ಮೂರ್ನಾಡು, ಅ. ೨೨: ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ಮೂರ್ನಾಡಿನಲ್ಲಿ ೩೩ನೇ ವರ್ಷದ ಆಯುಧ ಪೂಜೆಯನ್ನು ಸಂಭ್ರಮದಿAದ ಆಚರಿಸಲಾಯಿತು.
ಇಲ್ಲಿನ ಪಿಎಂಶ್ರೀ ಕೆಪಿಎಸ್ ಸರ್ಕಾರಿ ಪ್ರೌಢಶಾಲೆಯ ಮೈದಾನ ಹಾಗೂ ನಾಡ್ಮಂದ್ನಲ್ಲಿ ಭವ್ಯವಾಗಿ ಅಲಂಕರಿಸಲಾಗಿದ್ದ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ವಾಹನಗಳಿಗೆ ಸಾಮೂಹಿಕ ಪೂಜೆ ಸಲ್ಲಿಸಲಾಯಿತು. ಬಳಿಕ ಅಲಂಕೃತ ವಾಹನಗಳ ಮೆರವಣಿಗೆ ಪಟ್ಟಣದ ಮುಖ್ಯರಸ್ತೆಯಲ್ಲಿ ಸಾಗಿತು.
ಮೆರವಣಿಗೆಯಲ್ಲಿ ಗಜಾನನನಿಂದ ಮೂಕಾಸುರನ ವಧೆ, ಕೊಡಗಿನ ಕಾವೇರಿ ಮಾತೆ, ದೇವಿಯಿಂದ ತಾರಕಾಸುರನ ಸಂಹಾರ, ಅರ್ಧನಾರೀಶ್ವರ ದರ್ಶನ, ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ, ಆನೆ ದಾಳಿಗೆ ರೈತ ಬಲಿ, ಶ್ರೀಕೃಷ್ಣನ ಸಮುದ್ರ ಮಂಥನ, ಬಡವರಿಗಾಗಿ ನಿವೇಶನ ಹೋರಾಟ, ಕಾಳಿಂಗ ಮರ್ದನ, ಕರಾವಳಿಯ ಯಕ್ಷಗಾನ ಕಲೆ, ಕೊಳಲು ಕೃಷ್ಣ, ಮಹಾದೇವಿಯಿಂದ ಗರುಡಾಸುರನ ಸಂಹಾರ ಹಾಗೂ ಮಾದಕ ವಸ್ತು ಮುಕ್ತ ಕೊಡಗು ಸೇರಿದಂತೆ ಹಲವು ಸಾಮಾಜಿಕ, ಧಾರ್ಮಿಕ ಮತ್ತು ಪೌರಾಣಿಕ ಸಂದೇಶ ಸಾರುವ ಸ್ಥಬ್ಧಚಿತ್ರಗಳು ಗಮನ ಸೆಳೆದವು.
ಈ ಬಾರಿ ವಿಶೇಷ ಆಕರ್ಷಣೆಯಾಗಿ ಬೆಳ್ತಂಗಡಿಯ ಶೆಟ್ಟಿ ಬೊಂಬೆ ಬಳಗದ ಬೊಂಬೆ ಕುಣಿತ ಹಾಗೂ ವಾದ್ಯಗೋಷ್ಠಿ ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿತು. ಮಳೆಯ ನಡುವೆಯೂ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಸಾರ್ವಜನಿಕರು ವಿವಿಧ ಕಲಾಕೃತಿಗಳು ಹಾಗೂ ಸ್ಥಬ್ಧಚಿತ್ರಗಳನ್ನು ಕಣ್ತುಂಬಿಕೊAಡರು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಉದ್ಯಮಿ ಹಾಗೂ ಸಮಾಜಸೇವಕ ಅವರೆಮಾದಂಡ ಶರಣ್ ಪೂಣಚ್ಚ, ದೇಶದಲ್ಲಿ ಯುವಶಕ್ತಿಯನ್ನು ಬೆಳೆಸುವ ಕಾರ್ಯವಾಗಬೇಕು. ಸದೃಢ ಭಾರತದ ನಿರ್ಮಾಣಕ್ಕೆ ಯುವಜನರ ಶಕ್ತಿ ಅತ್ಯಗತ್ಯ. ಎಲ್ಲ ಧರ್ಮಗಳ ಜನರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಇಂತಹ ಕಾರ್ಯಕ್ರಮ ಶ್ಲಾಘನೀಯ. ಸಂಘವು ಸಮಾಜಮುಖಿ ಕಾರ್ಯಗಳಿಗೆ ಆದ್ಯತೆ ನೀಡುವುದರೊಂದಿಗೆ ಮೂರ್ನಾಡು ಸುತ್ತಮುತ್ತಲಿನ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಮೆಚ್ಚುಗೆಯ ವಿಚಾರ ಎಂದು ಹೇಳಿದರು.
