ಮಡಿಕೇರಿ, ಅ. ೨೪: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕೊಡಗು ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದ ದಿ. ಬಿ.ಎಸ್. ಗೋಪಾಲಕೃಷ್ಣ ಅವರ ಹೆಸರಿನಲ್ಲಿ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಗರದ ಪತ್ರಿಕಾ ಭವನದಲ್ಲಿ ನಡೆಯಿತು.

ಪ್ರಕೃತಿ ಮತ್ತು ರಾಜಕೀಯ ಕೃತಿಗೆ ವಕೀಲ, ಸಾಹಿತಿ ಬಾಳೆಯಡ ಕಿಶನ್ ಪೂವಯ್ಯ ಅವರಿಗೆ ಗಣ್ಯರು ಪ್ರಶಸ್ತಿ ವಿತರಿಸಿದರು.

ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಬಿ.ಎಸ್. ಗೋಪಾಲಕೃಷ್ಣ ಅವರು ಸೇವಾ ಮನೋಭಾವ, ಜನಪರ ಚಿಂತನೆ ಹಾಗೂ ವೈಚಾರಿಕ ಪ್ರವೃತ್ತಿಯನ್ನು ಹೊಂದಿದ್ದವರು. ಅವರ ಮಾತಿನ ಶೈಲಿ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಪತ್ರಿಕೋದ್ಯಮದ ಜೊತೆಗೆ ಉತ್ತಮ ನಾಟಕ ಕಲಾವಿದರಾಗಿಯೂ, ಸಾಹಿತಿಯಾಗಿಯೂ ತಮ್ಮದೇ ಛಾಪು ಮೂಡಿಸಿದ್ದರು ಎಂದರು.

ಚುರುಕಿನಿಂದ ಸಾಗುತ್ತಿದ್ದ ಶಕ್ತಿ ಪತ್ರಿಕೆ ಕೆಲ ವರ್ಷ ಮಂಕಾಗಿದ್ದರೂ, ಬಳಿಕ ಗೋಪಾಲಕೃಷ್ಣ ಅವರ ಪುತ್ರರ ಸಹಕಾರದಿಂದ ಮತ್ತೆ ಪ್ರವರ್ಧಮಾನಕ್ಕೆ ಬಂದಿತು. ಅವರ ಸರಳತೆ ಹಾಗೂ ವಿನಯವಂತಿಕೆ ಎಲ್ಲರಿಗೂ ಮಾದರಿಯಾಗಿತ್ತು. ಗೋಪಾಲಕೃಷ್ಣ ಅವರ ಹೆಸರು ಚಿರಾಯುವಾಗಬೇಕು ಎಂದು ಆಶಿಸಿದರು.

ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರು ಪ್ರಶಸ್ತಿ ಪ್ರದಾನ ನೆರವೇರಿಸಿ ಮಾತನಾಡಿ, ಬಾಳೆಯಡ ಕಿಶನ್ ಪೂವಯ್ಯ ಅವರು ಬರವಣಿಗೆಯಲ್ಲಷ್ಟೇ ಅಲ್ಲ, ಜೀವನ ಸ್ಫೂರ್ತಿಗೂ ಮಾದರಿಯಾಗಿದ್ದಾರೆ. ಅವರಲ್ಲಿ ಸಕಾರಾತ್ಮಕ ಶಕ್ತಿ ಇದೆ. ನಿರಂತರವಾಗಿ ಬರೆಯುತ್ತಾ ಪ್ರಖರ ಲೇಖನಗಳ ಮೂಲಕ ಗಮನ ಸೆಳೆದಿದ್ದಾರೆ. ಬಿ.ಎಸ್. ಗೋಪಾಲಕೃಷ್ಣ ಅವರು ಕೂಡ ತಮ್ಮ ಪ್ರಖರ ಬರಹಗಳ ಮೂಲಕ ಜನರನ್ನು ಸೆಳೆದಿದ್ದರು. ವಾರಾನ್ನ ಮಾಡಿ ಶಿಕ್ಷಣ ಪಡೆದ ಗೋಪಾಲಕೃಷ್ಣ ಅವರು ಇತರರಿಗೆ ನೆರವಾಗುವ ಗುಣ ಹೊಂದಿದ್ದರು. ಬಹುಮುಖ ವ್ಯಕ್ತಿತ್ವ ಅವರದ್ದಾಗಿತ್ತು ಎಂದು ಸ್ಮರಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ, ಬಿ.ಎಸ್. ಗೋಪಾಲಕೃಷ್ಣ ಅವರು ಶಕ್ತಿ ಪತ್ರಿಕೆಯನ್ನು ಆರಂಭಿಸಿ ಜನಮನ ತಲುಪಿಸುವಲ್ಲಿ ಯಶಸ್ವಿಯಾಗಿದ್ದರು. ಪತ್ರಿಕೆಯನ್ನು ಕಟ್ಟಿಬೆಳೆಸುವ ಸಂದರ್ಭ ಎದುರಿಸಿದ ಕಷ್ಟ, ಎಡರು-ತೊಡರು ಹಾಗೂ ಪರಿಶ್ರಮದ ನಡುವೆಯೂ ಪತ್ರಿಕೆಯನ್ನು ಬೆಳೆಸಿದರು ಎಂದರು.

