ಶ್ರೀಮಂಗಲ, ನ. ೧೭: ಐನ್ಮನೆ ಸಂಸ್ಕೃತಿಯ ಮೇಲೆ ಧಾರ್ಮಿಕ ನಂಬಿಕೆ ಇಟ್ಟಿರುವ ಕೊಡವ, ಕೊಡವ ಭಾಷಿಕ, ಮತ್ತು ಅರೆಬಾಷೆ ಜನಾಂಗದ ೨೫೦ಕ್ಕೂ ಹೆಚ್ಚು ಐನ್ಮನೆಗಳಿಗೆ, ಐನ್ಮನೆಗಳ ಕಾಯಕಲ್ಪ, ಅಭಿವೃದ್ಧಿ ಮತ್ತು ಸಂರಕ್ಷಣೆಗಾಗಿ ಅನುದಾನವನ್ನು ಕಳೆದ ಮೂರು ವರ್ಷಗಳಿಂದ ನೀಡಲಾಗಿದೆ. ಇದಲ್ಲದೆ ಮತ್ತೆ ೮೫ ಐನ್ ಮನೆಗಳಿಗೆ ಅನುದಾನ ಕೋರಿ ಮನವಿ ಬಂದಿದ್ದು, ರೂ.೨.೬೪ ಕೋಟಿ ಅನುದಾನ ನೀಡಲಾಗುತ್ತಿದೆ ಎಂದು ವೀರಾಜಪೇಟೆ ಕ್ಷೇತ್ರ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಹೇಳಿದರು.
ಹುದಿಕೇರಿಯಲ್ಲಿ ೪ ಲಕ್ಷ ಅನುದಾನದಲ್ಲಿ ಐಪುಮಾಡ ಕುಟುಂಬದ ಐನ್ಮನೆಗೆ ನಿರ್ಮಿತ ಕಾಂಕ್ರೀಟ್ ರಸ್ತೆ ಉದ್ಘಾಟಿಸಿ, ಹುದಿಕೇರಿಯಲ್ಲಿ ರೂ.೧೯.೩೪ ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ೬೬/೧೧ ಕೆವಿ ವಿದ್ಯುತ್ ಸರಬರಾಜು ಉಪ ಕೇಂದ್ರ ಮತ್ತು ಹುದಿಕೇರಿ ಪಟ್ಟಣದಲ್ಲಿ ೫೦ ಹಾಸಿಗೆಯ ಸಮುದಾಯ ಆರೋಗ್ಯ ಕೇಂದ್ರದ ಮೇಲ್ದರ್ಜೆ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿ ನಂತರ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ಮೂರು ವರ್ಷಗಳಿಂದ ಐನ್ಮನೆಗಳಿಗೆ ೩ ರಿಂದ ೫ ಲಕ್ಷದವರೆಗೆ ಅನುದಾನ ನೀಡುವ ಮೂಲಕ ಅವುಗಳ ಕಾಯಕಲ್ಪ, ಅಭಿವೃದ್ಧಿ ಮತ್ತು ಸಂರಕ್ಷಣೆಗಳಿಗಾಗಿ ಐನ್ಮನೆಗಳ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಪ್ರಾಮುಖ್ಯತೆ ನೀಡಲಾಗುತ್ತಿದೆ. ಆದರೆ ನಮ್ಮನ್ನು ಪ್ರಶ್ನಿಸುವ ಈ ಹಿಂದಿನ ಶಾಸಕರು ತಮ್ಮ ೨೦ ವರ್ಷಗಳಲ್ಲಿ ಎಷ್ಟು ಐನ್ಮನೆಗಳಿಗೆ ಅನುದಾನ ನೀಡಿದ್ದಾರೆ ಎಂದು ಪ್ರಶ್ನಿಸಿದರು.
ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ರಸ್ತೆಗಳ ಅಭಿವೃದ್ಧಿಗೆ ೨೦ ಸಾವಿರ ಕೋಟಿ ವಿಶೇಷ ಅನುದಾನ ನೀಡಲು ತೀರ್ಮಾನವಾಗಿದೆ. ಈ ಅನುದಾನದಲ್ಲಿ ಜಿಲ್ಲೆಗೂ ಪಾಲು ಬರಲಿದ್ದು, ಆದ್ಯತೆ ಮೇರೆಗೆ ರಸ್ತೆ ಕಾಮಗಾರಿ ಮಾಡುತ್ತೇವೆ. ಮುಂದೆಯೂ ಸಹ ಕ್ಷೇತ್ರದ ರಸ್ತೆಗಳಿಗೆ ಅನುದಾನ ತಂದು ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು.
ವೀರಾಜಪೇಟೆ ಕ್ಷೇತ್ರದಲ್ಲಿ ಪಿಡಬ್ಲೂö್ಯಡಿ ಇಲಾಖೆಯ ೯೮೪ ಕಿ.ಮೀ. ಮತ್ತು ಪಂಚಾಯಿತಿ ರಸ್ತೆ ೨೮೪೦ ಕಿ.ಮೀ. ಸೇರಿ ಸುಮಾರು ೩೮೦೦ ಕಿ. ಮೀ.ರಸ್ತೆ ಇರುವ ದೊಡ್ಡ ಕ್ಷೇತ್ರವಾಗಿದೆ. ಕ್ಷೇತ್ರದ ಒಂದು ತುದಿ ನಾಗರಹೊಳೆಯಿಂದ ಕರಿಕೆವರೆಗೆ ೧೪೦ ಕಿ.ಮೀ. ಅಂತರ ಇದೆ. ಭೌಗೋಳಿಕವಾಗಿ ದೊಡ್ಡ ಪ್ರದೇಶವಾಗಿದೆ. ೨೦೨೩ರಲ್ಲಿ ಜನರ ಆಶೀರ್ವಾದದಿಂದ ಶಾಸಕನಾಗಿ ಮೂರು ವರ್ಷವಾಗಿದೆ. ೨೦೨೩ ರಲ್ಲಿ ೩೮೦೦ ಕಿ. ಮೀ.ರಸ್ತೆಗಳ ಪರಿಸ್ಥಿತಿ ಹೇಗಿತ್ತು ಎಂದು ಪ್ರಶ್ನಿಸಿದ ಅವರು ನನ್ನ ಬಳಿ ರಸ್ತೆ ಅನುದಾನ ಕೇಳಿದವರೆಲ್ಲ ೨೦-೨೫ ವರ್ಷಗಳಿಂದ ರಸ್ತೆ ಸರಿ ಇಲ್ಲ ಎಂದು ಮನವಿ ಪತ್ರ ಕೊಡುತ್ತಿದ್ದಾರೆ. ಯಾರು ಸಹ ಮೂರು ವರ್ಷಗಳಿಂದ ರಸ್ತೆ ಇಲ್ಲ ಎಂದು ಹೇಳುತ್ತಿಲ್ಲ. ೨೦-೨೫ ವರ್ಷದ ಕಳಪೆ ರಸ್ತೆಗಳನ್ನು ಮೂರು ವರ್ಷಗಳಲ್ಲಿ ಸರಿಮಾಡಿಕೊಡಿ ಎಂದರೆ ಮಾಡಲು ಸಾಧ್ಯವಿದೆಯೇ? ಎಂದು ಅವರು ಪ್ರಶ್ನಿಸಿದರು.
ನಾನು ಹೇಳಿದ ೩೮೦೦ ಕಿ.ಮೀ. ರಸ್ತೆಗಳನ್ನು ಒಂದೇ ಬಾರಿಗೆ ಸರಿ ಮಾಡಲು ಸುಮಾರು ೪ ಸಾವಿರ ಕೋಟಿ ಬೇಕಾಗುತ್ತದೆ. ರಾಜ್ಯ ಸರ್ಕಾರದ ರಸ್ತೆ ಬಜೆಟ್ ಒಟ್ಟು ೧೦ ಸಾವಿರ ಕೋಟಿಯಾಗಿದೆ. ಜಿಲ್ಲೆಯ ರಸ್ತೆಗಳನ್ನೇ ಸಂಪೂರ್ಣವಾಗಿ ಸರಿ ಮಾಡಲು ರಾಜ್ಯ ರಸ್ತೆ ಅಭಿವೃದ್ಧಿಯ ಬಜೆಟ್ನ ಶೇ. ೪೦ ಅನುದಾನ ಬೇಕಾಗುತ್ತದೆ, ರಸ್ತೆಗಳೊಂದಿಗೆ ಎಲ್ಲಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಸ್ವಂತ ಹಣದಿಂದ ಖರ್ಚು ಮಾಡಿದ್ದಾರೆಯೇ?