ಬೆಂಗಳೂರಿನ ಕೊಡವ ಸಮಾಜದ ಅಧ್ಯಕ್ಷ ಹಾಗೂ ಉದ್ಯಮಿ ಚಿರಿಯಪಂಡ ಎಸ್. ಸುರೇಶ್ ನಂಜಪ್ಪ ಮಾತನಾಡಿ, ಆಯುಧ ಪೂಜೆ ಹಾಗೂ ವಿಜಯದಶಮಿಯಂತಹ ನಾಡಹಬ್ಬಗಳು ಜನರಲ್ಲಿ ಒಗ್ಗಟ್ಟು ಮತ್ತು ಸಾಮರಸ್ಯವನ್ನು ಬೆಳೆಸುತ್ತವೆ. ಇಂತಹ ಆಚರಣೆಗಳು ದೇಶದ ಭದ್ರತೆ ಹಾಗೂ ಸಮಗ್ರ ಅಭಿವೃದ್ಧಿಗೆ ಪೂರಕವಾಗಿವೆ. ಮೂರ್ನಾಡಿನ ಆಯುಧ ಪೂಜಾ ಕಾರ್ಯಕ್ರಮ ಜಿಲ್ಲೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪಿಎಂಶ್ರೀ ಕೆಪಿಎಸ್ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಸ್ವರ್ಣಲತಾ ಮಾತನಾಡಿ, ನವರಾತ್ರಿ ಹಿಂದೆ ದೊರೆಗಳ ಹಬ್ಬವಾಗಿದ್ದು, ಇಂದು ನಾಡಹಬ್ಬವಾಗಿ ರೂಪುಗೊಂಡಿದೆ. ನವರಾತ್ರಿ ಶಕ್ತಿಯ ಪ್ರತೀಕವಾಗಿದ್ದು, ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಶಕ್ತಿಗೆ ಮಹತ್ವದ ಸ್ಥಾನವಿದೆ. ಪ್ರಸ್ತುತ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ ಎಂದರು.
ಮಡಿಕೇರಿ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಎಚ್.ವಿ. ಚಂದ್ರಶೇಖರ್ ಸಭೆಯನ್ನುದ್ದೇಶಿಸಿ ಮಾತನಾಡಿ, ಸುಮಧುರ ಹಾಡೊಂದನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಬಿ.ಬಿ. ಅಶ್ವಥ್ರೈ ವಹಿಸಿದ್ದರು.
