ಮಡಿಕೇರಿ, ಅ. ೨೪: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗಾಗಿ ಹಲವಾರು ಪ್ರಬಂಧ ಸ್ಪರ್ಧೆ, ಕವಿಗೋಷ್ಠಿ, ಕಥೆ ಬರೆಯುವ ಸ್ಪರ್ಧೆ, ಸಾಹಿತ್ಯಗೋಷ್ಠಿಗಳನ್ನು ನಡೆಸುತ್ತಿದ್ದು .ಟಿ ಶೆಟ್ಟಿಗೇರಿಯ ಕೈಬುಲಿರ ಪಾರ್ವತಿ ಬೋಪಯ್ಯ ಅವರು ತಮ್ಮ ಪತಿ ಕೈಬುಲಿರ ದಿ. ಬೋಪಯ್ಯ ಜ್ಞಾಪಕಾರ್ಥ ಸ್ಥಾಪಿಸಿರುವ ದತ್ತಿಯ ಆಶಯದಂತೆ ೨೦೨೬-೨೭ನೇ ಸಾಲಿನ ಕೊಡಗು ಜಿಲ್ಲೆಯ ಪದವಿ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಪ್ರಬಂಧ ಬರೆಯುವ ಸ್ಪರ್ಧೆ ನಡೆಸಲಾಗಿದ್ದು ಅದರಲ್ಲಿ ಪ್ರಥಮ ಸ್ಥಾನವನ್ನು ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಜಗದೀಶ್ ಟಿ.ಎ ಪಡೆದುಕೊಂಡಿದ್ದಾರೆ. ದ್ವಿತೀಯ ಸ್ಥಾನವನ್ನು ಕುಶಾಲನಗರದ ಮೂಕಾಂಬಿಕಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಯಾಶಿತಾ ಎ, ತೃತೀಯ ಸ್ಥಾನವನ್ನು ಶ್ರೀಮಂಗಲ ಪದವಿ ಪೂರ್ವ ಕಾಲೇಜಿನ ಶೋಭಾ ಪಿ.ಎಂ ಪಡೆದಿದ್ದಾರೆ.
ಕೊಡ್ಲಿಪೇಟೆ, ಬೆಸೂರು ಗ್ರಾಮದ ಶಿಕ್ಷಕಿ ಸ್ನೇಹ ಬಸಮ್ಮ ಅವರು ನಮ್ಮ ತಂದೆ ತಾಯಿ ದಿ. ಗಂಗಮ್ಮ ರಾಚಪ್ಪ ಅವರ ಜ್ಞಾಪಕಾರ್ಥ ಸ್ಥಾಪಿಸಿರುವ ದತ್ತಿಯ ಆಶಯದಂತೆ ನಡೆದ ಪದವಿ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಕನ್ನಡದ ಮೇರು ಸಾಹಿತ್ಯಗಳ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ಮಾದಾಪುರದ ಡಿ. ಚೆನ್ನಮ್ಮ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಜೆಸಿಂತಾ ಪಿ.ಜೆ ಪ್ರಥಮ, ಮಾದಾಪುರ ಡಿ. ಚೆನ್ನಮ್ಮ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಜೀನ ದ್ವಿತೀಯ ಸ್ಥಾನ, ಗೋಣಿಕೊಪ್ಪಲು ಕಾವೇರಿ ಕಾಲೇಜಿನ ವಿದ್ಯಾರ್ಥಿನಿ ಛಾಯಾದೇವಿ ಎಸ್. ಎನ್. ತೃತೀಯ ಸ್ಥಾನ ಪಡೆದಿದ್ದಾರೆ. ಇವರಿಗೆ ಮುಂದೆ ನಡೆಯುವ ಉಪನ್ಯಾಸ ಕಾರ್ಯಕ್ರಮದಲ್ಲಿ ನಗದು ಬಹುಮಾನ, ಪ್ರಶಂಸನಾ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.