ವೀರಾಜಪೇಟೆ, ನ. ೧೩: ಮಾದಕ ವ್ಯಸನಕ್ಕೆ ಒಳಗಾಗಿ ಅದರ ದಾಸರಾದರೆ ಬದುಕು ಹಾಳಾಗುವುದರೊಂದಿಗೆ ಅಮೂಲ್ಯ ಜೀವನವನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಆದ್ದರಿಂದ ಯುವಜನತೆ ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ವೈದ್ಯ ಡಾ. ಸಿ.ಎ. ಬೋಪಣ್ಣ ಎಚ್ಚರಿಸಿದರು.
ವೀರಾಜಪೇಟೆ ಕಾವೇರಿ ಕಾಲೇಜಿನ ಐಕ್ಯೂಎಸಿ, ಎನ್ಎಸ್ಎಸ್, ಎನ್ಸಿಸಿ ಹಾಗೂ ಯೂತ್ ರೆಡ್ ಕ್ರಾಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ವಿಕಸಿತ ಭಾರತಕ್ಕಾಗಿ ನಶಾಮುಕ್ತ ಯುವ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮಗೆ ಯಾವುದು ಬೇಕು, ಯಾವುದು ಬೇಡ ಎಂಬುದನ್ನು ನಿರ್ಧರಿಸುವ ಅಧಿಕಾರ ನಮ್ಮ ಕೈಯಲ್ಲಿದೆ. ಇತರರನ್ನು ಮೆಚ್ಚಿಸಲು ಅಥವಾ ಸ್ನೇಹಿತರ ಒತ್ತಾಯಕ್ಕೆ ಮಣಿದು ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಮಾದಕ ವಸ್ತುಗಳನ್ನು ಸೇವಿಸಿದರೂ, ಕ್ರಮೇಣ ವ್ಯಸನದ ಸುಳಿಗೆ ಸಿಲುಕುವ ಅಪಾಯವಿದೆ. ಒಂದು ಹಂತದಲ್ಲಿ ಅವುಗಳ ಸೇವನೆಯನ್ನು ನಿಲ್ಲಿಸಲಾಗದ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಸಿದರು.
ಗಾಂಜಾ, ಅಫೀಮು ಸೇರಿದಂತೆ ವಿವಿಧ ಮಾದಕ ವಸ್ತುಗಳು ಹಾಗೂ ತಂಬಾಕು ಉತ್ಪನ್ನಗಳ ಸೇವನೆಯಿಂದ ಮೆದುಳಿನಲ್ಲಿರುವ ಡೋಪಮೈನ್ ಎಂಬ ರಾಸಾಯನಿಕದ ಬಿಡುಗಡೆಯ ಮೇಲೆ ಪರಿಣಾಮ ಉಂಟಾಗುತ್ತದೆ. ಮೆದುಳಿನ ಪ್ರತಿಫಲ ವ್ಯವಸ್ಥೆ ಉತ್ತೇಜನಗೊಂಡು ತಾತ್ಕಾಲಿಕ ಸಂತೋಷದ ಅನುಭವ ಉಂಟಾಗುತ್ತದೆ. ಈ ಅನುಭವವನ್ನು ಮತ್ತೆ ಪಡೆಯುವ ಬಯಕೆಯಿಂದ ವ್ಯಕ್ತಿ ಪದೇಪದೆ ಮಾದಕ ವಸ್ತುಗಳ ಸೇವನೆಗೆ ಮುಂದಾಗುತ್ತಾನೆ. ಹೀಗೆ ನಿರಂತರ ಸೇವನೆಯಿಂದ ವ್ಯಸನಕ್ಕೆ ಒಳಗಾಗುತ್ತಾನೆ ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಕೆ.ಜಿ. ವೀಣಾ ಮಾತನಾಡಿ, ಯುವ ಸಮುದಾಯ ಮಾದಕ ದ್ರವ್ಯ ಹಾಗೂ ತಂಬಾಕು ಉತ್ಪನ್ನಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಹೊಂದಿರಬೇಕು. ಇವುಗಳ ಸೇವನೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಅದರಲ್ಲೂ ಮಾದಕ ವ್ಯಸನಕ್ಕೆ ಒಳಗಾದರೆ ಇಡೀ ಜೀವನವೇ ಸಂಕಷ್ಟಕ್ಕೆ ಸಿಲುಕಬಹುದು. ಆದ್ದರಿಂದ ಪ್ರತಿಯೊಂದು ಹಂತದಲ್ಲೂ ಎಚ್ಚರಿಕೆಯ ನಿರ್ಧಾರ ಕೈಗೊಳ್ಳಬೇಕು. ಒಂದು ತಪ್ಪು ಹೆಜ್ಜೆ ಭವಿಷ್ಯದಲ್ಲಿ ದೊಡ್ಡ ಪರಿಣಾಮಕ್ಕೆ ಕಾರಣವಾಗಬಹುದು ಎಂದು ತಿಳಿಸಿದರು.
ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕ ಎಲ್.ಆರ್. ರಾಘವೇಂದ್ರ, ಎನ್ಸಿಸಿ ಅಧಿಕಾರಿ ಲೆಫ್ಟಿನೆಂಟ್ ಬಿ.ಬಿ. ಬೋಜಮ್ಮ, ಎನ್ಎಸ್ಎಸ್ ಹಾಗೂ ವೈಆರ್ಸಿ ಅಧಿಕಾರಿ ಬಿ.ಬಿ. ಸುನಿಲ್ ಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು, ಎನ್ಸಿಸಿ ಕೆಡೆಟ್ಗಳು ಹಾಗೂ ಎನ್ಎಸ್ಎಸ್ ಸ್ವಯಂಸೇವಕರು ಪಾಲ್ಗೊಂಡಿದ್ದರು.