ಮಡಿಕೇರಿ, ಅ. ೨೨: ಪಡುವಣದಲ್ಲಿ ಸೂರ್ಯ ಮರೆಯಾಗುತ್ತಾ ಕತ್ತಲು ಆವರಿಸುತ್ತಿದ್ದಂತೆ, ಮಂಜಿನ ನಗರಿ ಮಡಿಕೇರಿ ಬೆಳಕಿನ ಹೊಳಪಿನಲ್ಲಿ ಕಂಗೊಳಿಸತೊಡಗಿತು. ಬಾನೆತ್ತರಕ್ಕೆ ಚಿಮ್ಮುತ್ತಿದ್ದ ವರ್ಣರಂಜಿತ ಬೆಳಕುಗಳ ವೈಭವ ಆಕಾಶದಲ್ಲಿ ಚಿತ್ತಾರ ಮೂಡಿಸಿದರೆ, ಕಲಾತ್ಮಕವಾಗಿ ನಿರ್ಮಿಸಲಾಗಿದ್ದ ಮಂಟಪಗಳು ಸ್ವರ್ಗಲೋಕವನ್ನೇ ಭುವಿಗೆ ಇಳಿಸಿದಂತೆ ಕಣ್ಮನ ಸೆಳೆದವು. ಆಕರ್ಷಕ ಪ್ರಭಾವಳಿಗಳು, ಮಂಟಪಗಳನ್ನು ಅಲಂಕರಿಸಿದ್ದ ಬೃಹತ್ ಕಲಾಕೃತಿಗಳು ಹಾಗೂ ದೇವ-ದಾನವರ ನಡುವಿನ ಯುದ್ಧದ ಸನ್ನಿವೇಶಗಳು ನೋಡುಗರನ್ನು ಕ್ಷಣಕಾಲ ಬೇರೊಂದು ಲೋಕಕ್ಕೆ ಕರೆದೊಯ್ದವು. ಬೆಳಕಿನ ಚಿತ್ತಾರ, ಕಲಾಕೃತಿಗಳ ವೈಭವ ಹಾಗೂ ಮಂಟಪಗಳ ಸೃಜನಶೀಲತೆ ಮಡಿಕೇರಿ ದಸರಾ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.
ಐತಿಹಾಸಿಕ ಮಡಿಕೇರಿ ಜನೋತ್ಸವ ಆಕರ್ಷಕ ದಶಮಂಟಪಗಳ ಶೋಭಾಯಾತ್ರೆಯೊಂದಿಗೆ ಯಶಸ್ವಿಯಾಗಿ ನಡೆದು ಕಳೆದ ೧೧ ದಿನಗಳ ದಸರಾ ಆಚರಣೆ ಸಂಪನ್ನಗೊAಡಿತು. ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಹರಿದು ಬಂದ ಜನರ ದಂಡು ಬೃಹತ್ ದಶಮಂಟಪಗಳ ಶೋಭಾಯಾತ್ರೆಗೆ ಸಾಕ್ಷಿಯಾಯಿತು.
ವರುಣಾಂತಕ
ಬೆಳಗ್ಗಿನಿAದಲೇ ದಶದೇವಾಲಯಗಳ ಮಂಟಪ ಸಮಿತಿಗಳ ಸದಸ್ಯರು ಕೊನೆಯ ಹಂತದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದರು. ಅಲಂಕಾರ, ಬೆಳಕಿನ ವ್ಯವಸ್ಥೆ ಸೇರಿದಂತೆ ಪ್ರತಿಯೊಂದು ಕೆಲಸವನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸುವಲ್ಲಿ ನಿರತರಾಗಿದ್ದರು.ಕತ್ತಲು ಆವರಿಸುತ್ತಿದ್ದಂತೆ ಮಂಟಪಗಳಿAದ ಚಿಮ್ಮಿದ ವರ್ಣರಂಜಿತ ‘ಲೈಟಿಂಗ್ಸ್’ ಮಂಜಿನ ನಗರಿಗೆ ಬೆಳಕಿನ ಸ್ಪರ್ಶ ನೀಡಿದವು. ಬಣ್ಣಬಣ್ಣದ ಬೆಳಕಿನ ಚಿತ್ತಾರದಲ್ಲಿ ಮಂಟಪಗಳು ಕಂಗೊಳಿಸುತ್ತಿದ್ದು, ದಸರಾ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದ ಜನರಿಗೆ ಹೊಸ ಅನುಭವ ನೀಡಲು ಸಜ್ಜಾಗಿದ್ದವು.
