ಸಿದ್ದಾಪುರ, ನ. ೯: ಕರ್ನಾಟಕ ರಾಜ್ಯ ಸರ್ಕಾರದ ಆಡಳಿತದ ವೈಫಲ್ಯಗಳಿಂದ ಜನ ರೋಸಿ ಹೋಗಿದ್ದಾರೆ ಎಂದು ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ ಬೋಪಯ್ಯ ಅವರು ಆರೋಪ ಮಾಡಿದರು.

ಅಮ್ಮತ್ತಿ ಸಮೀಪದ ಇಂಜಿಲಗೆರೆಯ ಪುಲಿಯೇರಿ ಗ್ರಾಮದ ಎಸ್.ಎನ್.ಡಿ.ಪಿ ಶಾಖೆಯ ಸಭಾಂಗಣದಲ್ಲಿ ಬಿ.ಜೆ.ಪಿ. ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಆಡಳಿತವು ಜನ ವಿರೋಧಿ ಆಡಳಿತವಾಗಿದ್ದು ದೈನಂದಿನ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಸರ್ಕಾರದ ಆಡಳಿತದ ವಿರುದ್ಧ ಜನ ರೋಸಿಹೋಗಿದ್ದು ಮುಂದಿನ ದಿನಗಳಲ್ಲಿ ರಾಜ್ಯದ ಜನತೆಯು ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರವು ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯಿತಿಗಳಿಗೆ ಅನುದಾನ ನೀಡುತ್ತಿದ್ದು ಈ ಅನುದಾನದಲ್ಲಿ ಕಾಮಗಾರಿಗಳು ನಡೆಯುತ್ತಿದ್ದು ಇದನ್ನು ರಾಜ್ಯ ಸರ್ಕಾರವು ತಾವು ನೀಡುತ್ತಿರುವುದಾಗಿ ಸುಳ್ಳು ಮಾಹಿತಿಯನ್ನು ನೀಡಿ ಜನರ ದಿಕ್ಕನ್ನು ತಪ್ಪಿಸುತ್ತಿದೆ ಎಂದು ದೂರಿದರು. ಮತದಾರರು ಬಿಜೆಪಿ ಪಕ್ಷವನ್ನು ಇನ್ನೂ ಕೂಡ ಬಿಟ್ಟಿರುವುದಿಲ್ಲ. ಬಿ.ಜೆ.ಪಿ. ಪಕ್ಷದ ಜನರಿದ್ದು ಬಿಜೆಪಿ ಪಕ್ಷ ಆಡಳಿತದ ಅವಧಿಯಲ್ಲಿ ಎಲ್ಲಾ ಜನಾಂಗದವರಿಗೂ ಸಮಾನವಾಗಿ ಅನುದಾನಗಳನ್ನು ನೀಡುತ್ತಿದ್ದೆವು. ಯಾವುದೇ ತಾರತಮ್ಯ ಮಾಡುತ್ತಿರಲಿಲ್ಲ ಎಂದು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಇದೀಗ ಹಾಲು, ಬಸ್ಸಿನ ದರ ಏರಿಕೆ ಮಾಡಿದ್ದು ಜನಸಾಮಾನ್ಯರ ಮೇಲೆ ಹೊರೆ ಬೀಳಲಿದೆ ಎಂದು ತಿಳಿಸಿದರು. ರಾಜ್ಯ ಸರ್ಕಾರದಿಂದ ಬರಗಾಲದ ಹೆಸರಿನಲ್ಲಿ ನೀಡುತ್ತಿರುವ ಸಣ್ಣ ಪ್ರಮಾಣದ ಪರಿಹಾರಕ್ಕೆ ಹಲವಾರು ಷರತ್ತುಗಳನ್ನು ವಿಧಿಸುತ್ತಿರುವುದು ಖಂಡನೀಯ ಎಂದರು. ಬಿಜೆಪಿ ಸರ್ಕಾರವು ಅಧಿಕಾರದಲ್ಲಿರುವ ಸಂದರ್ಭದಲ್ಲಿ ರೈತರಿಗೆ ಕಾಫಿ ಹಾಗೂ ಭತ್ತದ ಕೃಷಿಕರಿಗೆ ಸುಮಾರು ರೂ.೫೦ ಸಾವಿರಕ್ಕೂ ಅಧಿಕ ಪರಿಹಾರವನ್ನು ನೀಡಲಾಗಿತ್ತು ಎಂದು ವಿವರಿಸಿದರು. ಕೇಂದ್ರ ಸರ್ಕಾರವು ಕೂಡ ಕಿಸಾನ್ ಯೋಜನೆ ಅಡಿಯಲ್ಲಿ ರೈತರಿಗೆ ನೆರವು ನೀಡುತ್ತಿದೆ ಎಂದು ಮಾಹಿತಿ ನೀಡಿದರು.