ಸರ್ಕಾರಿ ಪ್ರೌಢಶಾಲೆಯ ಕಳೆದ ಸಾಲಿನ ೧೦ನೇ ತರಗತಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಾದ ಜಾನಿಶ ಬೋಜಮ್ಮ, ಬೃಂದ ಹಾಗೂ ಪುಣ್ಯ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕ ಎಚ್.ಬಿ. ಕೃಷ್ಣಪ್ಪ ಹಾಗೂ ಮಾಜಿ ಸೈನಿಕ ಚೆಟ್ಟಿಮಾಡ ಬಾಲಕೃಷ್ಣ ಅವರನ್ನೂ ಸಂಘದ ವತಿಯಿಂದ ಗೌರವಿಸಲಾಯಿತು. ಅಲಂಕೃತ ಸೈಕಲ್ಗಳು, ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರ ಹಾಗೂ ಆರು ಚಕ್ರದ ವಾಹನಗಳು ಮತ್ತು ಅಂಗಡಿಗಳ ವಿಭಾಗಗಳಲ್ಲಿ ಆಯ್ಕೆಯಾದ ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳೊಂದಿಗೆ ನಗದು ಬಹುಮಾನ ಮತ್ತು ಪಾರಿತೋಷಕಗಳನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಚೆನ್ನೈನ ಉದ್ಯಮಿ ಸತೀಶ್ ಬಿ. ಗುಡ್ಡೇರ, ಪಿಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಬಿ.ಎಸ್. ಪುಷ್ಪಾವತಿ, ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಬಿ.ಎಂ. ಕಲ್ಪನಾ ಸಾಮ್ರಾಟ್, ಮೂರ್ನಾಡು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷ ವಿಠಲ್ ಪೂವಯ್ಯ ಪಳಂಗAಡ, ಬೆಂಗಳೂರಿನ ಕೊಡವ ಸ್ನೇಹಕೂಟದ ಅಧ್ಯಕ್ಷ ಅಚ್ಚಕಾಳೇರ ರವಿ ನಾಣಯ್ಯ, ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ತೇಲಪಂಡ ಸುಬ್ಬಯ್ಯ, ಮೂರ್ನಾಡು ಗೌಡ ಸಮಾಜದ ಅಧ್ಯಕ್ಷ ಪಾಣತ್ತಲೆ ಟಿ. ಹರೀಶ್, ತ್ರಿನೇತ್ರ ಸಂಘದ ಗೌರವಾಧ್ಯಕ್ಷ ಎನ್.ಕೆ. ಕುಂಞÂರಾಮ, ಮೂರ್ನಾಡು ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಮುಕ್ಕಾಟಿರ ರವಿ ಚೀಯಣ್ಣ, ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಎ. ಅಬ್ದುಲ್ ಮಜೀದ್ ಹಾಗೂ ಮೂರ್ನಾಡು ಇನ್ಫೆಂಟ್ ಜೀಸಸ್ ಚರ್ಚ್ನ ಉಪಾಧ್ಯಕ್ಷ ಕೆ.ಜೆ. ಮ್ಯಾಥ್ಯೂ ಜೋಸೆಫ್ ಉಪಸ್ಥಿತರಿದ್ದರು
ಸಂಘದ ಉಪಾಧ್ಯಕ್ಷ ಎಚ್.ಬಿ. ಲಿಂಗಪ್ಪ, ಕಾರ್ಯದರ್ಶಿ ಎನ್.ಎನ್. ಶರಣು, ಖಜಾಂಚಿ ಎಚ್.ಎಚ್. ಜಯಂತ್ಕುಮಾರ್ ಹಾಗೂ ಸಹ ಕಾರ್ಯದರ್ಶಿ ಟಿ.ವಿ. ಹರೇಂದ್ರ ಇದ್ದರು.
ಸುಕನ್ಯ ಮತ್ತು ಸೌಜನ್ಯ ಪ್ರಾರ್ಥಿಸಿದರು. ಸಂಘದ ಕಾರ್ಯದರ್ಶಿ ಎನ್.ಎನ್. ಶರಣು ವರದಿ ವಾಚಿಸಿದರು. ಕಿಶೋರ್ ರೈ ಕತ್ತಲೆಕಾಡು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಮಂಗಳೂರಿನ ಪುರಾವ್ ಮೆಲೋಡಿಸ್ ತಂಡ ಹಾಗೂ ಡ್ರೀಮ್ ಡ್ಯಾನ್ಸ್ ತಂಡದಿAದ ರಸಮಂಜರಿ ಕಾರ್ಯಕ್ರಮ ಮತ್ತು ಶರಣ್ ಅವರಿಂದ ಮಿಮಿಕ್ರಿ ಪ್ರದರ್ಶನ ನಡೆಯಿತು. ಸಂಘದ ವತಿಯಿಂದ ಸಾರ್ವಜನಿಕರಿಗೆ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು.