ಸಿದ್ದಾಪುರ, ನ. ೧೩; ಖಾಕಿ ಎಂದರೆ ದೇಶದ ಕಣ್ಗಾವಲು., ಖಾಕಿ ಧರಿಸಿದ ಆರಕ್ಷಕರು ಸಮಾಜದ ರಕ್ಷಕರು ಎಂಬದು ಎಲ್ಲರಿಗೂ ತಿಳಿದಿರುವ ವಿಚಾರವೇ., ಖಾಕಿ ಧರಿಸಿ ಲಾಠಿ ಹಿಡಿದ ಪೊಲೀಸರನ್ನು ಕಂಡರೆ ಸಾಮಾನ್ಯವಾಗಿ ಎಲ್ಲರಲ್ಲೂ ಒಂದು ರೀತಿಯ ಭೀತಿ ಕಾಡುತ್ತದೆ., ಆದರೆ., ಆ., ಖಾಕಿಯ ಒಳಗೂ ಒಬ್ಬ ಮನುಜನಿದ್ದಾನೆ., ಆತನೊಳಗೆ ಒಂದಿನಿತು ಮಾನವೀಯತೆ ಕೂಡ ಇರುತ್ತದೆ ಎಂಬದಕ್ಕೆ ಅಲ್ಲಲ್ಲಿ ಪೊಲೀಸರು ಮಾಡುವ ಒಳ್ಳೆಯ ಕೆಲಸ ಕಾರ್ಯಗಳು ಸಮಾಜದಲ್ಲಿ ಕಾಣಸಿಗುತ್ತವೆ,. ಇಂತಹ ಒಂದು ಉತ್ತಮ ಕಾರ್ಯಕ್ಕೆ ಸಾಕ್ಷಿಯಾಗಿದ್ದಾರೆ ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಮಂಜುನಾಥ್.,

ಬಡತನದ ಬೇಗುದಿ., ಕಷ್ಟ-ನಷ್ಟ., ನೋವು-ನಲಿವಿನ ಸಾರವುಂಡು ಬೆಳೆದು ಒಂದು ಉನ್ನತ ಹುದ್ದೆಗೇರಿದ್ದರೂ ಅದನ್ನು ಬದಿಗೊತ್ತಿ ತಂದೆ-ತಾಯಿ-ಸಹೋದರಿಯನ್ನು ಕಳೆದುಕೊಂಡು ದುಖಃದಲ್ಲಿದ್ದ ಬಾಲಕಿ ಯೋರ್ವಳ ಹುಟ್ಟು ಹಬ್ಬ ಆಚರಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಸಿದ್ದಾಪುರ ಸಮೀಪದ ಹೈಸ್ಕೂಲ್ ಪ್ಯೆಸಾರಿ ನಿವಾಸಿಯಾಗಿದ್ದ ಹಾಗೂ ಸಿದ್ದಾಪುರದ ಬಾಡಗ ಬಾಣಂಗಾಲ ಖಾಸಗಿ ಸಂಸ್ಥೆಗೆ ಸೇರಿದ ಬಾಣಂಗಾಲ ಕಾಫಿ ತೋಟದಲ್ಲಿ ಫೀಲ್ಡ್ ಆಫೀಸರ್ ಆಗಿ ಕೆಲಸ ಮಾಡಿಕೊಂಡಿದ್ದ ವಿಜೇಶ್ ಎಂಬವರು ಆಯುಧ ಪೂಜೆಯಂದು ರಾತ್ರಿ ಸಿದ್ದಾಪುರದಿಂದ ತಾವು ವಾಸ ಮಾಡುತ್ತಿದ್ದ ಖಾಸಗಿ ಸಂಸ್ಥೆಯ ವಸತಿ ಗೃಹಕ್ಕೆ ಕಾರಿನಲ್ಲಿ ತನ್ನ ಪತ್ನಿ ಹಾಗೂ ನಾಲ್ಕು ವರ್ಷದ ಪುತ್ರಿಯೊಂದಿಗೆ ತೆರಳುತ್ತಿರುವಾಗ ಕಾರು À ನಿಯಂತ್ರಣ ತಪ್ಪಿ ಕೆರೆಗೆ ಬಿದ್ದು ಮೂವರು ಸ್ಥಳದಲ್ಲಿ ಸಾವನ್ನಪ್ಪಿದ್ದರು. ಮೊದಲ ಮಗಳನ್ನು ವಿಜೇಶ್‌ನ ತಮ್ಮನ ಮನೆಯಲ್ಲಿ ರಾತ್ರಿ ಬಿಟ್ಟು ಹೋಗಿದ್ದರು. ಇದರಿಂದಾಗಿ ಮೊದಲ ಮಗಳು ದೀಕ್ಷಾ ಪ್ರಾಣಪಾಯದಿಂದ ಪಾರಾಗಿದ್ದಳು. ಚಿಕ್ಕಪ್ಪನ ಮನೆಯಲ್ಲಿ ವಾಸವಿರುವ ದೀಕ್ಷಾಳ ಹುಟ್ಟುಹಬ್ಬ ಮೊನ್ನೆ ನ.೧೧ರಂದು ಇದ್ದ ವಿಚಾರ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಅವರಿಗೆ ತಿಳಿದು ಬಂದಿದೆ. ಅವರು ದೀಕ್ಷಾಳ ಮನೆಗೆ ಹುಟ್ಟು ಹಬ್ಬದ ಪ್ರಯುಕ್ತ ಕೇಕ್ ಹಾಗೂ ಹೊಸ ಬಟ್ಟೆಗಳನ್ನು ಖರೀದಿಸಿಕೊಂಡು ಹೋಗಿದ್ದರು. ಅಲ್ಲಿ ತಂದೆ ತಾಯಿಯನ್ನು ಕಳೆದುಕೊಂಡು ದುಖಃದಲ್ಲಿದ್ದ ಬಾಲಕಿ ದೀಕ್ಷಾಳಿಗೆ ಪ್ರೀತಿಯ ಮಾತುಗಳನ್ನು ಆಡಿ ಧೈರ್ಯ ತುಂಬಿ ತನ್ನ ಪುತ್ರಿಯಂತೆ, ಬಾಲಕಿಯ ಕುಟುಂಬಸ್ಥರ ಸಮ್ಮುಖದಲ್ಲಿ ಹೊಸ ಬಟ್ಟೆಯನ್ನು ಹಾಕಿಸಿ, ಆಕೆಯೊಂದಿಗೆ ಕೇಕ್ ಕತ್ತರಿಸಿದರು. ದುಖಃದಲ್ಲಿದ್ದ ದೀಕ್ಷ ತನ್ನ ೯ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಳು. ಆ ಮನೆಯಲ್ಲಿ ಸಂಭ್ರಮದ ಕ್ಷಣಕ್ಕೆ ಠಾಣಾಧಿಕಾರಿ ಮಂಜುನಾಥ್ ಸಾಕ್ಷಿಯಾದರು. - ವಾಸು