉತ್ಸಾಹದೊಂದಿಗೆ ಕರ್ತವ್ಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಶಸ್ತç ದಳ, ಮಡಿಕೇರಿ, ವೀರಾಜಪೇಟೆ ಹಾಗೂ ಸೋಮವಾರಪೇಟೆ ಉಪವಿಭಾಗಗಳು, ವಿಶೇಷ ಘಟಕ ಮತ್ತು ಮಹಿಳಾ ಪೊಲೀಸ್ ತಂಡಗಳಿAದ ಆಕರ್ಷಕ ಪಥಸಂಚಲನ ನಡೆಯಿತು.

ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದ ಸುರೇಶ್ ಮತ್ತು ಆಶಾ ದಂಪತಿಯ ಪುತ್ರ ಚಿರಾಗ್ ಹಾಗೂ ಅಂಡರ್-೧೯ ಕರ್ನಾಟಕ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಹರೀಶ್ ಮತ್ತು ರಶ್ಮಿ ದಂಪತಿಯ ಪುತ್ರಿ. ಪಿ.ಹೆಚ್. ಮನ್ವಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಕ್ರೀಡಾಕೂಟಗಳಲ್ಲಿ ವಿಜೇತರಾದ ಪೊಲೀಸ್ ಸಿಬ್ಬಂದಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ ಸ್ವಾಗತಿಸಿದರು. ವೀರಾಜಪೇಟೆ ಉಪವಿಭಾಗದ ಡಿವೈಎಸ್‌ಪಿ ಮಹೇಶ್ ಕುಮಾರ್ ವಂದಿಸಿದರು.