ಚುನಾವಣೆ ಬರುವಾಗ ಆಕಾಂಕ್ಷಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ಆಕಾಂಕ್ಷಿಗಳಿಗೆ ಸ್ವಾಗತ, ಪ್ರಜಾಪ್ರಭುತ್ವದಲ್ಲಿ ಜನರು ಯಾರು ಯಾರಿಗೆ ಆಶೀರ್ವಾದ ಮಾಡುತ್ತಾರೆ ಅವರು ಶಾಸಕರಾಗುತ್ತಾರೆ. ಚುನಾವಣಾ ಆಕಾಂಕ್ಷಿಗಳೆಲ್ಲ ರಸ್ತೆ ಚಿತ್ರ ಹಾಕಿ ಪ್ರಶ್ನೆ ಮಾಡುತ್ತಿದ್ದಾರೆ. ಆಕಾಂಕ್ಷಿಗಳು ತಮ್ಮ ಸ್ವಂತ ಹಣದಲ್ಲಿ ಜನರಿಗೆ ಏನು ಮಾಡಿದ್ದಾರೆ? ಎಂದು ಪ್ರಶ್ನಿಸಿದರು.
ನಾನು ೨೦೨೦ರಲ್ಲಿ ಕೋವಿಡ್ ಸಂದರ್ಭ ೧೬ ಸಾವಿರ ಬಡ ಕುಟುಂಬಗಳಿಗೆ ಆಹಾರ ನೀಡಿದ್ದೇನೆ, ೨೪೦ ವಿದ್ಯಾರ್ಥಿನಿಯರಿಗೆ ತಲಾ ೧೦ ಸಾವಿರದಂತೆ ಪ್ರತಿ ವರ್ಷ ಮೂರು ವರ್ಷಗಳ ಕಾಲ ಯಾವುದೇ ಜಾತಿ ಧರ್ಮ ಭೇದಭಾವ ಇಲ್ಲದೆ ಶಿಕ್ಷಣಕ್ಕೆ ವಿದ್ಯಾರ್ಥಿವೇತನ ನೀಡುತ್ತಿದ್ದೇನೆ. ಕ್ಷೇತ್ರದ ಮೂರು ತಾಲೂಕುಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ೬೦ ಲಕ್ಷ ವೆಚ್ಚದಲ್ಲಿ ಮೂರು ಟ್ಯಾಂಕರ್ಗಳನ್ನು ಖರೀದಿಸಿ ನೀರು ಪೂರೈಸಲು ಕ್ರಮ ಕೈಗೊಂಡಿದ್ದೇನೆ. ಇದು ಸರ್ಕಾರದ ಹಣ ಅಲ್ಲ ನನ್ನ ಸ್ವಂತ ಟ್ರಸ್ಟ್ನಿಂದ ಒದಗಿಸಿದ್ದೇನೆ. ಚೆಂಬುವಿನಲ್ಲಿ ರಸ್ತೆ ಮತ್ತು ಬೋರ್ವೆಲ್ಗಳನ್ನು ಸಹ ಸ್ವಂತ ದುಡ್ಡಿನಲ್ಲಿ ಮಾಡಿಕೊಟ್ಟಿದ್ದೇನೆ. ಈ ಹಿಂದಿನ ಶಾಸಕರು ಹಾಗೂ ಚುನಾವಣಾ ಆಕಾಂಕ್ಷಿಗಳು ಎಷ್ಟು ಸ್ವಂತ ಹಣದಲ್ಲಿ ಜನರ ಸೇವೆ ಮಾಡಿದ್ದಾರೆ? ಎಂದು ಅವರು ಪ್ರಶ್ನಿಸಿದ್ದರು.