ಆದರೆ ಸಂಜೆ ವೇಳೆಗೆ ದಿಢೀರ್ ಬದಲಾದ ವಾತಾವರಣ ಕೊಂಚ ನಿರಾಸೆ ಮೂಡಿಸಿತು. ಆಗೊಮ್ಮೆ ಈಗೊಮ್ಮೆ ತುಂತುರು ಮಳೆ ಸುರಿಯುತ್ತಿದ್ದು, ಮಂಟಪ ಸಮಿತಿಗಳಲ್ಲಿ ಆತಂಕ ಮೂಡಿಸಿತು. ರಾತ್ರಿ ೯.೩೦ರ ಸುಮಾರಿಗೂ ದಿಢೀರ್ ಮಳೆ ಸುರಿದ ಪರಿಣಾಮ, ಕೆಲಕಾಲ ಮತ್ತಷ್ಟು ಭೀತಿ ಸೃಷ್ಟಿಯಾಯಿತು. ಆದರೆ ಕೆಲಹೊತ್ತಿನಲ್ಲೇ ವರುಣನ ಅಬ್ಬರ ತಗ್ಗಿ, ಮಳೆ ಮಾಯವಾಗಿ ವಾತಾವರಣ ಸಹಜ ಸ್ಥಿತಿಗೆ ಮರಳಿತು. ಇದರಿಂದ ಮಂಟಪ ಸಮಿತಿಗಳು ಹಾಗೂ ದಸರಾ ಸಂಭ್ರಮ ಕಣ್ತುಂಬಿಕೊಳ್ಳಲು ಆಗಮಿಸಿದ್ದ ಜನರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಮಳೆ ಕ್ಷಣಕಾಲ ಕಾಡಿದರೂ, ವರುಣನ ನಡುವೆಯೂ ದಸರಾ ಮಂಟಪಗಳ ವೈಭವಕ್ಕೆ ಯಾವುದೇ ಧಕ್ಕೆ ಉಂಟಾಗಲಿಲ್ಲ.
ಕಣ್ಮನ ಸೆಳೆದ ಕಲಾ ವೈಭವ
ಪ್ರತಿಯೊಂದು ಮಂಟಪವೂ ತನ್ನದೇ ಆದ ವಿಶಿಷ್ಟ ಪರಿಕಲ್ಪನೆ ಹಾಗೂ ಕಲಾ ವೈಭವದ ಮೂಲಕ ಜನರ ಗಮನ ಸೆಳೆಯಿತು. ಮಡಿಕೇರಿ ದಸರಾ ಮಂಟಪಗಳು ಕೇವಲ ಧಾರ್ಮಿಕ ಆಚರಣೆಯ ಭಾಗವಾಗಿರದೆ, ಕಲಾವಿದರ ಸೃಜನಶೀಲತೆ, ತಾಂತ್ರಿಕ ನೈಪುಣ್ಯ ಹಾಗೂ ಪೌರಾಣಿಕ ಕಥಾನಕಗಳ ದೃಶ್ಯರೂಪದ ಅನಾವರಣಕ್ಕೆ ವೇದಿಕೆಯಾದವು. ದೇವ-ದಾನವರ ಸಮರದಿಂದ ಹಿಡಿದು ವಿವಿಧ ಪೌರಾಣಿಕ ಪ್ರಸಂಗಗಳವರೆಗೆ ಮಂಟಪಗಳಲ್ಲಿ ಮೂಡಿಬಂದ ದೃಶ್ಯಗಳು ನೋಡುಗರನ್ನು ಕ್ಷಣಕಾಲ ಬೇರೊಂದು ಲೋಕಕ್ಕೆ ಕರೆದೊಯ್ದವು.
ಮಂಜಿನನಗರಿಯ ತಂಪು ವಾತಾವರಣದ ನಡುವೆ ಹೊಳೆಯುತ್ತಿದ್ದ ಮಂಟಪಗಳ ಬೆಳಕು, ಕಣ್ಮನ ಸೆಳೆಯುವ ಕಲಾಕೃತಿಗಳು ಹಾಗೂ ದಸರಾ ಸಂಭ್ರಮದ ವಾತಾವರಣ ಮಡಿಕೇರಿಯ ರಾತ್ರಿಯನ್ನು ಮತ್ತಷ್ಟು ರಂಗೇರಿಸಿತು. ಕತ್ತಲನ್ನು ಸೀಳಿ ಕಂಗೊಳಿಸಿದ ದಸರಾ ವೈಭವ ದೀಪಗಳ ದಿಬ್ಬಣ… ಕಲಾವೈಭವದ ಮೆರವಣಿಗೆಯೊಂದಿಗೆ ಆಕರ್ಷಕವಾಗಿ ಮೂಡಿಬಂದಿತು.
