ವೀರಾಜಪೇಟೆ, ನ. ೧೨: ಬಿಟ್ಟಂಗಾಲ ಗ್ರಾಮದ ನಾಂಗಾಲದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಹಿಳಾ ಸಮಾಜದ ನೂತನ ಕಟ್ಟಡಕ್ಕೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಭೂಮಿಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.
ಬೊಪ್ಪಂಡ ಬೇಬಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಮಾತನಾಡಿದ ಶಾಸಕ ಪೊನ್ನಣ್ಣ, ಮಹಿಳಾ ಸಮಾಜದ ಕಟ್ಟಡ ನಿರ್ಮಾಣಕ್ಕೆ ಆಯ್ಕೆ ಮಾಡಿಕೊಂಡಿರುವ ಸ್ಥಳ ಅತ್ಯಂತ ಸೂಕ್ತವಾಗಿದೆ. ಹಿಂದಿನ ಕಾಲದಲ್ಲಿ ಪೊನ್ನಕಚ್ಚಿರ ಕುಟುಂಬದ ಹಿರಿಯರು ಮಹಿಳೆಯರ ಅಭಿವೃದ್ಧಿ ಹಾಗೂ ಸಮಾಜದ ಏಳಿಗೆಯ ಉದ್ದೇಶದಿಂದ ಉದಾರವಾಗಿ ಸುಮಾರು ೫೦ ಸೆಂಟ್ ಜಾಗವನ್ನು ದಾನವಾಗಿ ನೀಡಿದ್ದರು. ಈ ಜಾಗದಲ್ಲಿದ್ದ ಹಳೆಯ ಹೆಂಚಿನ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದರಿಂದ ಇತ್ತೀಚಿನ ವರ್ಷಗಳಲ್ಲಿ ಸಭೆ-ಸಮಾರಂಭಗಳನ್ನು ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಮನಗಂಡ ನೂತನ ಆಡಳಿತ ಮಂಡಳಿಯ ಮಹಿಳಾ ಸದಸ್ಯರು ಹಳೆಯ ಕಟ್ಟಡ ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದರು.
ಸುಮಾರು ೪೦ ಲಕ್ಷ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲು ಆಡಳಿತ ಮಂಡಳಿ ಯೋಜನೆ ರೂಪಿಸಿದೆ. ಈ ಯೋಜನೆಗೆ ಸರ್ಕಾರದ ವತಿಯಿಂದ ಅಗತ್ಯ ಅನುದಾನ ಒದಗಿಸುವುದರೊಂದಿಗೆ ವೈಯಕ್ತಿಕವಾಗಿಯೂ ನೆರವು ನೀಡುವುದಾಗಿ ಶಾಸಕ ಪೊನ್ನಣ್ಣ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಮಹಿಳಾ ಸಮಾಜದ ಸಮೀಪದಲ್ಲಿರುವ ಕಲ್ತೋಡು ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ಯಾನ್ಸಿ ಲೋಬೋ ಹಾಗೂ ಶಿಕ್ಷಕಿ ಗೌರಿ ಅವರು ಶಾಲೆಯಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ ಕುರಿತು ಶಾಸಕರ ಗಮನ ಸೆಳೆದು ಮನವಿ ಸಲ್ಲಿಸಿದರು. ಶಾಲಾ ಮಕ್ಕಳ ಹಿತದೃಷ್ಟಿಯಿಂದ ಸಮಸ್ಯೆಯನ್ನು ಶೀಘ್ರ ಪರಿಹರಿಸುವುದಾಗಿ ಶಾಸಕರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಮಹಿಳೆ ಕುಪ್ಪಂಡ ವೀಣಾ ಹಾಗೂ ಊರುತಕ್ಕ ಚೇಂದ್ರಿಮಾಡ ರವಿ ಪೊನ್ನಪ್ಪ ಅವರು ಮಹಿಳಾ ಸಮಾಜದ ಚಟುವಟಿಕೆಗಳ ಕುರಿತು ಮಾತನಾಡಿದರು.
ಮಹಿಳಾ ಸಮಾಜದ ಅಧ್ಯಕ್ಷೆ ಚೇಮಿರ ಮಿಂಚು, ಕಾರ್ಯದರ್ಶಿ ರೂಪ, ಖಜಾಂಚಿ ಚೇಂದ್ರಿಮಾಡ ಮೈನ ಕಾವೇರಪ್ಪ, ಸದಸ್ಯರಾದ ಯಶೋಧ, ಪವಿನ, ಮಾಜಿ ಅಧ್ಯಕ್ಷೆ ಬುಟ್ಟಿಯಂಡ ಸೀತಮ್ಮ, ಸೀತಾರ, ಕಾವ್ಯ ಸೇರಿದಂತೆ ಸಮಾಜದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಜೋಕಿಮ್, ಬಿಟ್ಟಂಗಾಲ ವಲಯ ಅಧ್ಯಕ್ಷ ಲೋಹಿತ್, ಪಕ್ಷದ ಮುಖಂಡ ಕಂಜಿತAಡ ಪೂವಣ್ಣ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಪಕ್ಷದ ಪ್ರಮುಖರು ಭಾಗವಹಿಸಿದ್ದರು.