ಶ್ರೀಮಂಗಲ, ನ. ೧೭: ಪೊನ್ನಂಪೇಟೆ ತಾಲೂಕು ಬಾಡಗರಕೇರಿ ಗ್ರಾಮದ ಅಮ್ಮತ್ತೀರ ಕುಟುಂಬಸ್ಥರು ಪುನರ್ ನಿರ್ಮಿಸಿದ ಐನ್‌ಮನೆಯನ್ನು ವೀರಾಜಪೇಟೆ ಕ್ಷೇತ್ರ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಉದ್ಘಾಟಿಸಿದರು.

ಈ ಸಂದರ್ಭ ಅವರು ಮಾತನಾಡಿ, ಐನ್‌ಮನೆ ಪರಂಪರೆ ಹಾಗೂ ಸಂಸ್ಕೃತಿಯ ರಕ್ಷಣೆ ಆಗಬೇಕು. ಐನ್‌ಮನೆಗಳನ್ನು ಸೂರ್ಯ ಚಂದ್ರ ಇರುವವರೆಗೆ ಶಾಶ್ವತವಾಗಿರಲು ಇದೀಗ ಎಲ್ಲಾ ಭಾಗದಲ್ಲಿ ಐನ್ ಮನೆಗಳ ಮಹತ್ವ ಅರಿತು ಅವುಗಳ ಅಭಿವೃದ್ಧಿ ಪಡಿಸುವ ಕೆಲಸ ಆಗುತ್ತಿದೆ. ಹಾಗೆಯೇ ಅಮ್ಮತ್ತೀರ ಕುಟುಂಬಸ್ಥರು ಸಹ ಐನ್‌ಮನೆಯನ್ನು ಪುನರ್ ನಿರ್ಮಾಣ ಮಾಡಿರುವುದು ಸಂತೋಷದ ವಿಚಾರ ಎಂದು ಹೇಳಿದರು.

ಕೊಡವ ಭಾಷಿಕ ಸಮಾಜದ ೨೧ ಜನಾಂಗಗಳಲ್ಲಿ ಕನಿಷ್ಟ ಜನಸಂಖ್ಯೆಯ ಸಮುದಾಯವೇ ಇರಲಿ ಅಥವಾ ಹೆಚ್ಚಿನ ಜನಸಂಖ್ಯೆಯ ಸಮುದಾಯವೇ ಇರಲಿ ಯಾವುದೇ ತಾರತಮ್ಯ ಮಾಡದೇ ವಿಶೇಷವಾಗಿ ಪರಿಗಣಿಸಿ ಜನಾಂಗದ ಸಮುದಾಯ ಭವನ, ಐನ್‌ಮನೆಗಳಿಗೆ ಹಾಗೂ ಸಮಾಜದ ಅಭಿವೃದ್ಧಿಗೆ ಸಹಕಾರ ನೀಡುತ್ತ ಬರಲಾಗುತ್ತಿದೆ ಎಂದು ಹೇಳಿದ ಅವರು, ಈ ನಾಡನ್ನು ಉಳಿಸಲು ಎಲ್ಲರೂ ಅಭಿಮಾನದಿಂದ ಒಗ್ಗಟ್ಟಾಗಿ ಸೇವೆ ಸಲ್ಲಿಸಬೇಕು ಎಂದರು.

ಗೋಣಿಕೊಪ್ಪದಲ್ಲಿರುವ ಅಮ್ಮಕೊಡವ ಸಮಾಜದ ಕಟ್ಟಡ ಪ್ರವಾಹದಿಂದ ಕುಸಿಯುವ ಆತಂಕವಿದ್ದು, ಅದರ ಸಂರಕ್ಷಣೆ ಮಾಡಲು ಎರಡು ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಸಮಾಜದ ಅಭಿವೃದ್ಧಿಗೂ ರೂ.೨೫ ಲಕ್ಷ ಅನುದಾನ ನೀಡಲಾಗಿದೆ ಎಂದು ಅವರು ಹೇಳಿದರು.

ಮತ್ತೋರ್ವ ಮುಖ್ಯ ಅತಿಥಿ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಅವರು ಮಾತನಾಡಿ, ಕೊಡವ, ಕೊಡವ ಭಾಷಿಕ ಜನಾಂಗದ ಐನ್‌ಮನೆ, ಗುರುಮನೆ, ಕಾರೋಣ ಮನೆ ಅಭಿವೃದ್ಧಿಗೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಶಾಸಕ ಪೊನ್ನಣ್ಣ ಅವರು ಅನುದಾನ ನೀಡುತ್ತಾ ಬಂದಿದ್ದಾರೆ. ಇದರಿಂದ ಬಹಳಷ್ಟು ಐನ್‌ಮನೆಗಳ ದುರಸ್ತಿ ಕೆಲಸ ಆಗುತ್ತಿದೆ. ಐನ್‌ಮನೆ ಅಭಿವೃದ್ಧಿಗೆ ಇದುವರೆಗೆ ಯಾರು ಗಮನ ಹರಿಸಲಿಲ್ಲ. ಆದರೆ ಶಾಸಕ ಪೊನ್ನಣ್ಣ ಅವರು ಐನ್‌ಮನೆಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಮುಂದಾಗುವ ಮೂಲಕ ಒಂದು ಸಂಸ್ಕೃತಿಯ ಉಳಿಕೆ ಸಾಧ್ಯವಾಗುತ್ತಿದೆ ಎಂದು ಶ್ಲಾಘಿಸಿದರು.

ಕುಟುಂಬದ ಉಪಾಧ್ಯಕ್ಷೆ ರೇವತಿ ಪರಮೇಶ್ವರ ಅವರು ಮಾತನಾಡಿ, ಶಾಸಕ ಪೊನ್ನಣ್ಣ ಅವರು ಐನ್‌ಮನೆಗೆ ರೂ.೪ ಲಕ್ಷ ಅನುದಾನ ನೀಡಿದ್ದು, ಪುನರ್ ನಿರ್ಮಿಸಲು ಅನುಕೂಲವಾಗಿದೆ. ಐನ್‌ಮನೆಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡಲು ಮನವಿ ಮಾಡಿದರು.

ವೇದಿಕೆಯಲ್ಲಿ ಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷ ಹಾಗೂ ತಲಕಾವೇರಿ ಭಾಗಮಂಡಲ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾನಂಡ ಪ್ರತ್ಯು, ತಾಲೂಕು ಬಗರ್ ಹುಕುಂ ಸಕ್ರಮೀಕರಣ ಸಮಿತಿ ಅಧ್ಯಕ್ಷ ಅಣ್ಣಳಮಾಡ ಲಾಲಾ ಅಪ್ಪಣ್ಣ, ಅಮ್ಮತ್ತೀರ ಕುಟುಂಬದ ಅಧ್ಯಕ್ಷ ಅಶೋಕ, ಉಪಾಧ್ಯಕ್ಷ ರೇವತಿ ಪರಮೇಶ್ವರ, ಕಾರ್ಯದರ್ಶಿ ಸುನಿಲ್, ಸಹ ಕಾರ್ಯದರ್ಶಿ ವಾಸುವರ್ಮ, ಹಿರಿಯರಾದ ಕಾಳಮಯ್ಯ ಹಾಜರಿದ್ದರು. ಬಿಂಬಿಕಾ, ದೀಪಿಕಾ, ದಾನಿಕ ಪ್ರಾರ್ಥಿಸಿ, ರೇವತಿ ಪರಮೇಶ್ವರ ಸ್ವಾಗತಿಸಿ, ತನು ದಿನೇಶ್ ವಂದಿಸಿದರು.