ವೀರಾಜಪೇಟೆ ತಾಲೂಕು ಬಿ.ಜೆ.ಪಿ ಮಂಡಲ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ ಮಾತನಾಡಿ, ಇತ್ತೀಚೆಗೆ ಇಂಜಿಲಗೆರೆ ಪುಲಿಯೇರಿ ಗ್ರಾಮದ ನಿವೃತ್ತ ಅಂಗನವಾಡಿ ಕಾರ್ಯಕರ್ತೆಯೊಬ್ಬರು ನಿವೃತ್ತಿ ಹೊಂದಿದ್ದು ಅವರಿಗೆ ಕ್ಷೇತ್ರದ ಶಾಸಕರು ಸನ್ಮಾನ ಮಾಡುವ ಹೆಸರಿನಲ್ಲಿ ಕ್ಷೇತ್ರದ ಶಾಸಕರ ಸಮ್ಮುಖದಲ್ಲಿ ಬಿಜೆಪಿ ಪಕ್ಷದ ಕೆಲವು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ಬಿಂಬಿಸುತ್ತಿರುವುದು ಸತ್ಯಕ್ಕೆ ದೂರವಾದ ವಿಚಾರವಾಗಿದೆ. ಇದಲ್ಲದೆ ಬಿಟ್ಟಂಗಾಲ ಭಾಗದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡ ಕಾರ್ಯಕರ್ತರು ಬಿಜೆಪಿ ಪಕ್ಷದ ಕಾರ್ಯಕರ್ತರಲ್ಲ ಎಂದು ತಿಳಿಸಿದರು.

ವೀರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿ ವಿವಿಧ ರಸ್ತೆಗಳು ಗುಂಡಿ ಹೊಂಡಗಳಿAದ ಕೂಡಿದ್ದು ವಾಹನ ಸಂಚಾರಕ್ಕೆ ಸಮಸ್ಯೆ ಆಗಿದೆ. ಮಾಜಿ ಶಾಸಕ ಕೆ.ಜಿ ಬೋಪಯ್ಯ ಅವರ ಅವಧಿಯಲ್ಲಿ ಅಮ್ಮತ್ತಿ ಹೋಬಳಿಯಲ್ಲಿ ಹೆಚ್ಚಿನ ಅನುದಾನ ತರುವ ಮೂಲಕ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.

ಅಮ್ಮತ್ತಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್.ಎಸ್. ಪ್ರಶಾಂತ್ ಮಾತನಾಡಿ, ಅಮ್ಮತ್ತಿ ಪಂಚಾಯಿತಿಯಲ್ಲಿ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಅವರ ಆಡಳಿತ ಅವಧಿಯಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಗ್ರಾಮ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದರು. ಹಲವಾರು ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ ಎಂದರು.

ಸಭೆಯಲ್ಲಿ ವೀರಾಜಪೇಟೆ ತಾಲೂಕು ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಕುಟ್ಟಂಡ ಅಜಿತ್ ಕರುಂಬಯ್ಯ, ಬಿ.ಜೆ.ಪಿ ಪಕ್ಷದ ಪದಾಧಿಕಾರಿಗಳಾದ ವಸಂತ್, ನಿತೀಶ್, ರೀಶಾ ಸುರೇಂದ್ರ, ಸುಗುಣ, ಪ್ರಸಾದ್ ಚೆಂಗಪ್ಪ , ಶಾಂತ ಇನ್ನಿತರರು ಹಾಜರಿದ್ದರು. ರೀಶಾ ಸುರೇಂದ್ರ ಸ್ವಾಗತಿಸಿ ವಂದಿಸಿದರು.