ನಾಪೋಕ್ಲು, ಅ. ೨೦: ಕೊಡಗಿನ ಸಾಂಪ್ರದಾಯಿಕ ಕೋವಿ ಸಂಸ್ಕೃತಿಯ ಅನಾವರಣ, ಗುರಿ ಹಿಡಿಯುವ ಕೌಶಲ್ಯದ ಪ್ರದರ್ಶನ ಹಾಗೂ ನವರಾತ್ರಿ ಸಂಭ್ರಮಕ್ಕೆ ಸಾಕ್ಷಿಯಾಗಿ ಅವಂದೂರಿನಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸಾಂಪ್ರದಾಯಿಕ ಸ್ಪರ್ಧೆ ವಿಜೃಂಭಣೆಯಿAದ ನಡೆಯಿತು.
ಅವಂದೂರು ಗ್ರಾಮದ ಶ್ರೀ ಗೋಪಾಲಕೃಷ್ಣ, ಈಶ್ವರ-ಶಾಸ್ತಾವು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಹಾಗೂ ಶ್ರೀ ಗೋಪಾಲಕೃಷ್ಣ ಯುವ ಸಂಘದ ಸಂಯುಕ್ತ ಆಶ್ರಯದಲ್ಲಿ ನವರಾತ್ರಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಗಳು, ಸನ್ಮಾನ ಕಾರ್ಯಕ್ರಮ ಹಾಗೂ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಮಾತನಾಡಿ, ಕೊಡಗಿನ ಕೋವಿ ಸಂಸ್ಕೃತಿ ಇಲ್ಲಿನ ಜನರ ಹೆಮ್ಮೆ ಮತ್ತು ಪ್ರತಿಷ್ಠೆಯ ಸಂಕೇತವಾಗಿದೆ. ಕೊಡಗಿನ ಜನರ ನಿತ್ಯಜೀವನದಲ್ಲಿ ಕೋವಿ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದೆ.
ಇಂತಹ ಸಾಂಪ್ರದಾಯಿಕ ಕಾರ್ಯಕ್ರಮಗಳು ಸಮುದಾಯದ ಜನರನ್ನು ಒಂದೆಡೆ ಸೇರಿಸಿ ಪರಸ್ಪರ ಒಗ್ಗಟ್ಟು ಮೂಡಿಸಲು ಸಹಕಾರಿಯಾಗುತ್ತವೆ. ಕೃಷಿ ಚಟುವಟಿಕೆಗಳ ಒತ್ತಡದ ನಡುವೆಯೂ ಇಂತಹ ಸ್ಪರ್ಧೆಗಳು ಜನರಿಗೆ ಮನರಂಜನೆ ಹಾಗೂ ಹೊಸ ಉತ್ಸಾಹ ನೀಡುತ್ತವೆ ಎಂದು ತಿಳಿಸಿ ಶುಭ ಹಾರೈಸಿದರು.
ಉದಯ ವಿದ್ಯಾಸಂಸ್ಥೆಯ ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ದಾನಿಗಳಾದ ಕೆದಂಬಾಡಿ ಪುಟ್ಟಯ್ಯ ಅವರು ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಉದ್ಘಾಟಿಸಿ, ನವರಾತ್ರಿ ಉತ್ಸವದ ಮಹತ್ವವನ್ನು ವಿವರಿಸಿದರು. ಸಾಂಪ್ರದಾಯಿಕ ಆಚರಣೆಗಳನ್ನು ಮುಂದುವರಿಸಿಕೊAಡು ಹೋಗುತ್ತಿರುವ ಆಯೋಜಕರ ಕಾರ್ಯವನ್ನು ಶ್ಲಾಘಿಸಿ ಶುಭ ಹಾರೈಸಿದರು.
ಅವಂದೂರು ಸಮೀಪದ ಸರ್ಕಾರಿ ಮೈದಾನದಲ್ಲಿ ನಡೆದ ಸ್ಪರ್ಧೆಯಲ್ಲಿ ಅರೆಭಾಷೆ ಸಮುದಾಯದ ಹಲವು ಉತ್ಸಾಹಿಗಳು ಹಾಗೂ ಗುರಿಕಾರರು ಪಾಲ್ಗೊಂಡು ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಅವರೂ ಕೋವಿ ಹಿಡಿದು ತೆಂಗಿನಕಾಯಿಗೆ ಗುರಿಯಿಟ್ಟು ಗುಂಡು ಹಾರಿಸಿ ನೆರೆದಿದ್ದವರ ಮೆಚ್ಚುಗೆ ಹಾಗೂ ಚಪ್ಪಾಳೆ ಗಳಿಸಿದರು.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ವೇದಿಕೆಯಲ್ಲಿದ್ದ ಗಣ್ಯರು ಬಹುಮಾನ ವಿತರಿಸಿ ಅಭಿನಂದಿಸಿದರು. ಅವಂದೂರು ಶ್ರೀ ಗೋಪಾಲಕೃಷ್ಣ ಯುವ ಸಂಘದ ಅಧ್ಯಕ್ಷ ದೇವಾಯಿರ ಕೀರ್ತನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಖಜಾಂಚಿ ಚಂದ್ರಪ್ರಕಾಶ್, ಸೂರಜ್ ಹೊಸೂರು, ಕೊಲ್ಯದ ಗಿರೀಶ್, ಪಟ್ಟಡ ದೀಪಕ್, ಸುರೇಶ್ ಸೇರಿದಂತೆ ಪ್ರಮುಖರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.