ಮಡಿಕೇರಿ, ನ. ೧೧: ಇಂಧನಕ್ಕೆ ಎಥನಾಲ್ ಮಿಶ್ರಣದ ಹೆಸರಿನಲ್ಲಿ ಜನಸಾಮಾನ್ಯರ ಹಣವನ್ನು ಕೇಂದ್ರ ಸರಕಾರ ಲೂಟಿ ಮಾಡುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷö್ಮಣ್ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ನಿತಿನ್ ಗಡ್ಕರಿ ರೂಪಿಸಿದ ಕಾನೂನಿನ ಮೂಲಕ ಪರಿಸರ ಸಂರಕ್ಷಣೆಯ ನೆಪದಲ್ಲಿ ಪೆಟ್ರೋಲ್ಗೆ ಎಥನಾಲ್ ಮಿಶ್ರಣ ಮಾಡುವ ನೀತಿಯನ್ನು ಜಾರಿಗೊಳಿಸಲಾಗಿದೆ. ಯಾವುದೇ ಸಮಗ್ರ ಚರ್ಚೆ ನಡೆಸದೆ ಈ ಕಾನೂನು ರೂಪಿಸಲಾಗಿದೆ. ದೇಶದಲ್ಲಿ ವಾರ್ಷಿಕವಾಗಿ ಸುಮಾರು ೬,೨೦೦ ಕೋಟಿ ಲೀಟರ್ ಇಂಧನ ಬಳಕೆಯಾಗುತ್ತಿದ್ದು, ಇದರಲ್ಲಿ ೧,೦೮೯ ಕೋಟಿ ಲೀಟರ್ ಎಥನಾಲ್ ಮಿಶ್ರಣ ಮಾಡಲಾಗುತ್ತಿದೆ. ಪ್ರತಿ ಲೀಟರ್ ಇಂಧನದಲ್ಲಿ ಶೇ.೩೦ರಷ್ಟು ಎಥನಾಲ್ ಮಿಶ್ರಣವಾಗುತ್ತಿರುವುದರಿಂದ ಗ್ರಾಹಕರಿಗೆ ದೊರೆಯುವ ನೈಜ ಇಂಧನದ ಪ್ರಮಾಣ ಕಡಿಮೆಯಾಗುತ್ತಿದೆ. ಈ ಇಂಧನವನ್ನು ೯೮ ರೂ.ಗೆ ಮಾರಾಟ ಮಾಡಬಹುದಾಗಿದ್ದರೂ, ಸುಮಾರು ೧.೬೪ ಲಕ್ಷ ಕೋಟಿ ರೂ. ಮೊತ್ತದ ಅವ್ಯವಹಾರ ನಡೆಯುತ್ತಿದೆ ಎಂದು ದೂರಿದರು.
ನಿತಿನ್ ಗಡ್ಕರಿ ಅವರ ಕುಟುಂಬದ ಸದಸ್ಯರು ಎಥನಾಲ್ ಉತ್ಪಾದನಾ ಕಂಪನಿಗಳನ್ನು ಹೊಂದಿದ್ದು, ಈ ಮಿಶ್ರಣ ನೀತಿಯಿಂದ ಅವರಿಗೆ ಲಾಭವಾಗುತ್ತಿದೆ ಎಂದು ಆರೋಪಿಸಿದರು. ೨೦೨೫ರ ನಂತರ ತಯಾರಾದ ವಾಹನಗಳು ಶೇ.೨೦ರಷ್ಟು ಎಥನಾಲ್ ಮಿಶ್ರಣದ ಇಂಧನ ಬಳಸುವ ಸಾಮರ್ಥ್ಯ ಹೊಂದಿದ್ದರೂ, ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಎಥನಾಲ್ ಮಿಶ್ರಣ ಮಾಡಲಾಗುತ್ತಿದೆ. ೬೮ ಮಾದರಿಗಳ ಪರೀಕ್ಷೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥನಾಲ್ ಬಳಕೆಯಾಗಿರುವುದು ಕಂಡುಬAದಿದೆ. ಇದರಿಂದ ವಾಹನಗಳ ಬಿಡಿಭಾಗಗಳು ಹಾಳಾಗುತ್ತಿದ್ದು, ಮೈಲೇಜ್ ಕೂಡ ಕಡಿಮೆಯಾಗುತ್ತಿದೆ. ಪರಿಣಾಮವಾಗಿ ದೇಶದಲ್ಲಿ ರೂ. ೬೨ ಸಾವಿರ ಕೋಟಿ ರೂ. ನಷ್ಟವಾಗಿದ್ದು, ೩೯ ಸಾವಿರ ಕೋಟಿ ರೂ. ವಾಹನಗಳ ದುರಸ್ತಿಗೆ ವೆಚ್ಚವಾಗಿದೆ ಎಂದು ತಿಳಿಸಿದರು.
ಬಸ್ ಟಿಕೆಟ್ ದರ ಏರಿಕೆ ವಿಚಾರವಾಗಿ ಮಾತನಾಡುವ ಬಿಜೆಪಿ ನಾಯಕರು ಇಂಧನ ನೀತಿಯ ಪರಿಣಾಮಗಳನ್ನು ಮರೆಮಾಚಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಇಂಧನದ ಮೇಲಿನ ವ್ಯಾಟ್ ಪ್ರಮಾಣ ಕಡಿಮೆ ಇದೆ ಎಂದರು.
ಎಥನಾಲ್ ಮಿಶ್ರಣದ ಕುರಿತು ತನಿಖಾ ಸಂಸ್ಥೆಗಳ ಮೂಲಕ ಸಮಗ್ರ ತನಿಖೆ ನಡೆಸಬೇಕು. ಇದರಿಂದ ನಷ್ಟ ಅನುಭವಿಸಿರುವ ವಾಹನ ಮಾಲೀಕರಿಗೆ ಪರಿಹಾರ ನೀಡಬೇಕು. ಪೆಟ್ರೋಲ್ ಬಂಕ್ಗಳಲ್ಲಿ ಇಂಧನದಲ್ಲಿರುವ ಎಥನಾಲ್ ಪ್ರಮಾಣವನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥನಾಲ್ ಮಿಶ್ರಣ ಮಾಡುವ ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ ಕೊಟ್ಟಮುಡಿ, ಮುಖಂಡರುಗಳಾದ ಹೆಚ್.ಎಂ. ನಂದಕುಮಾರ್, ಖಾಲಿದ್ ಹಾಜರಿದ್ದರು.