ಮಡಿಕೇರಿ, ನ. ೧೩: ಮಡಿಕೇರಿಯಲ್ಲಿ ಬೈಕ್ ಟ್ಯಾಕ್ಸಿಗಳು ಕಾರ್ಯ ನಿರ್ವಹಿಸಬೇಕಾದಲ್ಲಿ ಹಳದಿ ಬೋರ್ಡ್ ಅಳವಡಿಸುವುದು ಕಡ್ಡಾಯ ಎಂದು ಮಡಿಕೇರಿ ಆರ್.ಟಿ.ಒ ಸತೀಶ್ ಅವರು ತಿಳಿಸಿದ್ದಾರೆ. ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಹೆಸರಿನಲ್ಲಿ ಮಡಿಕೇರಿಯಲ್ಲಿ ಬಿಳಿ ಬೋರ್ಡ್ ಬೈಕ್‌ಗಳು ಸೇವೆ ಸಲ್ಲಿಸುತ್ತಿದ್ದುದ್ದನ್ನು ಇತ್ತೀಚೆಗೆ ನಗರದಲ್ಲಿ ಆಟೋ ಹಾಗೂ ಟ್ಯಾಕ್ಸಿ ಚಾಲಕರು ಪ್ರತಿಭಟಿಸಿ ವಿರೋಧಿಸಿದ್ದರು. ಇದಾದ ಬಳಿಕ ಮಡಿಕೇರಿಯಲ್ಲಿ ರ‍್ಯಾಪಿಡೋ ಆ್ಯಪ್ ಮೂಲಕ ಆ ಸಂಸ್ಥೆಯವರು ಬುಕ್ಕಿಂಗ್ ಅವಕಾಶವನ್ನು ಸ್ಥಗಿತಗೊಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್.ಟಿ.ಒ ಸತೀಶ್ ಅವರು, ಬಿಳಿ ಬೋರ್ಡ್ನಲ್ಲಿ ಟ್ಯಾಕ್ಸಿ ಚಾಲನೆಗೆ ಅವಕಾಶವಿಲ್ಲ. ಮಡಿಕೇರಿಯಲ್ಲಿ ರ‍್ಯಾಪಿಡೋ ಸೇವೆ ನೀಡುತ್ತಿದ್ದ ಎಲ್ಲರೂ ಬಿಳಿ ಬೋರ್ಡ್ ಬಳಸುತ್ತಿದ್ದರು. ಇವರುಗಳು ಅನುಮತಿ ಪಡೆದು ಹಳದಿ ಬೋರ್ಡ್ ಆಗಿ ಪರಿವರ್ತಿಸಿದಲ್ಲಿ ರ‍್ಯಾಪಿಡೋ ಬೈಕ್, ಇದರೊಂದಿಗೆ ಆಟೋಗಳ ಮೂಲಕವೂ ಕಾನೂನಾತ್ಮಕವಾಗಿ ಸೇವೆ ನೀಡಬಹುದಾಗಿದೆ.

ಆದರೆ ಇದೀಗ ಮಡಿಕೇರಿ ವ್ಯಾಪ್ತಿಯಲ್ಲಿ ಹಳದಿ ಬೋರ್ಡ್ಗೆ ಆರ್.ಟಿ.ಒ ವತಿಯಿಂದ ಅನುಮತಿ ಯಾರೂ ಪಡೆದಿಲ್ಲ ಹಾಗೂ ಸದ್ಯದ ಮಟ್ಟಿಗೆ ಮಡಿಕೇರಿಯಲ್ಲಿ ಅವುಗಳನ್ನು ಬುಕ್ ಮಾಡುವುದನ್ನು ಸಂಸ್ಥೆಯವರು ಸ್ಥಗಿತ ಮಾಡಿದ್ದಾರೆ. ಎಲ್ಲಾದರೂ ಮತ್ತೇ ಬಿಳಿ ಬೋರ್ಡ್ ಮೂಲಕವೇ ಸೇವೆ ಪ್ರಾರಂಭಿಸಿದಲ್ಲಿ ಅದನ್ನು ಪತ್ತೆ ಹಚ್ಚಿ ಕ್ರಮ ಜರುಗಿಸುವುದಾಗಿ ಅವರು ತಿಳಿಸಿದ್ದಾರೆ.