ಸೋಮವಾರಪೇಟೆ, ನ. ೧೮: ಪಟ್ಟಣದ ಮಾರ್ಕೆಟ್ ಏರಿಯಾದಲ್ಲಿರುವ ಸಾರ್ವಜನಿಕ ಶೌಚಾಲಯ ನಿರ್ವಹಣೆಯ ಕೊರತೆಯಿಂದ ಸಾರ್ವಜನಿಕರ ಬಳಕೆಗೆ ಲಭ್ಯವಾಗುತ್ತಿಲ್ಲ. ಶೌಚಾಲಯದ ಒಳಾಂಗಣ ಹಾಗೂ ಹೊರಾಂಗಣ ಅಶುಚಿತ್ವದಿಂದ ಕೂಡಿದ್ದು, ತಕ್ಷಣ ಸರಿಪಡಿಸುವಂತೆ ಸೋಮವಾರಪೇಟೆ ಪಟ್ಟಣ ಅಭಿವೃದ್ಧಿ ಫೋರಂ ಸಂಘಟನೆಯಿAದ ಪ.ಪಂ.ಗೆ ಮನವಿ ಸಲ್ಲಿಸಲಾಯಿತು.

ಶೌಚಾಲಯದ ಕಿಟಕಿ ಬಾಗಿಲುಗಳು ಸಮರ್ಪಕವಾಗಿಲ್ಲ. ನೀರಿನ ಸೌಲಭ್ಯ ಸ್ಥಗಿತಗೊಂಡಿದ್ದು, ರಾತ್ರಿ ವೇಳೆ ಪುಂಡರು ಕಿಟಕಿ ಮೂಲಕ ಒಳಗೆ ತೆರಳಿ ಅನೈತಿಕ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ. ಶೌಚಾಲಯ ನಿರ್ವಹಣೆ ಇಲ್ಲದೇ ಇರುವುದರಿಂದ ದುರ್ಬಳಕೆಯಾಗುತ್ತಿದೆ. ಇದರೊಂದಿಗೆ ಶೌಚಕ್ಕೆ ತೆರಳುವ ಸಾರ್ವಜನಿಕರಿಗೂ ಸಮಸ್ಯೆಯಾಗಿದೆ ಎಂದು ಫೋರಂನ ಪದಾಧಿಕಾರಿಗಳಾದ ಹೆಚ್.ಎಲ್. ಅಭಿಷೇಕ್, ಎಸ್. ಸುಮನ್, ಮಂಜು, ಪುನೀತ್ ಅವರುಗಳು, ಪ.ಪಂ. ಮುಖ್ಯಾಧಿಕಾರಿ ಮಹೇಶ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿ, ಗಮನ ಸೆಳೆದರು.

ತಕ್ಷಣ ಶೌಚಾಲಯ ದುರಸ್ತಿಗೆ ಕ್ರಮ ವಹಿಸುವುದಾಗಿ ಮುಖ್ಯಾಧಿಕಾರಿಗಳು ತಿಳಿಸಿದರು. ಈಗಾಗಲೇ ಮೂರು ಬಾರಿ ಶೌಚಾಲಯವನ್ನು ದುರಸ್ತಿ ಮಾಡಲಾಗಿದೆ. ಆದಾಗ್ಯೂ ರಾತ್ರಿ ವೇಳೆ ಶೌಚಾಲಯದ ಬಾಗಿಲು ಮುರಿಯುವುದು, ಕಿಟಕಿ ಗಾಜು ಒಡೆದು ಒಳ ನುಗ್ಗುವ ಕೆಲಸ ಆಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಿದೆ. ಮತ್ತೊಮ್ಮೆ ಶೌಚಾಲಯವನ್ನು ಶುಚಿಗೊಳಿಸಲಾಗುವುದು. ನೀರಿನ ಸಂಪರ್ಕ ಕಲ್ಪಿಸುವ ಮೂಲಕ ಸಾರ್ವಜನಿಕರ ಸೇವೆಗೆ ಒದಗಿಸಲಾಗುವುದು ಎಂದು ಆರೋಗ್ಯ ನಿರೀಕ್ಷಕ ಜಾಸಿಂ ಖಾನ್ ತಿಳಿಸಿದರು.