ಮುಳ್ಳೂರು, ಅ.೨೬: ಅರೆಭಾಷೆ ಗೌಡ ಸಮಾಜದ ಸದಸ್ಯರು ಮತ್ತು ಸಮುದಾಯದವರು ಸಮಾಜದ ಅಭಿವೃದ್ದಿಗೆ ಕೈಜೋಡಿಸಬೇಕು ಎಂದು ಆಲೂರು ಸಿದ್ದಾಪುರ ಅರೆಭಾಷೆ ಗೌಡ ಸಮಾಜದ ಅಧ್ಯಕ್ಷ ದೇವಾಯಿರ ಗಿರೀಶ್ ಮನವಿ ಮಾಡಿದರು. ಸಮೀಪದ ಸಂಗಯ್ಯನಪುರ ಗ್ರಾಮದಲ್ಲಿರುವ ಅರೆಭಾಷೆ ಗೌಡ ಸಮಾಜದ ಸಮುದಾಯ ಭವನದಲ್ಲಿ ನಡೆದ ಸಮಾಜದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು, ಆಲೂರುಸಿದ್ದಾಪುರ ಅರೆಭಾಷೆ ಗೌಡ ಸಮಾಜದ ವ್ಯಾಪ್ತಿಗೆ ೩೧ ಗ್ರಾಮಗಳು ಒಳಪಟ್ಟಿದ್ದು ನಮ್ಮ ಸಮಾಜದಲ್ಲಿ ೭೦೦ ಮಂದಿ ಸದಸ್ಯರಿದ್ದಾರೆ, ಆಲೂರು ಸಿದ್ದಾಪುರ ಅರೆಭಾಷೆ ಗೌಡ ಸಮಾಜದ ವತಿಯಿಂದ ಸಮುದಾಯದ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ ಜೊತೆಯಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ, ಆರೋಗ್ಯ ಶಿಬಿರಗಳು, ಸ್ವಚ್ಚತಾ ಕಾರ್ಯಕ್ರಮದಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.ಮಹಾಸಭೆಯಲ್ಲಿ ಭಾಷೆ, ಸಂಸ್ಕೃತಿ ಉಳಿಸುವ ಬಗ್ಗೆ, ಸಮಾಜದ ಬೆಳವಣಿಗೆ, ಮುಂದಿನ ದಿನದಲ್ಲಿ ಸಮಾಜಮುಖಿ ಕಾರ್ಯವನ್ನು ನಡೆಸುವ ಬಗ್ಗೆ ಹಾಗೂ ಇತರೆ ವಿಷಯಗಳ ಬಗ್ಗೆ ಚರ್ಚಿಸಲಾಯಿತು

ಸಮಾಜದ ಪ್ರಧಾನ ಕಾರ್ಯದರ್ಶಿ ಕುಯ್ಯಮುಡಿ ಜಯಕುಮಾರ್ ವಾರ್ಷಿಕ ವರದಿ ಮಂಡಿಸಿದರು. ಸಮಾಜದ ಉಪಾಧ್ಯಕ್ಷ ಭಟ್ಯನ ಈರಪ್ಪ, ಖಜಾಂಚಿ ಅಜಿರಂಗಲ ರಾಮಣ್ಣ, ಸಹ ಕಾರ್ಯದರ್ಶಿ ಪರ್ಲಕೋಟಿ ಶೈಲಾ ಸತೀಶ್ ಮತ್ತು ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಸಮಾಜದ ಸದಸ್ಯರು ಹಾಜರಿದ್ದರು.