ಗೋಣಿಕೊಪ್ಪಲು, ನ. ೧೮: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ವಿವಿಧ ಆದಿವಾಸಿ ಬುಡಕಟ್ಟು ಸಂಘಗಳು ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ಸಂಯುಕ್ತ ಆಶ್ರಯದಲ್ಲಿ ತಿತಿಮತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸ್ವಾತಂತ್ರö್ಯ ಹೋರಾಟಗಾರ ಭಗವಾನ್ ಬಿರ್ಸಾಮುಂಡಾ ಅವರ ೧೫೧ನೇ ಜಯಂತಿ ಪ್ರಯುಕ್ತ ಜನ ಜಾತಿಯ ಗೌರವ ದಿವಸ್ ಆಚರಣಾ ಸಮಾರಂಭವು ಜರುಗಿತು.
ವೀರಾಜಪೇಟೆ ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಆದಿವಾಸಿ ಗಿರಿಜನ ಮುಖಂಡರುಗಳಾದ ಕುಡಿಯರ ಮುತ್ತಪ್ಪ, ಪಿ.ಸಿ. ರಾಮು, ಕೆದಮುಳ್ಳೂರು ಗೌರಿ, ಜೆ.ಕೆ. ರಾಮು, ಪಿ.ಜೆ. ಮಲ್ಲಪ್ಪ, ಕಾರಿ, ಚೋಮ, ಸಮಾಜ ಸೇವಕರಾದ ಅಮ್ಮತ್ತಿಯ ಸಂಜು ಸುಬ್ಬಯ್ಯ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ತಿತಿಮತಿ, ಮರೂರು, ಆಶ್ರಮ ಶಾಲೆಯಿಂದ ಮುಂಜಾನೆ ೧೦ ಗಂಟೆಗೆ ಬೆಳ್ಳಿ ರಥಕ್ಕೆ ಚಾಲನೆ ನೀಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಮೆರವಣಿಗೆಯಲ್ಲಿ ಕಲಾ ತಂಡಗಳು, ಕಲಶ ಹೊತ್ತ ಮಹಿಳೆಯರು ಗಿರಿಜನ ಸಮುದಾಯದವರು ಮುಖ್ಯ ರಸ್ತೆಯಲ್ಲಿ ಸಾಗಿಬಂದರು. ಬಿರ್ಸಾಮುಂಡಾ ಅವರ ಮಾದರಿಯಲ್ಲಿ ಗಿರಿಜನ ಯುವಕ ವೇಷಧರಿಸಿ ಗಮನ ಸೆಳೆದರು. ಅಲಂಕೃತ ಬೆಳ್ಳಿ ರಥದಲ್ಲಿ ಬಿರ್ಸಾಮುಂಡಾ ಅವರ ಭಾವಚಿತ್ರವಿತ್ತು.
ಗಿರಿಜನ ಸಮಗ್ರ ಅಭಿವೃದ್ಧಿ ಕಲಾ ಸಂಸ್ಥೆಯ ಅಧ್ಯಕ್ಷ ರಮೇಶ್ ಮತ್ತು ತಂಡ ಕಾರ್ಯಕ್ರಮದ ಅಂಗವಾಗಿ ಜೇನುಕುರುಬರ, ಯರವರ. ಆದಿವಾಸಿಗಳ ವಿವಿಧ ನೃತ್ಯಗಳು, ಕೋಲಾಟಗಳನ್ನು ನಡೆಸಿಕೊಟ್ಟರು.
ಕಾರ್ಯಕ್ರಮದ ಅಂಗವಾಗಿ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಪೌಷ್ಟಿಕ ಆರೋಗ್ಯದ ಬಗ್ಗೆ ಮಾಹಿತಿ ನೀಡಲಾಯಿತು.