ಸುಂಟಿಕೊಪ್ಪ, ಅ.೨೨: ವಾಹನ ಚಾಲಕರ ಸಂಘದ ವಾಹನ ನಿಲ್ದಾಣಕ್ಕೆ ಮೇಲ್ಚಾವಣಿ ನಿರ್ಮಾಣ ಪ್ರಗತಿಯಲ್ಲಿದ್ದು ಕೆಲವು ತಾಂತ್ರಿಕ ಕಾರಣಗಳನ್ನು ಸರಿಪಡಿಸಿಕೊಂಡು ಶೀಘ್ರದಲ್ಲೇ ಲೋಕಾರ್ಪಣೆ ಮಾಡಿಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ಗೌಡ ಹೇಳಿದರು.
ಸುಂಟಿಕೊಪ್ಪ ವಾಹನ ಚಾಲಕರ ಸಂಘದ ೫೬ನೇ ಆಯುಧಪೂಜಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಮೇಲ್ಚಾವಣಿ ಕಾಮಗಾರಿ ರೂ.೪೦ ಲಕ್ಷ ವೆಚ್ಚದಲ್ಲಿ ನಡೆಯುತ್ತಿದ್ದು, ಹೆಚ್ಚು ಅನುದಾನ ಬೇಕಾಗುವ ನಿರೀಕ್ಷೆ ಇದೆ. ಈ ಅನುದಾನವನ್ನು ತಾವು ಭರಿಸಲಿದ್ದು, ಕಾಮಗಾರಿಯನ್ನು ಆದಷ್ಟು ಶೀಘ್ರವಾಗಿ ಮುಕ್ತಾಯಗೊಳಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು. ವಾಹನ ಚಾಲಕರ ಸಂಘಕ್ಕೆ ಅದ್ಭುತವಾದ ಇತಿಹಾಸವಿದ್ದು, ವಾಹನ ಚಾಲಕರು ಬದಲಾದ ಕಾಲಘಟ್ಟದಲ್ಲಿ ಸುರಕ್ಷತೆಯಿಂದ ವಾಹನ ಚಲಿಸುವುದು, ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸವಾಗಿದ್ದು ಇದನ್ನು ಚಾಲಕರು ಮನಸ್ಸಿನಲ್ಲಿ ಇರಿಸಿಕೊಂಡು ಕರ್ತವ್ಯ ನಿರ್ವಹಿಸುವಂತೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ಸುಂಟಿಕೊಪ್ಪದವರೆ ಆದ ಅಧ್ಯಾತ್ಮಿಕ ಗುರು ರೋಶಿನಿ ರಾಮಪುರಂ ಅವರ ದಿ ಅಮರನಾಥಕೊಡ್ ಗ್ರಂಥವನ್ನು ಲೋಕಾರ್ಪಣೆಗೊಳಿಸಿದರು. ರೋಶಿನಿ ರಾಮಪುರಂ ಅವರನ್ನು ಶಾಸಕರು ಸನ್ಮಾನಿಸಿ ಗೌರವಿಸಿದರು.
ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಸುಂಟಿಕೊಪ್ಪ ವಾಹನ ಚಾಲಕರು ಮತ್ತು ಮಾಲೀಕರ ಸಂಘಕ್ಕೆ ಭವ್ಯವಾದ ಹಿರಿಮೆ ಇದೆ. ಸುಂಟಿಕೊಪ್ಪದ ಅಭಿವೃದ್ಧಿ ಹಂತಗಳಲ್ಲಿ ಸಂಘದ ಕೊಡುಗೆ ಅಪಾರವಾಗಿದೆ. ಅನೇಕ ಬೇಡಿಕೆಗಳ ಈಡೇರಿಕೆಗೆ ಈ ವೇದಿಕೆಗೆ ಅವಕಾಶ ಕಲ್ಪಿಸಿದೆ ಎಂದು ಹೇಳಿದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾಡಳಿತದ ಕಾನೂನು ಸಲಹೆಗಾರರಾದ ಎ.ಲೋಕೇಶ್ಕುಮಾರ್ ಮಾತನಾಡಿ, ಸುಂಟಿಕೊಪ್ಪ ವಾಹನ ಚಾಲಕರ ವೇದಿಕೆಯು ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದು ಮಕ್ಕಳ ಪ್ರತಿಭೆಯು ಈ ವೇದಿಕೆಯ ಮೂಲಕ ಅನಾವರಣಗೊಂಡು ದೇಶ ವಿದೇಶಗಳಲ್ಲಿ ಖ್ಯಾತಿ ಪಡೆಯುವಂತಾಗಲಿ ಎಂದು ಹಾರೈಸಿದರು.
