ಮಡಿಕೇರಿ, ಅ. ೨೪: ಸದಾ ಸುದ್ದಿ ಬೆನ್ನತ್ತಿ ಓಡುವ, ದಿನವಿಡೀ ಅಕ್ಷರಗಳೊಂದಿಗೆ ಸೆಣೆಸಾಡುವ ಪತ್ರಕರ್ತರು ಇದೀಗ ತಮ್ಮ ಕೆಲಸ-ಕಾರ್ಯಗಳನ್ನು ಕೆಲಕಾಲ ಬದಿಗೊತ್ತಿ ಬ್ಯಾಟ್-ಬಾಲ್ ಹಿಡಿದು ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ. ಕ್ರೀಡಾ ತವರು ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಹಬ್ಬಕ್ಕೆ ಸಜ್ಜಾಗಿದ್ದು, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಈ ಪ್ರತಿಷ್ಠಿತ ಪಂದ್ಯಾವಳಿಯ ಆತಿಥ್ಯ ವಹಿಸಿದೆ.

ನ. ೨ ಮತ್ತು ೩ರಂದು ನಡೆಯಲಿರುವ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಟೂರ್ನಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಪತ್ರಕರ್ತರ ತಂಡಗಳು ಪಾಲ್ಗೊಳ್ಳಲಿದ್ದು, ಎರಡು ದಿನಗಳ ಕಾಲ ಮಡಿಕೇರಿ ಕ್ರಿಕೆಟ್ ಸಂಭ್ರಮದಲ್ಲಿ ಮಿಂದೇಳಲಿದೆ.

ಸುದ್ದಿಗಾಗಿ ಓಡುವ ಹೆಜ್ಜೆಗಳು, ಮೈದಾನದಲ್ಲಿ ರನ್‌ಗಾಗಿ ಓಡಲಿದ್ದು, ಪ್ರತಿದಿನ ಸುದ್ದಿ ಬರೆಯುವ ಕೈಗಳು ಬ್ಯಾಟ್ ಹಿಡಿಯಲಿವೆ. ವೃತ್ತಿಯ ಒತ್ತಡದ ನಡುವೆ ಸಹೋದ್ಯೋಗಿಗಳೊಂದಿಗೆ ಸ್ನೇಹ, ಕ್ರೀಡಾಸ್ಫೂರ್ತಿ ಹಾಗೂ ಸಂಘಟನಾ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಪಂದ್ಯಾವಳಿ ಆಯೋಜಿಸಲಾಗಿದೆ. ಕೊಡಗಿನ ಆತಿಥ್ಯ, ಪ್ರಕೃತಿಯ ಸೊಬಗು ಹಾಗೂ ಕ್ರೀಡಾಸ್ಫೂರ್ತಿಯ ನಡುವೆ ನಡೆಯಲಿರುವ ಈ ಕ್ರಿಕೆಟ್ ಹಬ್ಬ ಪತ್ರಕರ್ತರ ಪಾಲಿಗೆ ವಿಶಿಷ್ಟ ಅನುಭವವಾಗಲಿದೆ.

೨೪ ತಂಡಗಳ ಸೆಣೆಸಾಟ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಲಾಗುತ್ತಿರುವ ಈ ಪಂದ್ಯಾವಳಿಯಲ್ಲಿ ೨೨ ಹೊರಜಿಲ್ಲೆಗಳ ಪತ್ರಕರ್ತರ ತಂಡಗಳೊAದಿಗೆ ಅತಿಥೇಯ ಕೊಡಗಿನ ಎರಡು ತಂಡಗಳು ಸೇರಿದಂತೆ ಒಟ್ಟು ೨೪ ತಂಡಗಳು ಪ್ರಶಸ್ತಿಗಾಗಿ ಸೆಣೆಸಾಡಲಿವೆ.

ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿ ಸಲು ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕಳೆದ ಎರಡು ತಿಂಗಳಿನಿAದ ನಿರಂತ ರವಾಗಿ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದೆ.

ಇದೀಗ ಕ್ರಿಕೆಟ್ ಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದು, ಪಂದ್ಯಾವಳಿಗೆ ಅಗತ್ಯವಿರುವ ಮೈದಾನ, ಪಿಚ್, ವಸತಿ, ಆಹಾರ ಸೇರಿದಂತೆ ವಿವಿಧ ವ್ಯವಸ್ಥೆಗಳ ಸಿದ್ಧತೆಗಳು ಭರದಿಂದ ಸಾಗಿವೆ.

