ನಾಪೋಕ್ಲು, ನ. ೧೨: ಮದೆ ಗ್ರಾಮದ ಸಾಲಪ್ಪು ಭಾಗದ ರಸ್ತೆ ಅಭಿವೃದ್ಧಿಪಡಿಸಿ ಸುಸಜ್ಜಿತ ಕಾಂಕ್ರೀಟ್ ರಸ್ತೆ ನಿರ್ಮಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಿದರು.
ಶಾಸಕರ ಗೃಹ ಕಚೇರಿಯಲ್ಲಿ ಭೇಟಿಯಾದ ಗ್ರಾಮಸ್ಥರು ಮನವಿ ಪತ್ರವನ್ನು ಹಸ್ತಾಂತರಿಸಿದರು. ಮದೆ ಗ್ರಾಮದ ಸಾಲಪ್ಪು ಭಾಗದ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ಜನರು ಹಾಗೂ ವಾಹನಗಳು ಸಂಚರಿಸುತ್ತಿದ್ದು, ಹದಗೆಟ್ಟ ರಸ್ತೆಯಿಂದಾಗಿ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ರಸ್ತೆಯನ್ನು ತಕ್ಷಣ ಅಭಿವೃದ್ಧಿಪಡಿಸಿ ಸುಸಜ್ಜಿತ ಕಾಂಕ್ರೀಟ್ ರಸ್ತೆ ನಿರ್ಮಿಸಿಕೊಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು.
ಗ್ರಾಮಸ್ಥರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕ ಎ.ಎಸ್. ಪೊನ್ನಣ್ಣ ಅವರು, ಈ ಬಾರಿ ಮುಖ್ಯಮಂತ್ರಿಗಳಿAದ ಬಿಡುಗಡೆಯಾಗಿರುವ ವಿಶೇಷ ಅನುದಾನದಲ್ಲಿ ರಸ್ತೆ ಕಾಮಗಾರಿಯನ್ನು ಸೇರ್ಪಡೆಗೊಳಿಸಿ ಶೀಘ್ರ ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಗ್ರಾಮಸ್ಥರಾದ ಪಳಂಗೋಟು ಜಗದೀಶ್, ಡಾಲು, ಪಾಪುರಾಜ್, ಜಯಪ್ರಕಾಶ್, ಕುಡಿಯರ ಮನು, ತಳೂರು ನಾಣಯ್ಯ, ತಳೂರು ಜಗದೀಶ್, ಗಾಳಿಕುಂದ ಸತ್ಯೇಶ್, ಚೆನ್ನಪ್ಪ ಪೂಜಾರಿ, ಪಳಂಗೋಟು ವೇಣು ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.