ಆರAಭದಲ್ಲಿ ಎರಡು ವರ್ಷಗಳ ಕಾಲ ಸ್ಪರ್ಧೆಗೆ ಸೀಮಿತವಾಗಿದ್ದ ದತ್ತಿ ಕಾರ್ಯಕ್ರಮವನ್ನು ಇದೀಗ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಪ್ರಶಸ್ತಿ ಪ್ರದಾನ ಕಾರ್ಯಕ್ರಮವಾಗಿ ಪರಿವರ್ತಿಸಲಾಗಿದೆ. ಮೊದಲ ದತ್ತಿ ಪ್ರಶಸ್ತಿಯನ್ನು ‘ಕಾವೇರಿ ವೈಭವ’ ಕೃತಿಗೆ ನಾಗೇಶ್ ಕಾಲೂರು ಹಾಗೂ ‘ವೈದ್ಯ ಕಂಡ ವಿಸ್ಮಯ’ ಕೃತಿಗೆ ಕೆ.ಬಿ. ಸೂರ್ಯಕುಮಾರ್ ಅವರಿಗೆ ನೀಡಲಾಗಿತ್ತು. ಈ ಬಾರಿ ‘ರಾಜಕೀಯ ಮತ್ತು ಪ್ರಕೃತಿ’ ಕೃತಿಗೆ ವಕೀಲ ಹಾಗೂ ಲೇಖಕ ಬಾಳೆಯಡ ಕಿಶನ್ ಪೂವಯ್ಯ ಪ್ರಶಸ್ತಿ ಪಡೆದಿದ್ದಾರೆ ಎಂದರು.

ದಾನಿಗಳು ಠೇವಣಿ ಇಟ್ಟಿರುವ ಹಣದ ಬಡ್ಡಿಯಿಂದ ದತ್ತಿ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಸ್ತುತ ೪೫ ದತ್ತಿಗಳು ಕಾರ್ಯನಿರ್ವಹಿಸುತ್ತಿದ್ದು, ಶೈಕ್ಷಣಿಕ ಕ್ಷೇತ್ರಕ್ಕೂ ಪ್ರಯೋಜನವಾಗುತ್ತಿದೆ. ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸುಮಾರು ೩,೫೦೦ ಸದಸ್ಯರಿದ್ದು, ಮುಂದಿನ ಆಡಳಿತ ಮಂಡಳಿಯೂ ದತ್ತಿ ಕಾರ್ಯಕ್ರಮವನ್ನು ಮುಂದುವರಿಸಿಕೊAಡು ಹೋಗಲಿದೆ. ಈ ಬಾರಿ ನಾಲ್ಕು ಕೃತಿಗಳು ಪ್ರಶಸ್ತಿಗೆ ಬಂದಿದ್ದವು ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ‘ರಾಜಕೀಯ ಮತ್ತು ಪ್ರಕೃತಿ’ ಕೃತಿಯ ಕುರಿತು ಮಾತನಾಡಿ, ಪುಸ್ತಕದಲ್ಲಿ ೨೭ ಲೇಖನಗಳಿದ್ದು, ರಾಜಕೀಯ ವಿಚಾರಧಾರೆಗಳೊಂದಿಗೆ ಪ್ರಕೃತಿ ಹಾಗೂ ಸಾಮಾಜಿಕ ವಿಚಾರಗಳನ್ನು ಒಳಗೊಂಡಿದೆ. ಕಿಶನ್ ಪೂವಯ್ಯ ಅವರು ಮೂರು ಕೃತಿಗಳನ್ನು ರಚಿಸಿದ್ದು, ಕೊಡವ ಮಕ್ಕಡ ಕೂಟದಿಂದ ಅವು ಪ್ರಕಟಗೊಂಡಿವೆ. ತಮ್ಮ ಲೇಖನಗಳ ಮೂಲಕ ಸಮಾಜದ ಆಗುಹೋಗುಗಳ ಕುರಿತು ಜಾಗೃತಿ ಮೂಡಿಸಿದ್ದಾರೆ ಎಂದರು.

