ಶ್ರೀಮಂಗಲ, ಅ. ೨೦: ಇತರ ಜನಾಂಗಗಳಿಗೆ ಹೋಲಿಸಿದರೆ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಾಗಿರುವ ಕೊಡವ ಜನಾಂಗವು ಸ್ವಾತಂತ್ರ್ಯ ಹೋರಾಟ, ಸೈನ್ಯ, ಕ್ರೀಡೆ, ಸಿನಿಮಾ, ಕೃಷಿ, ತೋಟಗಾರಿಕೆ ಹಾಗೂ ಆರ್ಥಿಕ ಕ್ಷೇತ್ರ ಸೇರಿದಂತೆ ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದೆ. ಇದನ್ನು ಪರಿಗಣಿಸಿ ಕೊಡವ ಜನಾಂಗಕ್ಕೆ ಸೂಕ್ತ ಭದ್ರತೆ ಹಾಗೂ ಸಾಂವಿಧಾನಿಕ ರಕ್ಷಣೆ ಒದಗಿಸುವುದರೊಂದಿಗೆ ಬುಡಕಟ್ಟು ಮೀಸಲಾತಿ ನೀಡಬೇಕು ಎಂದು ತಾ.ಪಂ. ಮಾಜಿ ಅಧ್ಯಕ್ಷ ಕುಞಂಗಡ ಅರುಣ್ ಭೀಮಯ್ಯ ಆಗ್ರಹಿಸಿದರು.
ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ವತಿಯಿಂದ ಆಯೋಜಿಸಿರುವ ೧೦ನೇ ವರ್ಷದ ಚಂಗ್ರಾAದಿ ಪತ್ತಲೋದಿ ಪೈತಾಂಡ್ ನಮ್ಮೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ಕಾಲಘಟ್ಟದಲ್ಲಿ ಒಂದು ದಿನದ ಕಾರ್ಯಕ್ರಮ ಆಯೋಜಿಸುವುದಕ್ಕೂ ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿರುವ ಸಂದರ್ಭ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜವು ಹತ್ತು ದಿನಗಳ ಕಾಲ ಜನೋತ್ಸವದ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಇAತಹ ಕಾರ್ಯಕ್ರಮಗಳಲ್ಲಿ ಚಿಕ್ಕ ಮಕ್ಕಳನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವುದರಿಂದ ಅವರಿಗೆ ಶ್ರೀಮಂತ ಕೊಡವ ಸಂಸ್ಕೃತಿ ಹಾಗೂ ಪರಂಪರೆಯ ಅರಿವು ಮೂಡಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮತ್ತೋರ್ವ ಮುಖ್ಯ ಅತಿಥಿ ಮನೆಯಪಂಡ ಕಾಂತಿ ಸತೀಶ್ ಮಾತನಾಡಿ, ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜವು ಹತ್ತು ದಿನಗಳ ಕಾಲ ಜನೋತ್ಸವದ ರೀತಿಯಲ್ಲಿ ೧೦ನೇ ವರ್ಷದ ಚಂಗ್ರಾAದಿ ಪತ್ತಲೋದಿ ಕಾರ್ಯಕ್ರಮ ಆಯೋಜಿಸಿರುವ ಕುರಿತು ಮಾಧ್ಯಮಗಳ ಮೂಲಕ ತಿಳಿದಿದ್ದೆ. ಇದೀಗ ಖುದ್ದಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತಿರುವುದು ಸಂತಸ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿರುವುದು ಗಮನಾರ್ಹ. ಮಹಿಳೆಯರಿಗೆ ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಅವಕಾಶ ನೀಡುವುದರಿಂದ ಅವರಲ್ಲಿ ಜಾಗೃತಿ ಮೂಡುತ್ತದೆ. ಮಹಿಳೆಯರು ಜಾಗೃತರಾದರೆ ಜನಾಂಗದ ಅಭಿವೃದ್ಧಿ ಸಾಧಿಸುವುದು ಸುಲಭವಾಗುತ್ತದೆ. ದಿನಕ್ಕೊಂದು ವಿಷಯದ ಆಧಾರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿರುವ ಪರಿಕಲ್ಪನೆ ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟರು.
