ಎಲ್ಲರ ಸಹಕಾರದಿಂದ ಮಡಿಕೇರಿ ದಸರಾ ಕಾರ್ಯಕ್ರಮ ಅತ್ಯುತ್ತಮ ರೀತಿಯಲ್ಲಿ ನಡೆದಿದೆ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ತಿಳಿಸಿದರು.

ಮಡಿಕೇರಿ ದಸರಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಜ್ಯ ಸರಕಾರದಿಂದ ೨ ಕೋಟಿ ರೂಪಾಯಿ ಅನುದಾನ ತಂದಿದ್ದೇನೆ. ಅನೇಕ ಹೊಸ ಕಾರ್ಯಕ್ರಮಗಳು ಕೂಡ ಈ ಬಾರಿ ನಡೆದಿದೆ.

ಮುಂದಿನ ವರ್ಷ ಶಾಶ್ವತ, ಸುಸಜ್ಜಿತ ವೇದಿಕೆ ನಿರ್ಮಾಣ ಆಗಲಿದೆ. ಅಲ್ಲಿಯೇ ಮತ್ತಷ್ಟು ವ್ಯವಸ್ಥಿತ ರೀತಿಯಲ್ಲಿ ದಸರಾ ಕಾರ್ಯಕ್ರಮ ನಡೆಯಲಿದೆ.

ವಿಜಯದಶಮಿ ರಾತ್ರಿ ಶೋಭಾಯಾತ್ರೆಯಲ್ಲಿ ದಶಮಂಟಪಗಳು ಕೂಡ ಜನಾಕರ್ಷಣೆ ರೀತಿಯಲ್ಲಿ ಮೆರವಣಿಗೆ ಸಾಗಿ ಹಬ್ಬಕ್ಕೆ ಶೋಭೆ ನೀಡಿವೆ. ಎಲ್ಲರೂ ಸಹಕರಿಸಿ ನಾಡ ಹಬ್ಬವನ್ನು ಸುಂದರವಾಗಿಸಿದ್ದಾರೆ ಎಂದಿದ್ದಾರೆ.

ವ್ಯವಸ್ಥಿತವಾಗಿ ನಡೆದಿದೆ - ಎಸ್.ಜೆ. ಸೋಮಶೇಖರ್

ಮಡಿಕೇರಿ ಹಾಗೂ ಗೋಣಿಕೊಪ್ಪಲುವಿನಲ್ಲಿ ವಿಜಯದಶಮಿ ಆಚರಣೆ ವ್ಯವಸ್ಥಿತವಾಗಿ ನಡೆದಿದೆ ಎಂದು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ತಿಳಿಸಿದ್ದಾರೆ.

‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಎರಡೂ ಕಡೆಗಳಲ್ಲೂ ಕೂಡ ಪ್ರತಿ ವರ್ಷದಂತೆ ಅಗತ್ಯ ಪೂರ್ವ ತಯಾರಿ ಕೈಗೊಂಡು ಉತ್ಸವ ಆಚರಣೆ ಮಾಡಲಾಗಿದೆ ಎಂದು ನುಡಿದರು.

ಉತ್ತಮವಾಗಿ ನಡೆದಿದೆ - ಬಿಂದುಮಣಿ

ಮಡಿಕೇರಿ ಹಾಗೂ ಗೋಣಿಕೊಪ್ಪಲು ಎರಡೂ ಕಡೆಗಳಲ್ಲೂ ಕಳೆದ ರಾತ್ರಿ ವಿಜಯದಶಮಿ ಆಚರಣೆ ಉತ್ತಮವಾಗಿ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ತಿಳಿಸಿದ್ದಾರೆ.

‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ವಿಜಯದಶಮಿ ಸಂಬAಧ ಪೊಲೀಸ್ ಇಲಾಖೆ ನೀಡಿದ್ದ ಸೂಚನೆಗಳನ್ನು ಎರಡೂ ಕಡೆಗಳಲ್ಲೂ ಮಂಟಪ ಸಮಿತಿಯವರು ಪಾಲನೆ ಮಾಡಿದ್ದಾರೆ. ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿದ್ದಾರೆ.

ಅಲ್ಲದೇ ಎಲ್ಲೂ ಕೂಡ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸಿಲ್ಲ. ಸಂಚಾರ ವ್ಯವಸ್ಥೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಬಂದೋಬಸ್ತ್ ವ್ಯವಸ್ಥಿತವಾಗಿ ನಡೆದಿದೆ. ಕಳೆದ ರಾತ್ರಿ ಮಡಿಕೇರಿಗೆ ಅಂದಾಜು ಸುಮಾರು ೪೦ ರಿಂದ ೫೦ ಸಾವಿರ ಮಂದಿ, ಗೋಣಿಕೊಪ್ಪಲಿನಲ್ಲಿ ಅಂದಾಜು ೧೫ ರಿಂದ ೨೦ ಸಾವಿರ ಮಂದಿ ಉತ್ಸವ ವೀಕ್ಷಣೆಗೆ ಬಂದಿರುವುದಾಗಿ ಎಸ್ಪಿ ಮಾಹಿತಿ ನೀಡಿದರು.