ಗೋಣಿಕೊಪ್ಪಲು, ಅ.೨೪: ವಾಣಿಜ್ಯ ನಗರ ಗೋಣಿಕೊಪ್ಪದ ಅನತಿ ದೂರದಲ್ಲಿರುವ ಕಾಲೇಜು ಬಳಿಯ ಕಾಳಪ್ಪ ಕಾಲೋನಿಯಲ್ಲಿ ಶನಿವಾರ ಬೆಳಿಗ್ಗೆ ಕಾಡಾನೆ ಕಾಣಿಸಿಕೊಂಡು ಸ್ಥಳೀಯ ಬಡಾವಣೆ ನಿವಾಸಿಗಳ ಆತಂಕಕ್ಕೆ ಕಾರಣವಾಯಿತು.

ವಿಷಯ ತಿಳಿದ ಗೋಣಿಕೊಪ್ಪ ಪೊಲೀಸ್ ಠಾಣೆಯ ಅಧಿಕಾರಿಗಳು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಕಾಡಾನೆ ತೆರಳಿದ ಪ್ರದೇಶ ವೀಕ್ಷಣೆ ಮಾಡಿದರು. ಸಮೀಪದ ದಟ್ಟವಾದ ತೋಟದಿಂದ ಹೊಸೂರು ಮಾರ್ಗವಾಗಿ ದಾರಿತಪ್ಪಿ ಇತ್ತ ಕಾಡಾನೆ ಬಂದಿರಬಹುದು ಎಂದು ಊಹಿಸಲಾಗಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಆನೆಯನ್ನು ಕಾಡಿನತ್ತ ಅಟ್ಟಲು ಕಾರ್ಯಾಚರಣೆಗೆ ಮುಂದಾಗಿದ್ದಾರೆ.