ಮಡಿಕೇರಿ, ಅ. ೨೬: ಮಹರ್ಷಿ ವಾಲ್ಮೀಕಿಯವರು ರಚಿಸಿದ ‘ರಾಮಾಯಣ’ ಕೇವಲ ಒಂದು ಧಾರ್ಮಿಕ ಗ್ರಂಥ ಮಾತ್ರವಲ್ಲ, ಅದು ಮಾನವ ಸಮಾಜಕ್ಕೆ ಪ್ರೀತಿ, ಕರುಣೆ, ಸೌಹಾರ್ದತೆ ಮತ್ತು ಸಮರಸತೆಯ ಸಂದೇಶವನ್ನು ಸಾರುವ ಶ್ರೇಷ್ಠ ಕಾವ್ಯವಾಗಿದೆ. ಭೇದಭಾವಗಳಿಲ್ಲ. ಪ್ರತಿಯೊಬ್ಬರ ನಡುವೆ ಸಾಮರಸ್ಯ ಇರಬೇಕೆಂಬುದು ವಾಲ್ಮೀಕಿಯವರ ಮೂಲ ಆಶಯವಾಗಿದ್ದು, ಪ್ರತಿಯೊಬ್ಬರು ಅದನ್ನು ಪಾಲಿಸುವಂತಾಗಬೇಕು ಎಂದು ಪಿರಿಯಾಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ನಂಜುAಡಸ್ವಾಮಿ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಗಾಂಧಿ ಭವನದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ವಾಲ್ಮೀಕಿಯವರು ಚಿತ್ರಿಸಿದ ರಾಮರಾಜ್ಯದ ಪರಿಕಲ್ಪನೆಯೇ ಸಾಮರಸ್ಯ ಅಲ್ಲಿ ಯಾವುದೇ ರೀತಿಯ ಶೋಷಣೆ, ತಾರತಮ್ಯ ಅಥವಾ ಅನ್ಯಾಯಕ್ಕೆ ಆಸ್ಪದವಿರಲಿಲ್ಲ. ಎಲ್ಲರಿಗೂ ಸಮಾನ ಅವಕಾಶ ಮತ್ತು ನ್ಯಾಯ ದೊರೆಯುವ ಸಮಾಜವೇ ವಾಲ್ಮೀಕಿಯವರ ಕನಸಾಗಿತ್ತು. ತಮ್ಮ ಕೃತಿಯಲ್ಲಿ ಸಮಾಜದ ಪ್ರತಿಯೊಂದು ಸ್ತರದ ಜನರ ನಡುವೆ ಪರಸ್ಪರ ಗೌರವ, ಪ್ರೀತಿ ಮತ್ತು ಸೌಹಾರ್ದತೆ ಇರಬೇಕೆಂದು ಪ್ರತಿಪಾದಿಸಿದ್ದಾರೆ. ಜಾತಿ, ಕುಲ ಅಥವಾ ಅಂತಸ್ತಿನ ಆಧಾರದ ಮೇಲೆ ತಾರತಮ್ಯ ಮಾಡದೆ ಸಮಾಜವು ಒಗ್ಗಟ್ಟಿನಿಂದ ಇರಬೇಕೆಂಬುದು ಅವರ ಬಯಕೆಯಾಗಿತ್ತು. ಶ್ರೇಷ್ಠತೆ ಎಂಬುದು ಹುಟ್ಟಿನಿಂದ ಅಲ್ಲ, ಭಕ್ತಿ ಮತ್ತು ಗುಣದಿಂದ ನಿರ್ಧಾರವಾಗುತ್ತದೆ ಎಂಬುದನ್ನು ವಾಲ್ಮೀಕಿ ಅವರು ರಾಮಾಯಣದಲ್ಲಿ ತೋರಿಸಿಕೊಟ್ಟಿದ್ದಾರೆ ಎಂದರು.