ಹಿAದೆ ಮೌಲ್ಯಾಧಾರಿತ ರಾಜಕಾರಣಕ್ಕೆ ಆದ್ಯತೆ ಇತ್ತು. ಜನನಾಯಕರ ಮೇಲೆ ಜನರಿಗೆ ವಿಶ್ವಾಸವಿತ್ತು. ಆದರೆ ಇಂದಿನ ಸಂದರ್ಭದಲ್ಲಿ ಹೇಳುವುದೊಂದು, ಮಾಡುವುದೊಂದು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜಕೀಯ ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿ ವ್ಯವಸ್ಥೆ ಅಧಃಪತನದತ್ತ ಸಾಗುತ್ತಿರುವುದನ್ನು ಕಿಶನ್ ಅವರು ತಮ್ಮ ಕೃತಿಯಲ್ಲಿ ಲೇಖನಗಳ ಮೂಲಕ ದಾಖಲಿಸಿದ್ದಾರೆ ಎಂದು ಹೇಳಿದರು.

ಪ್ರಶಸ್ತಿ ಪುರಸ್ಕೃತ ಬಾಳೆಯಡ ಕಿಶನ್ ಪೂವಯ್ಯ ಮಾತನಾಡಿ, ಯುವಜನತೆ ಮಾದಕ ವಸ್ತುಗಳಿಂದ ದೂರವಿರಬೇಕು. ತಂದೆ-ತಾಯಿಯನ್ನು ಪ್ರಶ್ನಿಸುವ ಬದಲು ಅವರ ಮಾರ್ಗದರ್ಶನವನ್ನು ಗೌರವಿಸಬೇಕು. ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕು. ಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ದೂರವಿರಬೇಕು. ಸ್ನೇಹಿತರನ್ನು ಆಯ್ಕೆ ಮಾಡುವಾಗಲೂ ಎಚ್ಚರಿಕೆ ವಹಿಸಬೇಕು ಎಂದು ಕರೆ ನೀಡಿದರು.

ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಟಿ. ಅನಿಲ್ ಮಾತನಾಡಿ, ಕಿಶನ್ ಪೂವಯ್ಯ ಅವರೊಳಗಿರುವ ಬರಹಗಾರನನ್ನು ಶ್ಲಾಘಿಸಬೇಕು. ಅವರ ಲೇಖನಗಳಲ್ಲಿ ಮನಸ್ಸಿನ ಕಿಚ್ಚು, ಆಕ್ರೋಶ ಹಾಗೂ ಸಮಾಜ ಸುಧಾರಣೆಯ ಕಾಳಜಿ ಸಮ್ಮಿಶ್ರಗೊಂಡಿದೆ. ಸಂಘದ ಶ್ರಮದಿಂದ ಕೈಗಾರಿಕಾ ಬಡಾವಣೆ ರಸ್ತೆಗೆ ಬಿ.ಎಸ್. ಗೋಪಾಲಕೃಷ್ಣ ಅವರ ಹೆಸರಿಡಲಾಗಿದೆ. ತಮ್ಮ ಲೇಖನ ಶಕ್ತಿಯಲ್ಲಿ ಪ್ರಕಟವಾದಾಗ ಗೋಪಾಲಕೃಷ್ಣ ಅವರು ಹುರಿದುಂಬಿಸಿದ್ದರು. ಅಲ್ಲಿಂದ ಆರಂಭವಾದ ತಮ್ಮ ಬರವಣಿಗೆಯ ಪಯಣ ಇಂದಿಗೂ ಮುಂದುವರಿದಿದೆ ಎಂದು ಅವರು ಸ್ಮರಿಸಿದರು.

ಲೇಖಕರನ್ನು ಹುಟ್ಟುಹಾಕುವಲ್ಲಿ ಶಕ್ತಿ ಪತ್ರಿಕೆಯ ಕೊಡುಗೆ ಮಹತ್ವದ್ದಾಗಿದೆ. ಪತ್ರಿಕೆ ಕೇವಲ ಸುದ್ದಿಯ ಮಾಧ್ಯಮವಾಗಿರದೆ, ಬರಹಗಾರರಿಗೆ ವೇದಿಕೆಯಾಗಿ ಸಮಾಜಮುಖಿ ಚಿಂತನೆಗಳನ್ನು ಬೆಳೆಸಿದೆ ಎಂದು ಹೇಳಿದರು.

ಕರ್ನಾಟಕ ಲೇಖಕಿಯರ ಬಳಗದ ನಿರ್ದೇಶಕಿ ಆಶಾ ಹೆಗಡೆ, ಜ. ತಿಮ್ಮಯ್ಯ ಶಾಲೆ ಪ್ರಾಂಶುಪಾಲೆ ಬಾಳೆಯಡ ಸವಿತಾ ಉಪಸ್ಥಿತರಿದ್ದರು. ಪುದಿಯನೆರವನ ರೇವತಿ ರಮೇಶ್ ಸ್ವಾಗತಿಸಿದರು. ಎಚ್.ಟಿ. ಅನಿಲ್ ನಿರೂಪಿಸಿ, ವಂದಿಸಿದರು.