ಮಹಿಳೆಯರು ಕೈತೋಟ ಬೆಳೆಸುವ ಮೂಲಕ ತಾವೇ ಬೆಳೆದ ರಾಸಾಯನಿಕ ಮುಕ್ತ ತರಕಾರಿಗಳನ್ನು ಬಳಸಿ ಆರೋಗ್ಯ ಕಾಪಾಡಿಕೊಳ್ಳಬಹುದು. ದೂರದರ್ಶನ, ಮೊಬೈಲ್ ಸೇರಿದಂತೆ ವಿವಿಧ ದುಶ್ಚಟಗಳಿಂದ ದೂರವಿದ್ದು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ, ೧೦ನೇ ವರ್ಷಾಚರಣೆಯ ಪ್ರಯುಕ್ತ ಪ್ರಸಕ್ತ ವರ್ಷ ದಿನಕ್ಕೊಂದು ವಿಷಯಾಧಾರಿತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಿದ್ದು, ಇದು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡುತ್ತಿದೆ. ಮುಂದಿನ ದಿನಗಳಲ್ಲಿಯೂ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಆಂಗೋಡ್ ಕೇರಿ ಪೊಮ್ಮಕ್ಕಡ ಕೂಟದ ಕಾರ್ಯದರ್ಶಿ ಬಾಚೀರ ಪಾಲಿ ಕಾರ್ಯಪ್ಪ ಮಾತನಾಡಿ, ಇದುವರೆಗೆ ಯಾರೂ ಮಾಡದ ರೀತಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಪ್ರತಿವರ್ಷ ಹತ್ತು ದಿನಗಳ ಕಾಲ ಜನೋತ್ಸವದ ಮಾದರಿಯಲ್ಲಿ ಜನಮೆಚ್ಚುಗೆ ಗಳಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದಿಂದ ಇನ್ನಷ್ಟು ಉತ್ತಮ ಕಾರ್ಯಗಳು ನಡೆಯಲಿ ಎಂದು ಹಾರೈಸಿದರು.
ಈ ಸಂದರ್ಭ ಆಂಗೋಡ್ ಕೇರಿ ಪೊಮ್ಮಕ್ಕಡ ಕೂಟದ ಕಲಾವಿದರಿಂದ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೂರೆಗೊಂಡವು. ಕಾರ್ಯಕ್ರಮದ ಆರಂಭದಲ್ಲಿ ಆಂಗೋಡ್ ಕೇರಿ ಪೊಮ್ಮಕ್ಕಡ ಕೂಟದ ಬಾಚೀರ ನೇತ್ರಾವತಿ ಸುಜ ಪ್ರಾರ್ಥಿಸಿದರು. ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಖಜಾಂಚಿ ಚಂಗುಲAಡ ಸತೀಶ್ ಸ್ವಾಗತಿಸಿದರು. ಸಾಂಸ್ಕೃತಿಕ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ ನಿರೂಪಿಸಿದರು. ಕಾರ್ಯದರ್ಶಿ ಕೋಟ್ರಮಡ ಸುಮಂತ್ ಮಾದಪ್ಪ ವಂದಿಸಿದರು. ಕಾರ್ಯಕ್ರಮದಲ್ಲಿ ಆಂಗೋಡ್ ಕೇರಿ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಮುಕ್ಕಾಟಿರ ಅಶ್ವಿನಿ ಲೋಕೇಶ್, ಸಂಭ್ರಮ ಪೊಮ್ಮಕ್ಕಡ ಕೂಟದ ನಿರ್ದೇಶಕಿ ಅಜ್ಜಮಡ ಸಾವಿತ್ರಿ, ಟಿ.ಶೆಟ್ಟಿಗೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ನಿರ್ದೇಶಕಿ ಕೋಟ್ರಮಡ ಸುಮಿತ್ರ ಅಪ್ಪಣ್ಣ, ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಉಪಾಧ್ಯಕ್ಷ ಮಚ್ಚಮಡ ಸುಮಂತ್, ಸಹ ಕಾರ್ಯದರ್ಶಿ ಬಾದುಮಂಡ ವಿಷ್ಣು ಕಾರ್ಯಪ್ಪ, ಕ್ರೀಡಾ ಕಾರ್ಯದರ್ಶಿ ತಡಿಯಂಗಡ ಶಮ್ಮಿ ಸುಬ್ಬಯ್ಯ, ನಿರ್ದೇಶಕರಾದ ಚಂಗುಲAಡ ಅಶ್ವಿನಿ ಸತೀಶ್, ತೀತಿರ ಅನಿತ ಸುಬ್ಬಯ್ಯ, ಟಿ.ಶೆಟ್ಟಿಗೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೋಟ್ರಮಡ ರೇಶ್ಮ ಕಾರ್ಯಪ್ಪ, ಕಾರ್ಯದರ್ಶಿ ಕಳ್ಳಿಚಂಡ ದೀನ ಉತ್ತಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.