ಮಾನವರಷ್ಟೇ ಅಲ್ಲದೆ, ಪ್ರಕೃತಿ ಮತ್ತು ಸಕಲ ಜೀವರಾಶಿಗಳೊಂದಿಗೆ ಮಾನವನು ಸಮರಸತೆಯಿಂದ ಬಾಳಬೇಕು ಎಂಬುದನ್ನು ವಾಲ್ಮೀಕಿಯವರು ತಮ್ಮ ಶ್ಲೋಕಗಳಲ್ಲಿ ವಿವರಿಸಿದ್ದಾರೆ. ಭಾರತೀಯ ಸಾಹಿತ್ಯ ಚರಿತ್ರೆಯಲ್ಲಿ ಮಹರ್ಷಿ ವಾಲ್ಮೀಕಿಯವರಿಗೆ ಅತ್ಯುನ್ನತ ಸ್ಥಾನವಿದೆ. ಅವರು ಕೇವಲ ಮೊದಲ ಕಾವ್ಯವನ್ನು ರಚಿಸಿದ ‘ಆದಿಕವಿ‘ ಅಷ್ಟೇ ಅಲ್ಲ, ತದನಂತರ ಬಂದ ಶ್ರೇಷ್ಠ ಕವಿಗಳು, ಸಾಹಿತಿಗಳು ಹಾಗೂ ಮಹಾಕಾವ್ಯ ರಚನೆಕಾರರಿಗೆ ದಾರಿದೀಪವಾದ ನಿಜವಾದ ಯುಗದಕವಿ ಅವರ ಅಪ್ರತಿಮ ಕಾವ್ಯಶಕ್ತಿ, ಭಾಷಾ ಶೈಲಿ ಮತ್ತು ಮಾನವೀಯ ಭಾವನೆಗಳ ಅಭಿವ್ಯಕ್ತಿ ಯುಗಯುಗಾಂತರಗಳಿAದ ಸಾಹಿತ್ಯ ಲೋಕಕ್ಕೆ ನಿರಂತರ ಸ್ಫೂರ್ತಿಯನ್ನು ತುಂಬುತ್ತಾ ಬಂದಿದೆ ಎಂದು ಬಣ್ಣಿಸಿದರು.
ಇಂದಿನ ಸ್ಪರ್ಧಾತ್ಮಕ ಹಾಗೂ ತಂತ್ರಜ್ಞಾನ ಆಧಾರಿತ ಆಧುನಿಕ ಕಾಲಘಟ್ಟದಲ್ಲಿ ಮನುಷ್ಯನು ಭೌತಿಕವಾಗಿ ಸಾಕಷ್ಟು ಮುಂದುವರಿದಿದ್ದರೂ, ಮಾನವೀಯ ಮೌಲ್ಯಗಳು, ನೈತಿಕತೆ ಮತ್ತು ಮಾನಸಿಕ ನೆಮ್ಮದಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿವೆ. ಇಂತಹ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಸಾವಿರಾರು ವರ್ಷಗಳ ಹಿಂದೆ ಮಹರ್ಷಿ ವಾಲ್ಮೀಕಿಯವರು ರಚಿಸಿದ ರಾಮಾಯಣ ಮಹಾಕಾವ್ಯವು ಇಂದಿನ ಯುವ ಪೀಳಿಗೆಗೆ ಮತ್ತು ಸಮಾಜಕ್ಕೆ ಕೈಪಿಡಿಯಂತೆ ಮಾರ್ಗದರ್ಶನ ನೀಡುತ್ತಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಮಾತನಾಡಿ, ಮಹಾನ್ ವ್ಯಕ್ತಿಗಳ ಕಾರ್ಯಕ್ರಮವನ್ನು ಒಂದು ದಿನದ ಸಮಾರಂಭವಾಗಿ ಆಚರಿಸುವುದು ಸೂಕ್ತವಲ್ಲ. ದೇಶಕ್ಕೆ ರಾಮಾಯಣ ಅಂತಹ ಮಹಾ ಕಾವ್ಯ ಕೊಟ್ಟಂತ ವಾಲ್ಮೀಕಿ ಅವರು ಪರಿವರ್ತನೆಗೆ ಸಾಕ್ಷಿಯಾಗಿದ್ದಾರೆ. ರಾಮಾಯಣದಲ್ಲಿ ನ್ಯಾಯ, ಧರ್ಮ, ಸತ್ಯವನ್ನು ಪಾತ್ರದ ಮೂಲಕ ಸಮಾಜಕ್ಕೆ ಸಂದೇಶ ಸಾರಿದ್ದಾರೆ. ಅವರ ಸಂದೇಶವನ್ನು ಮೈಗೂಡಿಸಿಕೊಳ್ಳುವ ಮೂಲಕ ಆರೋಗ್ಯಕರ ಸಮಾಜವನ್ನು ನಿರ್ಮಿಸಬೇಕು ಎಂದು ಕರೆ ನೀಡಿದರು.
ಸಮಾಜದ ಪ್ರಮುಖರಾದ ಕುಡಿಯರ ಮುತ್ತಪ್ಪ ಮಾತನಾಡಿ, ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತರಾಗಬೇಕು. ಮಹಾನ್ ಸಾಧಕರ ಪುಸ್ತಕಗಳನ್ನು ಓದುವಂತಾಗಬೇಕು. ಆ ಮೂಲಕ ಬುಡಕಟ್ಟು ಸಮುದಾಯದಲ್ಲಿ ನಡೆಯುವ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ಬಾಲ ಕಾರ್ಮಿಕ ಪದ್ಧತಿ ನಿಮೂರ್ಲನೆಗೆ ಮುಂದಾಗಬೇಕು ಎಂದು ಸಲಹೆ ಮಾಡಿದರು.