೪ಐದನೇ ಪುಟಕ್ಕೆ

(ಮೊದಲ ಪುಟದಿಂದ)

ಕೊಡಗು ಜಿಲ್ಲೆಯ ಆತಿಥ್ಯ

ಕೊಡಗು ಜಿಲ್ಲೆಯಲ್ಲಿ ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟಕ್ಕೆ ವಿಶೇಷ ಇತಿಹಾಸವಿದ್ದು, ೨೦೧೩ರಲ್ಲಿ ಅಂದಿನ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾಗಿದ್ದ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರ ನೇತೃತ್ವದಲ್ಲಿ ಮೊದಲ ಬಾರಿಗೆ ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟ ಆಯೋಜಿಸಲಾಗಿತ್ತು. ಇದೀಗ ೧೩ ವರ್ಷಗಳ ಬಳಿಕ ಮತ್ತೊಮ್ಮೆ ಮಡಿಕೇರಿ ಈ ಕ್ರೀಡಾ ಸಂಭ್ರಮಕ್ಕೆ ಆತಿಥ್ಯ ವಹಿಸುತ್ತಿರುವುದು ವಿಶೇಷ. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ ಅವರ ಮುಂದಾಳತ್ವದಲ್ಲಿ ಈ ಬಾರಿ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದು, ಕೊಡಗಿನಲ್ಲಿ ಎರಡನೇ ಬಾರಿಗೆ ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟ ಆಯೋಜನೆಯಾಗುತ್ತಿದೆ.

ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಪ್ರತಿ ಜಿಲ್ಲೆಯಿಂದ ೧೬ ಮಂದಿ ಆಟಗಾರರು ಆಗಮಿಸಲಿದ್ದು, ೨೪ ತಂಡಗಳಿAದ ಒಟ್ಟು ೩೮೪ ಮಂದಿ ಪತ್ರಕರ್ತರು ಮೈದಾನಕ್ಕಿಳಿಯಲಿದ್ದಾರೆ. ಇವರೊಂದಿಗೆ ಅತಿಥೇಯ ಕೊಡಗಿನ ಪತ್ರಕರ್ತರು ಪಂದ್ಯಾವಳಿಯ ವಿವಿಧ ಜವಾಬ್ದಾರಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

೩ ಮೈದಾನ - ೫ ಪಿಚ್

ಲೀಗ್ ಮಾದರಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಗಾಗಿ ಮಡಿಕೇರಿಯ ಮೂರು ಪ್ರಮುಖ ಮೈದಾನಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಒಟ್ಟು ೫ ಪಿಚ್‌ಗಳಲ್ಲಿ ಪಂದ್ಯಗಳು ನಡೆಯಲಿದ್ದು, ಪಂದ್ಯಾವಳಿಯ ಸುಗಮ ನಿರ್ವಹಣೆಗೆ ಮೈದಾನ ಸಮಿತಿ ಸಿದ್ಧತೆಗಳನ್ನು ಭರದಿಂದ ಕೈಗೊಂಡಿದೆ.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನವನ್ನು ಪ್ರಮುಖ ಕ್ರೀಡಾಂಗಣವಾಗಿ ಬಳಸಿಕೊಳ್ಳಲಾಗುತ್ತಿದ್ದು, ಇಲ್ಲಿ ಎರಡು ಪಿಚ್‌ಗಳಲ್ಲಿ ಪಂದ್ಯಗಳು ನಡೆಯಲಿವೆ. ಜ. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಎರಡು ಪಿಚ್ ಹಾಗೂ ಪೊಲೀಸ್ ಕವಾಯತು ಮೈದಾನದಲ್ಲಿ ಒಂದು ಪಿಚ್ ಸಿದ್ಧಪಡಿಸಲಾಗುತ್ತಿದೆ.

ಪಂದ್ಯಾವಳಿಗೆ ದಿನಗಣನೆ ಆರಂಭ ವಾಗಿರುವ ಹಿನ್ನೆಲೆಯಲ್ಲಿ ಮೈದಾನ ಸಮಿತಿ ಪಿಚ್ ನಿರ್ಮಾಣ, ಮೈದಾನದ ಸಮತಟ್ಟು ಹಾಗೂ ಅಗತ್ಯ ಮೂಲಸೌಕರ್ಯಗಳ ಸಿದ್ಧತೆ ಸೇರಿದಂತೆ ವಿವಿಧ ಕಾರ್ಯಗಳಲ್ಲಿ ನಿರತವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ೨೪ ತಂಡಗಳ ಆಟಗಾರರಿಗೆ ಉತ್ತಮ ಕ್ರೀಡಾ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ.