ಹಿಂದಿನ ಉತ್ಸವಗಳಿಗಿಂತ ವಿಶೇಷ : ಪೊನ್ನಣ್ಣ

ಗೋಣಿಕೊಪ್ಪಲುವಿನಲ್ಲಿ ಈ ಬಾರಿ ಜರುಗಿದ ದಸರಾ ಕಾರ್ಯಕ್ರಮಗಳು ಈ ಹಿಂದಿನ ವರ್ಷಗಳಿಗಿಂತಲೂ ಉತ್ತಮ ರೀತಿಯಲ್ಲಿ ನಡೆದು ಯಶಸ್ಸು ಕಂಡಿದೆ ಎಂದು ಗೋಣಿಕೊಪ್ಪ ದಸರಾ ಸಮಿತಿಯ ಅಧ್ಯಕ್ಷ, ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಹಿಳಾ ದಸರಾ, ಮಕ್ಕಳ ದಸರಾ ಸೇರಿದಂತೆ ಪ್ರತಿದಿನ ವೈವಿಧ್ಯಮಯ ಕಾರ್ಯಕ್ರಮಗಳು ಜನಾಕರ್ಷಣೆಗೆ ಪಾತ್ರವಾಗಿವೆ. ಉತ್ಸವದಲ್ಲಿ ಭಾಗಿಯಾದ ಜನತೆಯ ಸಂಖ್ಯೆಯೂ ಹೆಚ್ಚಿತ್ತು. ವಿಶೇಷವಾಗಿ ಜನತೆ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು ಸಂತಸ ತಂದಿದೆ. ಅಂತಿಮ ದಿನದ ಶೋಭಾಯಾತ್ರೆಯೂ ಯಶಸ್ವಿಯಾಗಿ ನಡೆದಿದೆ.

ಕೆಲವೊಮ್ಮೆ ಮಳೆ ಹೊರತುಪಡಿಸಿ ಇನ್ಯಾವದೇ ತೊಡಕು ಎದುರಾಗಿಲ್ಲ. ಸರಕಾರದಿಂದ ಹೆಚ್ಚಿನ ಅನುದಾನವೂ ಬಂದಿದ್ದು, ಇದರ ಸದ್ವಿನಿಯೋಗವಾಗಿದೆ ಎಂದು ಪೊನ್ನಣ್ಣ ಅವರು ಸದಾಭಿಪ್ರಾಯಪಟ್ಟರು.

ದಸರಾ ಸಮಿತಿಯ ಎಲ್ಲರ ಪರಿಶ್ರಮ ಜನರ ತೊಡಗಿಸಿಕೊಳ್ಳುವಿಕೆಯನ್ನು ತಾವು ಸ್ಮರಿಸಿಕೊಳ್ಳುವುದಾಗಿ ಹೇಳಿದ ಅವರು, ಗೋಣಿಕೊಪ್ಪದಂತೆ ಮಡಿಕೇರಿ ದಸರಾ ಉತ್ಸವವೂ ಯಶಸ್ವಿಯಾಗಿ ನಡೆದಿದೆ ಎಂದೂ ಅವರು ಸಂತಸ ವ್ಯಕ್ತಪಡಿಸಿದರು.