ಪೊಲೀಸ್ ಬಿಗಿಭದ್ರತೆ
ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಗರದಲ್ಲಿ ಪೊಲೀಸ್ ಬಿಗಿಭದ್ರತೆ ಕಲ್ಪಿಸಲಾಗಿತ್ತು. ೧೪೫೧ ಪೊಲೀಸರು ಬಂದೋಬಸ್ತ್ಗಾಗಿ ನಿಯೋಜನೆಗೊಂಡಿದ್ದರು. ಇದರೊಂದಿಗೆ ೬೫ ಸಿಸಿ ಕ್ಯಾಮರಗಳು, ಡ್ರೋನ್ ಕ್ಯಾಮರಗಳ ಕಣ್ಗಾವಲನ್ನು ಇಡಲಾಗಿತ್ತು. ೨ ಕೆಎಸ್ಆರ್ಪಿ ಹಾಗೂ ೪ ಡಿಎಆರ್ ತುಕಡಿಗಳು ನಿಯೋಜನೆಗೊಂಡಿದ್ದವು. ಸಂಜೆ ೪ ಗಂಟೆಯ ನಂತರ ವಾಹನಗಳು ನಗರದೊಳಗೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಮಡಿಕೇರಿಗೆ ಆಗಮಿಸುವವರಿಗೆ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಕೆಲವೆಡೆ ಆರೋಗ್ಯ ಸೇವಾ ಕೇಂದ್ರ, ಪೊಲೀಸ್ ಮಾಹಿತಿ ಕೇಂದ್ರಗಳನ್ನು ತೆರೆಯಲಾಗಿತ್ತು.
ಭರ್ಜರಿ ವ್ಯಾಪಾರ-ವಹಿವಾಟು
ಮಡಿಕೇರಿ ದಸರಾ ಶೋಭಾಯಾತ್ರೆಯ ಸಂಭ್ರಮದ ನಡುವೆಯೇ ಬೀದಿಬದಿ ವ್ಯಾಪಾರವೂ ಭರ್ಜರಿಯಾಗಿ ನಡೆಯಿತು.
ನಗರದ ರಸ್ತೆಬದಿಗಳಲ್ಲಿ ಆಟಿಕೆಗಳು, ಅಲಂಕಾರಿಕ ವಸ್ತುಗಳು, ಬಟ್ಟೆ ಸೇರಿದಂತೆ ವಿವಿಧ ವಸ್ತುಗಳ ಮಳಿಗೆಗಳು ಗ್ರಾಹಕರನ್ನು ಆಕರ್ಷಿಸಿದವು. ಮತ್ತೊಂದೆಡೆ ಚಾಟ್ಸ್, ವಿವಿಧ ಆಹಾರ ಪದಾರ್ಥಗಳು ಹಾಗೂ ಜ್ಯೂಸ್ ಮಳಿಗೆಗಳಲ್ಲಿಯೂ ವ್ಯಾಪಾರ ಬಿರುಸಿನಿಂದ ಸಾಗಿತು.
ದಸರಾ ಸಂಭ್ರಮ ಕಣ್ತುಂಬಿಕೊಳ್ಳಲು ಆಗಮಿಸಿದ್ದ ಜನರು ಶೋಭಾಯಾತ್ರೆಯ ವೀಕ್ಷಣೆಯ ಜೊತೆಗೆ ಬೀದಿಬದಿ ಮಳಿಗೆಗಳಲ್ಲೂ ಖರೀದಿಯಲ್ಲಿ ತೊಡಗಿಸಿಕೊಂಡರು. ಕುಟುಂಬ ಸಮೇತರಾಗಿ ಬಂದಿದ್ದವರು ಆಟಿಕೆಗಳು, ಬಟ್ಟೆ ಹಾಗೂ ಅಲಂಕಾರಿಕ ವಸ್ತುಗಳನ್ನು ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಜನಸಂದಣಿಯ ನಡುವೆಯೂ ವ್ಯಾಪಾರಿಗಳು ಗ್ರಾಹಕರನ್ನು ಸೆಳೆಯುವಲ್ಲಿ ನಿರತರಾಗಿದ್ದು, ದಸರಾ ಹಬ್ಬದ ಸಂಭ್ರಮ ವ್ಯಾಪಾರ ವಹಿವಾಟಿಗೂ ಕಳೆ ನೀಡಿತು.