ಸೋಮವಾರಪೇಟೆ, ನ. ೧೩: ಕಳೆದ ೨೦೨೪ರ ಮೇ ೯ರಂದು ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ ಕುಂಬಾರಗಡಿಗೆ ಮೀನಾಳ ಹತ್ಯೆ ಪ್ರಕರಣದ ಆರೋಪಿ ಓಂಕಾರಪ್ಪನ ದುಷ್ಕೃತ್ಯ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ನ್ಯಾಯಾಧೀಶರು ಓಂಕಾರಪ್ಪನನ್ನು ದೋಷಿ ಎಂದು ಅಭಿಪ್ರಾಯಿಸಿದ್ದಾರೆ. ಈ ಸಂಬAಧಿತ ಶಿಕ್ಷೆ ಪ್ರಮಾಣದ ತೀರ್ಪನ್ನು ತಾ. ೧೯ಕ್ಕೆ ಕಾಯ್ದಿರಿಸಿದ್ದಾರೆ.
೨೦೨೪ರ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ದಿನದಂದೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಭಾವಿ ಪತಿಯಿಂದಲೇ ಧಾರುಣವಾಗಿ ಅಂತ್ಯಕAಡ ಬಾಲೆ ಮೀನಾಳ ಕುಟುಂಬಕ್ಕೆ ಈ ಮೂಲಕ ನ್ಯಾಯ ಲಭಿಸಿದ್ದು, ಮೀನಾಳ ಆತ್ಮಕ್ಕೆ ಶಾಂತಿಯನ್ನು ನ್ಯಾಯಾಲಯ ದೊರಕಿಸಿಕೊಟ್ಟಿದೆ ಎಂದು ಕುಟುಂಬಸ್ಥರು ಅಭಿಪ್ರಾಯಿಸಿದ್ದಾರೆ.
ಸೂರ್ಲಬ್ಬಿ ಸರ್ಕಾರಿ ಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಕುಂಬಾರಗಡಿಗೆ ಗ್ರಾಮದ ಉದಿಯಂಡ ಸುಬ್ರಮಣಿ ಹಾಗೂ ಜಾನಕಿ ದಂಪತಿಯ ಪುತ್ರಿ ಮೀನಾ (೧೬), ಹತ್ತನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಖುಷಿಯ ನಡುವೆಯೇ ಹಮ್ಮಿಯಾಲ ಗ್ರಾಮದ ಮೊಣ್ಣಂಡ ಪ್ರಕಾಶ್ ಅಲಿಯಾಸ್ ಓಂಕಾರಪ್ಪ(೩೨) ಎಂಬಾತನೊAದಿಗೆ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದಳು.
ಈ ಬಗ್ಗೆ ಮಾಹಿತಿ ಲಭಿಸುತ್ತಿದ್ದಂತೆ ಮೀನಾಳ ಕುಟುಂಬಸ್ಥರಿಗೆ ಕಾನೂನಿನ ಪಾಠ ಹೇಳಿಕೊಟ್ಟಿದ್ದು, ಅಪ್ರಾಪ್ತೆಯನ್ನು ಮದುವೆ ಮಾಡುವುದು ಕಾನೂನು ಪ್ರಕಾರ ತಪ್ಪು ಎಂದು ಸಂಬAಧಪಟ್ಟ ಇಲಾಖೆಯವರು ತಿಳಿ ಹೇಳಿದ್ದರು.
ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮೀನಾ ಓರ್ವಳೇ ೧೦ ತರಗತಿ ವಿದ್ಯಾರ್ಥಿಯಾಗಿದ್ದು, ಪ್ರಥಮ ಯತ್ನದಲ್ಲಿಯೇ ತೇರ್ಗಡೆಯಾಗುವ ಮೂಲಕ ಶಾಲೆಗೆ ಶೇ. ೧೦೦ ಫಲಿತಾಂಶಕ್ಕೂ ಕಾರಣಳಾಗಿದ್ದಳು. ಶಾಲೆಗೆ ತೆರಳಿ ಫಲಿತಾಂಶ ವೀಕ್ಷಿಸಿ ಖುಷಿಯಿಂದಲೇ ಮನೆಗೆ ಆಗಮಿಸಿದ ಮೀನಾಳ ಬದುಕು ಯಾರೂ ಊಹಿಸದ ರೀತಿಯಲ್ಲಿ ಸಂಜೆಯೇ ಬದಲಾಯಿತು.
