ನಾಪೋಕ್ಲು, ಅ. ೨೪: ಮಡಿಕೇರಿ ನಗರದಿಂದ ಪ್ರಾರಂಭಗೊAಡು ತಾಳತ್ತಮನೆ, ಕಾಟಕೇರಿ, ಹೆರವನಾಡು, ಅವಂದೂರು, ಕೊಡಗದಾಳು ಮೂಲಕ ಚೇರಂಬಾಣೆ ತಲುಪುವ ಹಾಗೂ ಬೆಟ್ಟಗೇರಿಯಿಂದ ಅವಂದೂರು ಮಾರ್ಗವಾಗಿ ಚೇರಂಬಾಣೆಗೆ ಸಂಪರ್ಕ ಕಲ್ಪಿಸುವ ರಸ್ತೆ ತೀರಾ ಹದಗೆಟ್ಟಿದ್ದು, ತಕ್ಷಣವೇ ಡಾಂಬರೀಕರಣ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಅವಂದೂರು ಅಂಗನವಾಡಿ, ಕಿರಿಯ ಪ್ರಾಥಮಿಕ ಶಾಲೆ, ಚೇರಂಬಾಣೆಯ ರಾಜರಾಜೇಶ್ವರಿ ಶಾಲೆ, ಬೆಟ್ಟಗೇರಿಯ ಉದಯ ಪ್ರೌಢಶಾಲೆ ಹಾಗೂ ಮಡಿಕೇರಿಯ ಸಂತ ಮೈಕಲರ ಶಾಲೆಯಲ್ಲಿ ಓದುತ್ತಿರುವ ನೂರಾರು ವಿದ್ಯಾರ್ಥಿಗಳು ದಿನನಿತ್ಯ ಕಾಲ್ನಡಿಗೆ ಹಾಗೂ ಶಾಲಾ ವಾಹನಗಳ ಮೂಲಕ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ. ಅಲ್ಲದೆ, ಖಾಸಗಿ ವಾಹನಗಳು ಹಾಗೂ ಕೆ.ಎಸ್.ಆರ್.ಟಿ.ಸಿ. ಬಸ್ಗಳು ಸಹ ಈ ಮಾರ್ಗದಲ್ಲೇ ಚಲಿಸುತ್ತಿದ್ದು, ರಸ್ತೆ ಶೋಚನೀಯ ಸ್ಥಿತಿಯಲ್ಲಿರುವುದರಿಂದ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಗ್ರಾಮದಲ್ಲಿ ಹಾದುಹೋಗುವ ಸುಮಾರು ೪ ರಿಂದ ೫ ಕಿಲೋಮೀಟರ್ವರೆಗಿನ ರಸ್ತೆ ತೀರಾ ದುಸ್ಥಿತಿಗೆ ತಲುಪಿದ್ದು, ಗುಂಡಿಬಿದ್ದ ರಸ್ತೆಯಲ್ಲಿ ಸಂಚರಿಸುವುದು ನರಕಯಾತನೆಯಾಗಿದೆ. ಅನಾರೋಗ್ಯ ಪೀಡಿತರು, ಗರ್ಭಿಣಿಯರು ಹಾಗೂ ವೃದ್ಧರು ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ ತೆರಳಲು ಹರಸಾಹಸ ಪಡಬೇಕಾಗಿದೆ. ಸಣ್ಣ ಅಜಾಗರೂಕತೆಯೂ ದೊಡ್ಡ ಅವಘಡಕ್ಕೆ ಕಾರಣವಾಗುವ ಭೀತಿ ಎದುರಾಗಿದೆ.
ಶ್ರಮದಾನದ ಮೂಲಕ ರಸ್ತೆ ದುರಸ್ತಿ
ರಸ್ತೆ ದುರಸ್ತಿ ಕುರಿತಂತೆ ಹಿಂದಿನ ಶಾಸಕರಿಗೂ ಹಾಗೂ ಪ್ರಸ್ತುತ ಆಡಳಿತಾರೂಢ ಶಾಸಕರಿಗೂ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷö್ಯದಿಂದ ಬೇಸತ್ತ ಗ್ರಾಮಸ್ಥರೇ ಸ್ವತಃ ಶ್ರಮದಾನದ ಮೂಲಕ ರಸ್ತೆಯನ್ನು ತಾತ್ಕಾಲಿಕವಾಗಿ ಸಂಚಾರ ಯೋಗ್ಯಗೊಳಿಸಲು ಶ್ರಮಿಸುತ್ತಿದ್ದಾರೆ.
ಸಂಬAಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ರಸ್ತೆಯ ಸ್ಥಿತಿಗತಿಯನ್ನು ಪರಿಶೀಲಿಸಬೇಕು ಮತ್ತು ಶೀಘ್ರವಾಗಿ ಪೂರ್ಣ ಪ್ರಮಾಣದ ಡಾಂಬರೀಕರಣ ಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಅವಂದೂರು ಗ್ರಾಮಸ್ಥರು ಮನವಿ ಮಾಡಿದ್ದಾರೆ.