ಬೆಂಗಳೂರು ಕೊಡವ ಸಮಾಜಕ್ಕೆ ನಮ್ಮ ಸರ್ಕಾರ ೭ ಎಕರೆ ಜಾಗವನ್ನು ೧.೧೦ ಕೋಟಿ ದರದಲ್ಲಿ ನೀಡಿದೆ. ಆದರೆ ನಾವು ಮಾಡಿದ ಕೆಲಸವನ್ನು ಬೇರೆಯವರು ಮಾಡಿದ್ದಾರೆ ಎಂದು ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ ಅವರು ೨೦ ವರ್ಷಗಳಿಂದ ಹಿಂದಿನ ಶಾಸಕರು ಹಾಗೂ ನಾನು ಮೂರು ವರ್ಷಗಳಿಂದ ಮಾಡಿದ ಕೆಲಸಗಳ ಬಗ್ಗೆ ಬಿಳಿಹಾಳೆಯಲ್ಲಿ ಪಟ್ಟಿ ಮಾಡಲಿ, ಅದನ್ನು ಜನರ ಮುಂದೆ ಇರಿಸೋಣ ಎಂದು ಸವಾಲು ಹಾಕಿದರು.
ಈ ಸಂದರ್ಭ ಐಪುಮಾಡ ಕುಟುಂಬದ ಅಧ್ಯಕ್ಷ ರೋನಿ, ಕಾರ್ಯದರ್ಶಿ ಗಣಪತಿ, ಕುಟುಂಬದ ಹಿರಿಯರಾದ ಭೀಮಯ್ಯ, ನಂಜಪ್ಪ, ಶಾರದಾ, ಹರೀಶ್, ಕವಿತಾ, ರೀತು, ತುಳಸಿ ಸೇರಿದಂತೆ ಕುಟುಂಬಸ್ಥರು ಹಾಗೂ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ತಾಲೂಕು ಬಗರ್ ಹುಕುಂ ಸಕ್ರಮೀಕರಣ ಸಮಿತಿ ಅಧ್ಯಕ್ಷ ಅಣ್ಣಳಮಾಡ ಲಾಲ ಅಪ್ಪಣ್ಣ, ಹುದಿಕೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ಚಂಗುಲAಡ ಸೂರಜ್, ಟಿ. ಶೆಟ್ಟಿಗೇರಿ ವಲಯ ಅಧ್ಯಕ್ಷ ತೀತಿರ ಪ್ರಭು ಸುಬ್ಬಯ್ಯ, ಹುದಿಕೇರಿ ಮಹಾದೇವರ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಚಂಗುಲAಡ ಕರುಂಬಯ್ಯ, ಹಿರಿಯ ಕಾಂಗ್ರೆಸ್ ಮುಖಂಡ ಚೆಕ್ಕೇರ ವಾಸು ಕುಟ್ಟಪ್ಪ, ಅಪ್ಪಚಂಗಡ ಮೋಟಯ್ಯ, ಡಿಸಿಸಿ ಸದಸ್ಯ ಚೊಟ್ಟೆಯಂಡಮಾಡ ವಿಶು, ಯುವ ಕಾಂಗ್ರೆಸ್ ಅಧ್ಯಕ್ಷ ಚಂಗುಲAಡ ರೀಕ್ಷಿತ್, ಚೆಕ್ಕೇರ ಸುಧೀರ್, ಬಾನಂಗಡ ಅರುಣ, ಕಾಳಿಮಾಡ ರಶಿಕ್ ಕಾವೇರಪ್ಪ, ಕರ್ತಮಾಡ ನಂದಾ, ಕಾಯಪಂಡ ಸುನಿಲ್, ಅಜ್ಜಿಕುಟ್ಟಿರ ಪ್ರಶಾಂತ್, ನೂರೇರ ಮನೋಹರ್ ಸೋಮಯ್ಯ, ಎ.ಬಿ. ದರ್ಶನ್ ಸೇರಿದಂತೆ ಸ್ಥಳೀಯರು ಪಾಲ್ಗೊಂಡಿದ್ದರು.
-ಅಣ್ಣೀರ ಹರೀಶ್ ಮಾದಪ್ಪ