ಸಮಾರಂಭವನ್ನು ಉದ್ದೇಶಿಸಿ ಜಿ.ಪಂ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಮಾಜಿ ಸದಸ್ಯರುಗಳಾದ ಪಿ.ಎಂ.ಲತೀಫ್, ಬಿ.ಬಿ.ಭಾರತೀಶ್, ಗ್ರಾ.ಪಂ ಮಾಜಿ ಅಧ್ಯಕ್ಷ ಪಿ.ಆರ್ ಸುನಿಲ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ವಿ.ಜಿ.ಲೋಕೇಶ್, ಎಡಿಕೇರಿ ಪ್ರಸನ್ನ, ರೋಶಿನಿ ರಾಪುರಂ, ಪ್ರಸಾದ್ಕುಟ್ಟಪ್ಪ, ಪಿ.ಎಲ್ ಹರ್ಷದ್ ಅವರುಗಳು ಮಾತನಾಡಿ ಶುಭಹಾರೈಸಿದರು.
ಇದೇ ಸಂದರ್ಭದಲ್ಲಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಪ್ರಸಾದ್ಕುಟ್ಟಪ್ಪ ಮಾತನಾಡಿ, ರೋಶನಿ ರಾಮಪುರಂ ಅವರು ತಮ್ಮ ತಂದೆಯ ಸ್ಮರಣಾರ್ಥ ಮೃತದೇಹಗಳನ್ನು ಸಂರಕ್ಷಿಸಿ ಇಡುವ ಶೀತಲೀಕರಣ ಪೆಟ್ಟಿಗೆಯನ್ನು ವಾಹನ ಚಾಲಕರ ಸಂಘಕ್ಕೆ ಕೊಡುಗೆಯಾಗಿ ನೀಡಲಿದ್ದಾರೆ ಮತ್ತು ಬಸ್ ನಿಲ್ದಾಣದಲ್ಲಿ ಶುದ್ಧ ನೀರಿನ ಘಟಕವನ್ನು ಪ್ರಾ.ಕೃ.ಪ.ಸ.ಸಂ.ನಿ. ಅಧ್ಯಕ್ಷ ಜೆರ್ಮಿಡಿ ಸೋಜ ಅವರು ನಿರ್ಮಿಸಿಕೊಡುವುದಾಗಿ ಘೋಷಣೆ ಮಾಡಿದರು.
ಸಮಾರಂಭದ ವೇದಿಕೆಯಲ್ಲಿ ಉದ್ಯಮಿ ವಿಲಿಯಂ, ಆಶಾ ಟೋಮಿ, ಪ್ರಾ.ಕೃ.ಪ.ಸ.ಸಂ.ನಿ.ಅಧ್ಯಕ್ಷ ಜೆರ್ಮಿಡಿ ಸೋಜ, ದಾನಿಗಳು ಜಯಣ್ಣ, ವಾಹನ ಚಾಲಕರ ಸಂಘದ ಅಧ್ಯಕ್ಷ ವಿ,ಟ್ಟಣ್ಣ ರೈ, ಆಟೋ ಚಾಲಕರ ಸಂಘದ ಅಧ್ಯಕ್ಷ ಎ.ಎಂ.ಶರೀಫ್ ಮತ್ತಿತರರು ಇದ್ದರು.
ಕಾರ್ಯಕ್ರಮದ ಮೊದಲಿಗೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಕೆದಕಲ್ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಸಂಜು ಪೊನ್ನಪ್ಪ, ಪ್ರಾ.ಕೃ.ಪ.ಸ.ಸಂ.ನಿ. ಉಪಾಧ್ಯಕ್ಷ ಪಟ್ಟೆಮನೆ ಉದಯಕುಮಾರ್ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಡಾ.ಮಂತರ್ಗೌಡ ಅವರನ್ನು ವಾಹನ ಚಾಲಕರ ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಸನ್ಮಾನಿಸಿದರು.
ಮೊದಲಿಗೆ ವಾಹನ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಮುನಿರ್ ಕಂಬಿಬಾಣೆ ಸ್ವಾಗತಿಸಿ, ಸೌಭಾಗ್ಯ ನಿರೂಪಿಸಿ, ಎಂ.ಎಸ್.ಸುನಿಲ್ ವಂದಿಸಿದರು.