ಮೀನಾಳ ಮೇಲಿನ ಹುಚ್ಚು ಪ್ರೀತಿಯು ಓಂಕಾರಪ್ಪನನ್ನು ರಾಕ್ಷಸೀ ಕೃತ್ಯಕ್ಕೆ ಎಡೆಮಾಡಿಕೊಟ್ಟಿತು. ಅಪ್ರಾಪ್ತೆಗೆ ಈಗಲೇ ಮದುವೆ ಮಾಡುವುದು ಬೇಡ ಎಂಬುದಾಗಿ ಇಲಾಖೆಯವರು ತಿಳಿಸಿದ್ದು, ಸದ್ಯಕ್ಕೆ ಮದುವೆ ಬೇಡ. ಮುಂದೆ ನೋಡುವ ಎಂದು ಮನೆಯವರು ಹೇಳಿದ್ದರಿಂದ ಕೋಪಗೊಂಡ ಓಂಕಾರಪ್ಪ, ಕತ್ತಿಯಿಂದ ಮೀನಾಳ ತಾಯಿ ಜಾನಕಿ ಅವರ ಮೇಲೂ ಹಲ್ಲೆ ನಡೆಸಿ ಮೀನಾಳನ್ನು ಮನೆಯಿಂದ ಸುಮಾರು ೨೦೦ ಮೀಟರ್ ದೂರಕ್ಕೆ ಎಳೆದೊಯ್ದು ದೇಹದಿಂದ ರುಂಡವನ್ನು ಬೇರ್ಪಡಿಸಿದ್ದ.
ತಲೆಯನ್ನು ಸಮೀಪದ ಕಾಡಿನೊಳಗೆ ಇಟ್ಟು ಪರಾರಿಯಾದ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದರು. ಕೃತ್ಯ ನಡೆದು ಎರಡು ದಿನಗಳ ನಂತರ ಪೊಲೀಸರಿಗೆ ಸಿಕ್ಕಿಬಿದ್ದ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಲೋಕಸಭಾ ಚುನಾವಣೆ ಸಂದರ್ಭ ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆ ಹಿನ್ನೆಲೆ ಅರಕಲಗೂಡು ಠಾಣೆಯಿಂದ ಸೋಮವಾರಪೇಟೆ ಪೊಲೀಸ್ ಠಾಣೆಗೆ ಆಗಮಿಸಿದ ಪೊಲೀಸ್ ಇನ್ಸ್ಪೆಕ್ಟರ್ ವಸಂತ್ಕುಮಾರ್ ಅವರು ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು.
ಈ ಸಂಬAಧ ಒಂದೂವರೆ ವರ್ಷದೊಳಗೆ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯ, ಓಂಕಾರಪ್ಪನ ಕೃತ್ಯ ಸಾಬೀತಾದ ಹಿನ್ನೆಲೆ, ಆರೋಪಿಯನ್ನು ಅಪರಾಧಿ ಎಂದು ಪರಿಗಣಿಸಿದ್ದು, ಶಿಕ್ಷೆ ಪ್ರಮಾಣ ಪ್ರಕಟಿಸುವ ಅಂತಿಮ ತೀರ್ಪನ್ನು ತಾ. ೧೯ಕ್ಕೆ ಕಾಯ್ದಿರಿಸಿದೆ.
ಬಾಲಕಿ ಮೀನಾಳ ಹತ್ಯೆ ಘಟನೆಯು ಇಡೀ ಜಿಲ್ಲೆ ಮಾತ್ರವಲ್ಲದೇ ರಾಜ್ಯಮಟ್ಟದಲ್ಲಿ ದಿಗ್ಭçಮೆಗೆ ಕಾರಣವಾಗಿತ್ತು. ಸುದ್ದಿ ತಿಳಿದು ಮುಟ್ಲು ಗ್ರಾಮದ ಕಾಡುಮೇಡುಗಳ ನಡುವೆ ಇರುವ ಮನೆಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡಿ ಮೀನಾಳ ದುರಂತ ಅಂತ್ಯಕ್ಕೆ ಮರುಗಿದರಲ್ಲದೇ ಕುಟುಂಬಕ್ಕೆ ಸಾಂತ್ವನ ನೀಡಿದ್ದರು.
ಅಂದಿನ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಡಿಐಜಿ, ಎಸ್.ಪಿ. ರಾಮರಾಜನ್, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆಯಾಗಿದ್ದ ಪುಷ್ಪ ಅಮರನಾಥ್ ಸೇರಿದಂತೆ ಹತ್ತಾರು ಪ್ರಮುಖರು ಕುಂಬಾರಗಡಿಗೆಗೆ ಆಗಮಿಸಿ, ಮೃತೆ ಮೀನಾಳ ಕುಟುಂಬಕ್ಕೆ ಸಾಂತ್ವನ-ಸಹಾಯ ಹಸ್ತ ಚಾಚಿದ್ದರು.