ಜಿಲ್ಲಾಡಳಿತದಿಂದ ಬುಡಕಟ್ಟು ಸಮುದಾಯದ ಮಹಾನ್ ನಾಯಕರ ಪುಸ್ತಕಗಳನ್ನು ಹೊರತರುವ ಮೂಲಕ ಅದನ್ನು ಅಧ್ಯಯನ ಮಾಡಲು ಅವಕಾಶ ಮಾಡಿಕೊಡಬೇಕೆಂದು ಇದೇ ಸಂದರ್ಭ ಮನವಿ ಮಾಡಿದರು.
ಪ್ರಮುಖರಾದ ಗಂಗಾಧರ್ ಮಾತನಾಡಿ, ಜಗತ್ತಿನಲ್ಲಿ ಎಲ್ಲರೂ ಎಲ್ಲವನ್ನು ಸಾಧನೆ ಮಾಡಲು ಸಾಧ್ಯವಿಲ್ಲ. ಆದರೆ ಕೆಟ್ಟ ಕೆಲಸ ಮಾಡಬಾರದು. ಸಮಾಜಕ್ಕೆ, ಸುತ್ತಮುತ್ತಲಿನ ಪರಿಸರಕ್ಕೆ ಒಳ್ಳೆ ಸಂದೇಶ ನೀಡುವ ವ್ಯಕ್ತಿಗಳಾಗಿ ಬಾಳಬೇಕು ಎಂದು ಸಲಹೆ ಮಾಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಚ್.ಎಲ್.ದಿವಾಕರ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳನ್ನು ಪ್ರತಿಯೊಬ್ಬgರೂ ಪಾಲಿ ಸುವಂತಾಗಬೇಕು. ಆ ಮೂಲಕ ಅವರ ಕನಸು ನನಸಾಗಬೇಕು. ಸಮಾಜದಲ್ಲಿ ಜಾತ್ಯತೀತತೆ ನಿರ್ಮೂಲನೆ ಆಗಬೇಕಾದರೆ ವಿದ್ಯಾರ್ಥಿಗಳು ಶಿಕ್ಷಣವಂತರಾಗಬೇಕು. ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಸಾಧಕ ವಿದ್ಯಾರ್ಥಿಗಳು ಹಾಗೂ ಅದಕ್ಕೆ ಕಾರಣಕರ್ತರಾದ ಶಿಕ್ಷಕರನ್ನು ಮತ್ತು ಹಲವು ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ನಗರಸಭೆ ಅಧ್ಯಕ್ಷೆ ಪಿ.ಕಲಾವತಿ ಮಾತನಾಡಿ, ಪ್ರತಿದಿನ ನಗರವನ್ನು ಸ್ವಚ್ಛವಾಗಿಡುವಲ್ಲಿ ಪೌರಕಾರ್ಮಿಕರ ಕಾರ್ಯ ಶ್ಲಾಘನೀಯ. ಪೌರ ಕಾರ್ಮಿಕರನ್ನು ಸದಾ ಸ್ಮರಿಸುವಂತಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಪ್ರಮುಖರಾದ ಮುತ್ತಮ್ಮ, ಪಿ.ಎಸ್.ಮುತ್ತ, ಗಪ್ಪು, ಮಾಜಿ ಸೈನಿಕರು, ಪೌರಕಾರ್ಮಿಕರು, ಆಶ್ರಮ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಇಲಾಖಾ ಸಿಬ್ಬಂದಿಗಳು ಇದ್ದರು.
ತಿತಿಮತಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಗೂ ವಂದೇ ಮಾತರಂ ಹಾಡಿದರು. ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ಎಚ್.ಸಿ.ಭಾಗೀರಥಿ ಸ್ವಾಗತಿಸಿದರು. ಪವನ್ ಕುಮಾರ್ ನಿರೂಪಿಸಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಾಲಕೃಷ್ಣ ರೈ ವಂದಿಸಿದರು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.
ಸನ್ಮಾನ: ಕಾರ್ಯಕ್ರಮದಲ್ಲಿ ಪೌರಕಾರ್ಮಿಕರು, ಮಾಜಿ ಸೈನಿಕರು, ನಿವೃತ್ತ ಉಪನ್ಯಾಸಕರು, ಎಸ್ಎಸ್ಎಲ್ಸಿ, ಪಿಯುಸಿ ಮತ್ತು ನೀಟ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಸಮುದಾಯದ ಮುಖಂಡರನ್ನು ಸನ್ಮಾನಿಸಿ, ಗೌರವಿಸಲಾಯಿತು.