ಶ್ರೀಮಂಗಲ, ಅ. ೨೪: ಯಾವುದೇ ಒಂದು ಜನಾಂಗದ ಭಾಷೆ ಹಾಗೂ ಸಾಹಿತ್ಯ ನಾಶವಾದರೆ ಆ ಜನಾಂಗದ ಸಂಸ್ಕೃತಿ ನಾಶವಾಗುತ್ತದೆ. ಸಂಸ್ಕೃತಿ ನಾಶವಾದರೆ ಆ ಜನಾಂಗವೇ ನಾಶವಾಗುತ್ತದೆ. ಆದ್ದರಿಂದ ಕೊಡವ ಭಾಷೆ ಹಾಗೂ ಸಾಹಿತ್ಯವನ್ನು ಉಳಿಸುವುದರೊಂದಿಗೆ ಕೊಡವ ಸಂಸ್ಕೃತಿ ಹಾಗೂ ಜನಾಂಗವನ್ನು ಉಳಿಸುವ ಸಲುವಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ ಪ್ರತೀ ಕೊಡವ ಸಮಾಜ, ಸಂಘ ಸಂಸ್ಥೆ, ಐನ್ಮನೆಗಳಲ್ಲಿ ಪುಸ್ತಕ ಪತ್ತಾಯ ಸ್ಥಾಪಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದು ೨೧ನೆ ಪುಸ್ತಕ ಪತ್ತಾಯವನ್ನು ಟಿ.ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದಲ್ಲಿ ಸ್ಥಾಪಿಸಲಾಗಿದೆ. ಹಾಗೂ ಕೊಡವ ಜಾನಪದ ಕಲೆಯನ್ನು ಪೋಷಿಸುವ ಉದ್ದೇಶದಿಂದ ನಾಲ್ಕು ದುಡಿಗಳನ್ನೂ ನೀಡಲಾಗಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯ ಕೊಂಡಿAಜಮ್ಮನ ಎಂ. ಬಾಲಕೃಷ್ಣ ಅವರು ಮಾಹಿತಿ ನೀಡಿದರು. ಟಿ.ಶೆಟ್ಟಿಗೇರಿಯಲ್ಲಿ ೨೧ನೆ ಪುಸ್ತಕ ಪತ್ತಾಯ ಸ್ಥಾಪನೆ ಹಾಗೂ ದುಡಿ ವಿತರಣೆ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ದೇಶ ಸುತ್ತಬೇಕು ಕೋಶ ಓದಬೇಕೆಂಬ ಅರ್ಥಪೂರ್ಣ ನಾಣ್ನುಡಿಯಲ್ಲಿ ಪುಸ್ತಕ ಓದುವುದರಿಂದ ಜ್ಞಾನವನ್ನು ವೃದ್ಧಿಸಬಹುದೆಂಬುದನ್ನು ತಿಳಿಸಲಾಗಿದೆ. ಆದರೆ ಜ್ಞಾನ ವೃದ್ಧಿಸಲು ಬೇಕಾದ ಪುಸ್ತಕಗಳನ್ನು ಎಲ್ಲರಿಗೂ ಒದಗಿಸಿಕೊಡದಿದ್ದರೆ ಜ್ಞಾನ ವೃದ್ಧಿಸಿಕೊಳ್ಳುವ ಅವಕಾಶಗಳು ಕೈ ತಪ್ಪಿಹೋಗುತ್ತವೆ. ಆದ್ದರಿಂದ ಎಲ್ಲರಿಗೂ ಸಮೀಪದಲ್ಲೇ ಪುಸ್ತಕ ಸಿಗುವಂತೆ ಮಾಡುವುದೇ ಈ ಪುಸ್ತಕ ಪತ್ತಾಯದ ಉದ್ದೇಶವಾಗಿದ್ದು ತಾವಳಗೇರಿ ಮೂಂದ್ ನಾಡ್ ಸಮಾಜದಲ್ಲಿ ಸ್ಥಾಪಿಸಲಾದ ಪುಸ್ತಕ ಪತ್ತಾಯವನ್ನು ಎಲ್ಲ್ಲರೂ ಉಪಯೋಗಿಸಿಕೊಳ್ಳಲು ಕರೆ ನೀಡುವುದರೊಂದಿಗೆ ಕೊಡವ ಅಕಾಡೆಮಿಯ ಇತರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾವಳಗೇರಿ ಮೂಂದ್ನಾಡ್ ಕೊಡವ ಸಮಾಜದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ, ಸಮಾಜದಲ್ಲಿ ಪುಸ್ತಕ ಪತ್ತಾಯ ಸ್ಥಾಪಿಸಿರುವುದಕ್ಕೆ ಹಾಗೂ ದುಡಿ ನೀಡಿರುವುದಕ್ಕೆ ಕೊಡವ ಅಕಾಡೆಮಿಗೆ ಧನ್ಯವಾದ ಸಮರ್ಪಿಸಿ ಅಕಾಡೆಮಿಯ ಪುಸ್ತಕದೊಂದಿಗೆ ಕೊಡವ ತಕ್ಕ್ ಎಳ್ತ್ಕಾರಡ ಕೂಟವು ಈಗಾಗಲೇ ನಮ್ಮ ಸಮಾಜಕ್ಕೆ ಹತ್ತು ಸಾವಿರ ರೂ. ಮೌಲ್ಯದ ಪುಸ್ತಕಗಳನ್ನು ನೀಡಿದ್ದು, ಈ ಎರಡೂ ಸಂಸ್ಥೆಯ ಪುಸ್ತಕಗಳನ್ನು ಸದಸ್ಯರು ಪಡೆದು ಓದಿ ತಮ್ಮ ಜ್ಞಾನ ವೃದ್ಧಿಸಿಕೊಳ್ಳಬಹುದೆಂದು ಸಲಹೆ ನೀಡಿದರು.
ಈ ಸಂದರ್ಭ ಕೊಡವ ಸಮಾಜದಲ್ಲಿ ಪುಸ್ತಕ ಪತ್ತಾಯ ಸ್ಥಾಪಿಸಲು ಹಾಗೂ ನಾಲ್ಕು ದುಡಿಗಳನ್ನು ನೀಡಲು ಶ್ರಮಿಸುವುದರೊಂದಿಗೆ ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಚೊಟ್ಟೆಯಂಡ ಸಂಜು ಕಾವೇರಪ್ಪ, ಕೊಂಡಿAಜಮ್ಮನ ಬಾಲಕೃಷ್ಣ, ಮೊಳ್ಳಕುಟ್ಟಡ ದಿನು ಬೋಜಣ್ಣ ಹಾಗೂ ನಾಯಮಂಡ ಶಿವಾಜಿಯವರನ್ನು ಕೊಡವ ಸಮಾಜದ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕೊಡವ ಸಮಾಜದ ಆಡಳಿತ ಮಂಡಳಿ ಹಾಗೂ ಸದಸ್ಯರು ಭಾಗವಹಿಸಿದ್ದರು.