ಎಲ್ಲದಕ್ಕಿಂತ ಮಿಗಿಲಾಗಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು, ಮೀನಾಳ ಕುಟುಂಬದ ಸಂಕಷ್ಟವನ್ನು ಅರಿತು ನೂತನ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರಲ್ಲದೇ, ೧೩ ತಿಂಗಳೊಳಗೆ ಮನೆಯನ್ನೂ ನಿರ್ಮಿಸಿಕೊಟ್ಟಿದ್ದರು.
ಜೋಪಡಿಯಂತಿದ್ದ ಮನೆಯೊಳಗೆ ಮೀನಾಳು ೧೦ನೇ ತರಗತಿವರೆಗೆ ವ್ಯಾಸಂಗ ಮಾಡಿ, ಸೂರ್ಲಬ್ಬಿ ಶಾಲೆಯ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಳು. ಈ ಶಾಲೆಯ ಹತ್ತನೇ ತರಗತಿಯಲ್ಲಿದ್ದ ಓರ್ವಳೇ ವಿದ್ಯಾರ್ಥಿಯೂ ಆಗಿದ್ದರಿಂದ ಶಾಲೆಗೆ ಶೇ. ೧೦೦ ಫಲಿತಾಂಶ ಬಂದಿತ್ತು. ಗೋಡೆಗಳಿಲ್ಲದ ಜೋಪಡಿಯ ಮನೆ, ಟಾರ್ಪಲ್ ಹೊಂದಿಕೆಯೊಳಗೆ ಕುಟುಂಬ ಜೀವಿಸುತ್ತಿದ್ದುದನ್ನು ಕಣ್ಣಾರೆ ಕಂಡ ಮಂತರ್ ಗೌಡ ಅವರು, ಸಂತ್ರಸ್ಥ ಕುಟುಂಬಕ್ಕೆ ಸರ್ಕಾರದ ಹೊರತಾಗಿಯೂ ಸಹಾಯ ಹಸ್ತ ಚಾಚುವ ಬಗ್ಗೆ ತನ್ನ ಹಿತೈಷಿಗಳೊಂದಿಗೆ ಚರ್ಚೆ ನಡೆಸಿದರು.
ಇದರೊಂದಿಗೆ ಏಳುನಾಡು ಕೊಡವ ಸಮಾಜ, ಬೆಂಗಳೂರು ಕೊಡವ ಸಮಾಜದ ಪ್ರಮುಖರೊಂದಿಗೆ ಮಾತುಕತೆ ನಡೆಸಿ, ಅಂತಿಮವಾಗಿ ಸಂತ್ರಸ್ಥರ ಕುಟುಂಬಕ್ಕೆ ನೂತನ ಮನೆ ನಿರ್ಮಿಸಿಕೊಡುವ ಬಗ್ಗೆ ನಿರ್ಧಾರ ಮಾಡಿದರು.
ಅದರಂತೆ ಶಾಸಕರು ತಮ್ಮ ಹಿತೈಷಿಗಳು, ಸ್ನೇಹಿತರೊಂದಿಗೆ ತಾವೂ ಕೂಡ ದೊಡ್ಡ ಪ್ರಮಾಣದಲ್ಲಿ ಸಹಕಾರ ನೀಡಿ ರೂ. ೮.೫೦ ಲಕ್ಷ ವೆಚ್ಚದಲ್ಲಿ ಸಿಮೆಂಟ್ ಇಟ್ಟಿಗೆ, ಕಬ್ಬಿಣದ ರೂಫಿಂಗ್ನೊAದಿಗೆ ಹೆಂಚಿನ ಸುಂದರ ಮನೆ ನಿರ್ಮಿಸಿಕೊಟ್ಟು, ಸ್ಥಳೀಯ ಪ್ರಮುಖರೊಂದಿಗೆ ಸುಬ್ರಮಣಿ ಅವರ ಕುಟುಂಬಕ್ಕೆ ಕಳೆದ ತಾ. ೦೯.೦೬.೨೦೨೫ರಂದು ಮನೆಯ ಕೀಲಿಕೈಯನ್ನು ಹಸ್ತಾಂತರಿಸಿದ್ದರು. ಇಂದಿಗೂ ಮೀನಾಳ ತಂದೆ ಸುಬ್ರಮಣಿ, ತಾಯಿ ಜಾನಕಿ, ಸಹೋದರರಾದ ಸಚಿನ್, ದಿಲೀಪ್ ಅವರುಗಳು ಇದೇ ಮನೆಯಲ್ಲಿ ವಾಸಿಸುತ್ತಿದ್ದಾರೆ.
-ವಿಜಯ್