ಮಡಿಕೇರಿ, ನ. ೧೩: ಕೊಡಗು ಜಿಲ್ಲೆಯಲ್ಲಿ ಪ್ರವಾಸಿಗರ ಆಗಮನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪುಟ್ಟ ಜಿಲ್ಲೆಯ ಮೇಲೆ ಹಲವು ರೀತಿಯ ಒತ್ತಡವನ್ನು ಸೃಷ್ಟಿಸುತ್ತಿದೆ. ಈ ನಿಟ್ಟಿನಲ್ಲಿ ಕೆಲವೊಂದು ನಿಯಂತ್ರಣ ಕ್ರಮವಿಧಿಸಬೇಕೆಂದು ಪರಿಸರ ಮತ್ತು ಆರೋಗ್ಯ ಪ್ರತಿಷ್ಠಾನದ ಸಂಸ್ಥಾಪಕಾರ ನಿವೃತ್ತ ಕ. ಸಿ.ಪಿ. ಮುತ್ತಣ್ಣ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನಸಂಖ್ಯೆ ಸುಮಾರು ೬ ಲಕ್ಷವಿದ್ದು, ವಾರ್ಷಿಕವಾಗಿ ೪೦ ಲಕ್ಷಕ್ಕೂ ಅಧಿಕ ಪ್ರವಾಸಿಗರು ಕೊಡಗಿಗೆ ಆಗಮಿಸುತ್ತಿದ್ದಾರೆ. ಇದರಿಂದ ಕುಡಿಯುವ ನೀರು, ಸಂಚಾರ ದಟ್ಟಣೆ ಹಾಗೂ ಕಸ ವಿಲೇವಾರಿಯಂತಹ ಸಮಸ್ಯೆಗಳು ಎದುರಾಗುತ್ತಿವೆ. ಪ್ರವಾಸಿಗರ ಅನುಕೂಲಕ್ಕಾಗಿ ರೈಲು ಮತ್ತು ಚತುಷ್ಪಥ ಹೆದ್ದಾರಿಗಳ ನಿರ್ಮಾಣಕ್ಕೂ ಮುಂದಾಗಲಾಗುತ್ತಿದೆ. ಆದರೆ ಪ್ರವಾಸೋದ್ಯಮದ ಬೆಳವಣಿಗೆಯನ್ನು ನಿಯಂತ್ರಿಸುವ ಅಗತ್ಯವಿದೆ ಎಂದರು. ಜಿಲ್ಲೆಯಲ್ಲಿ ಹೊಸ ರೆಸಾರ್ಟ್ಗಳ ನಿರ್ಮಾಣಕ್ಕೆ ಅನುಮತಿ ನೀಡಬಾರದು. ಹೋಂಸ್ಟೇಗಳಿಗೆ ವಿರೋಧವಿಲ್ಲವಾದರೂ ಅವುಗಳನ್ನು ನಿಯಮಗಳ ವ್ಯಾಪ್ತಿಗೆ ತರಬೇಕು. ಅನಧಿಕೃತ ಹೋಂಸ್ಟೇಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೊಡಗಿಗೆ ಆಗಮಿಸುವ ಪ್ರವಾಸಿಗರಿಗೆ ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಿ, ದಿನವೊಂದಕ್ಕೆ ಗರಿಷ್ಠ ೧೫೦ ಮಂದಿಗೆ ಮಾತ್ರ ಪ್ರವೇಶಾವಕಾಶ ನೀಡಬೇಕು. ಪ್ರವೇಶ ಶುಲ್ಕವನ್ನು ೫೦೦ ರೂ. ಹಾಗೂ ವಾಹನ ಪಾರ್ಕಿಂಗ್ ಶುಲ್ಕವನ್ನು ೩೦೦ ರೂ.ಗೆ ಹೆಚ್ಚಿಸುವ ಮೂಲಕ ಆದಾಯ ಸಂಗ್ರಹಕ್ಕೂ ಅವಕಾಶವಿದೆ ಎಂದರು.
ಇದೇ ಸಂದರ್ಭ ರಾಜಾಸೀಟ್ ರಸ್ತೆಯಲ್ಲಿ ಮರಗಳನ್ನು ಕಡಿಯಲು ಮುಂದಾಗಿರುವುದನ್ನು ಖಂಡಿಸಿದ ಅವರು, ಮರಗಳ ಹನನಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು. ಗೋಪಿನಾಥ್ ತಿಮ್ಮಯ್ಯ ಮಾತನಾಡಿ, ಕೊಡಗಿನಲ್ಲಿ ಪ್ರವಾಸೋದ್ಯಮಕ್ಕೆ ಯಾವುದೇ ಸೂಕ್ತ ನಿಯಂತ್ರಣವಿಲ್ಲದAತಾಗಿದೆ. ಪ್ರವಾಸೋದ್ಯಮ ಲಾಭದ ಹೆಸರಿನಲ್ಲಿ ಲೂಟಿ ಮಾಡುವ ವ್ಯಾಪಾರವಾಗಿ ಬದಲಾಗುತ್ತಿದೆ. ರೆಸಾರ್ಟ್ಗಳು ಹಾಗೂ ಹೋಂಸ್ಟೇಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿದ್ದು, ಬಹುತೇಕ ಕಡೆ ನಿಯಮಗಳ ಪಾಲನೆ ಮತ್ತು ಸುರಕ್ಷತಾ ಕ್ರಮಗಳಿಗೆ ಆದ್ಯತೆ ನೀಡುತ್ತಿಲ್ಲ ಎಂದು ಆರೋಪಿಸಿದರು.
ವೈನ್ ಹಾಗೂ ಸಂಬಾರ ಪದಾರ್ಥಗಳನ್ನು ಪ್ರವಾಸಿಗರಿಗೆ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಮತ್ತೊಂದೆಡೆ ವಾಹನಗಳ ಅತಿವೇಗದ ಚಾಲನೆಯಿಂದ ಅಪಘಾತಗಳು ಸಂಭವಿಸುತ್ತಿವೆ. ಪ್ರವಾಸೋದ್ಯಮದ ಹೆಸರಿನಲ್ಲಿ ನಡೆಯುತ್ತಿರುವ ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಸೂಕ್ತ ನಿಯಂತ್ರಣ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಶಾನ್ ಬೋಪಯ್ಯ, ಫ್ರಾö್ಯಕ್ಲಿನ್, ಶಿವಶಂಕರ್ ಹಾಜರಿದ್ದರು.