ಮುಳ್ಳೂರು, ಅ. ೨೪: ಸಮಾಜದಲ್ಲಿ ಎಲ್ಲಾ ಸಮುದಾಯದವರನ್ನು ಸಮಾನವಾಗಿ ಕಾಣುತ್ತಿರುವುದು ಒಬ್ಬ ಶಾಸಕನಾಗಿ ತನ್ನ ಕರ್ತವ್ಯವಾಗಿದೆ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅಭಿಪ್ರಾಯಪಟ್ಟರು.

ಶನಿವಾರಸಂತೆ ಕೆಂಪೇಗೌಡ ಒಕ್ಕಲಿಗರ ಸಂಘದ ವತಿಯಿಂದ ನಡೆದ ಒಕ್ಕಲಿಗರ ಸಮ್ಮಿಲನ ಕ್ರೀಡಾಕೂಟದ ಸಮಾರೋಪ ಸಮಾರಂಭ ಒಕ್ಕಲಿಗ ಸಮುದಾಯದ ವಿವಿಧ ಸಾಧಕರಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಒಕ್ಕಲಿಗ ಸಮಾಜದ ನಿವೇಶನಕ್ಕೆ ಮತ್ತು ಕಟ್ಟಡ ಕಾಮಗಾರಿಗೆ ಅವಶ್ಯಕತೆ ಅನುಗುಣವಾಗಿ ಕಾನೂನುಬದ್ದವಾಗಿ ಸಹಕರಿಸಲಾಗುವುದು. ಈಗಾಗಲೇ ಕಟ್ಟಡ ನಿರ್ಮಾಣದ ರೂಪುರೇಷೆ ತಯಾರಾಗಿದ್ದು, ಈ ನಿಟ್ಟಿನಲ್ಲಿ ಸಂಘದೊAದಿಗೆ ಸಹಕರಿಸುವುದಾಗಿ ಭರವಸೆ ನೀಡಿದರು.

ಸಮಾಜಸೇವಕ ಮತ್ತು ಉದ್ಯಮಿ ಗಿರೀಶ್ ಮಲ್ಲಪ್ಪ ಮಾತನಾಡಿ, ಒಕ್ಕಲಿಗರ ಸಮಾಜದ ಪಿತಾಮಹಾ ಕೆಂಪೇಗೌಡರ ಪುತ್ಥಳಿಯನ್ನು ಮಡಿಕೇರಿಯಲ್ಲಿ ಸೂಕ್ತ ಸ್ಥಳವನ್ನು ಗುರುತಿಸಿ ಸ್ಥಾಪಿಸುವಂತೆ ಶಾಸಕರಿಗೆ ಮನವಿ ಮಾಡಿದರು.

ಈ ಸಂದರ್ಭ ಸಮುದಾಯದ ಹಿರಿಯ ಕಳಲೆ ಕೃಷ್ಣೇಗೌಡ ಕೆಲವು ಕಡೆಗೆ ಹೊಸ ಮಾರ್ಗದಲ್ಲಿ ರಸ್ತೆ ಸಾರಿಗೆ ಬಸ್ ಮಾರ್ಗವನ್ನು ಕಲ್ಪಿಸಿಕೊಡುವಂತೆ ಸಾರ್ವಜನಿಕರ ಪರವಾಗಿ ಶಾಸಕ ಡಾ. ಮಂತರ್ ಗೌಡ ಅವರಿಗೆ ಮನವಿ ಪತ್ರ ನೀಡಿದರು. ಕಾರ್ಯಕ್ರಮದಲ್ಲಿ ಸಮಾಜಸೇವಕ ಬೆಳ್ಳಿಗೌಡ ಮಾತನಾಡಿದರು.

ಸಾಧಕರಿಗೆ ಪುರಸ್ಕಾರ

ಒಕ್ಕಲಿಗರ ಸಂಘದ ವತಿಯಿಂದ ವಿವಿಧ ಕ್ಷೇತ್ರದ ಮೂವರು ಸಾಧಕರನ್ನು ಸನ್ಮಾನಿಸಲಾಯಿತು. ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟç ಪ್ರಶಸ್ತಿಗೆ ಭಾಜನರಾದ ಸಾಧಕಿ ಶನಿವಾರಸಂತೆಯ ಲಾವಣ್ಯ ಮೋಹನ್, ಭರತನಾಟ್ಯ ಕಲಾವಿದೆ ರಾಷ್ಟç ಪ್ರಶಸ್ತಿ ವಿಜೇತೆ ಸಾಧಕಿ ಶನಿವಾರಸಂತೆಯ ಶೀತಲ್ ಪೊನ್ನಪ್ಪ ಮತ್ತು ಮೂದರಹಳ್ಳಿ ನಿವಾಸಿ ಪುಟ್ಟೇಗೌಡ ಮತ್ತು ಶಿಕ್ಷಕಿ ಸೌಭಾಗ್ಯ ದಂಪತಿ ಪುತ್ರಿ ವೈದ್ಯಕೀಯ ಶಿಕ್ಷಣ ಎಂ.ಡಿ ಸ್ನಾತಕೋತ್ತರ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದುಕೊಂಡ ಸಾಧಕಿ ಡಾ. ಸೋನಿಯಾ ಇವರುಗಳನ್ನು ಶಾಸಕ ಡಾ. ಮಂತರ್ ಗೌಡ ಮತ್ತು ಒಕ್ಕಲಿಗರ ಸಂಘದ ಅಧ್ಯಕ್ಷ ಕೇಶವೇಗೌಡ ಸನ್ಮಾನಿಸಿ, ಗೌರವಿಸಿದರು.