ಸುಂಟಿಕೊಪ್ಪ, ಅ.೨೦: ಆಟೋರಿಕ್ಷಾಗಳ ಸಂಚಾರ ಪರಿಮಿತಿಯನ್ನು ಹೆಚ್ಚಿಸುವುದು ಕಾನೂನಿನ ಚೌಕಟ್ಟಿನಲ್ಲಿ ಸಾಧ್ಯವಾಗದಿದ್ದರೂ, ಆಟೋ ಚಾಲಕರ ಪ್ರಮುಖ ಬೇಡಿಕೆಯಾಗಿರುವ ಕನಿಷ್ಟ ಪ್ರಯಾಣ ದರ ಪರಿಷ್ಕರಣೆ ವಿಚಾರವನ್ನು ಯಶಸ್ವಿಯಾಗಿ ಕೈಗೆತ್ತಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎ. ಲೋಕೇಶ್ ಕುಮಾರ್ ತಿಳಿಸಿದರು.
ಸುಂಟಿಕೊಪ್ಪ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಆಟೋ ನಿಲ್ದಾಣದ ಮುಂಭಾಗದ ವೇದಿಕೆಯಲ್ಲಿ ಆಯೋಜಿಸಿದ್ದ ಸಾಮೂಹಿಕ ಆಯುಧ ಪೂಜಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಟೋರಿಕ್ಷಾಗಳ ಸಂಚಾರ ಪರಿಮಿತಿಯನ್ನು ೧೫ ಕಿ.ಮೀ.ಗಿಂತ ಹೆಚ್ಚಿಸಲು ಸಾಧ್ಯವಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳು ರಚಿಸಿರುವ ಪರಿಶೀಲನಾ ಸಮಿತಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್ಟಿಒ) ಇದ್ದಾರೆ. ಆಟೋ ಚಾಲಕರ ಪರವಾಗಿ ತಾವು ವಾದ ಮಂಡಿಸಿದ್ದರೂ, ಅಂಕಿ-ಅAಶಗಳು ಹಾಗೂ ಕಾನೂನಿನ ಮಿತಿಗಳ ಕಾರಣದಿಂದ ಸಂಚಾರ ಪರಿಮಿತಿ ಹೆಚ್ಚಿಸುವ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗಿಲ್ಲ ಎಂದು ವಿವರಿಸಿದರು.
ಆದರೆ, ಆಟೋ ಚಾಲಕರ ಮತ್ತೊಂದು ಪ್ರಮುಖ ಬೇಡಿಕೆಯಾಗಿರುವ ಕನಿಷ್ಠ ಪ್ರಯಾಣ ದರ ಪರಿಷ್ಕರಣೆ ವಿಚಾರದಲ್ಲಿ ಯಶಸ್ಸು ದೊರೆತಿದ್ದು, ದರ ಏರಿಕೆ ಕುರಿತು ಸಮಿತಿ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದರು.
ಸುಂಟಿಕೊಪ್ಪ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಕಾರ್ಯಕ್ರಮವು ಭಾರತೀಯ ಪರಂಪರೆಯ ವಿವಿಧತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸುತ್ತದೆ. ಆಟೋ ಚಾಲಕರು ಸಲ್ಲಿಸುತ್ತಿರುವ ಸೇವೆ ಸ್ಮರಣೀಯವಾದುದು ಎಂದು ಶ್ಲಾಘಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ. ಲತೀಫ್ ಮಾತನಾಡಿ, ಸುಂಟಿಕೊಪ್ಪ ಹೋಬಳಿಯು ಗುಡ್ಡಗಾಡು ಪ್ರದೇಶ ಹಾಗೂ ಕುಗ್ರಾಮಗಳಿಂದ ಕೂಡಿದ್ದು, ಹಲವು ಗ್ರಾಮಗಳು ಮೂಲಸೌಕರ್ಯಗಳಿಂದ ವಂಚಿತವಾಗಿವೆ. ಇಂತಹ ಪ್ರದೇಶಗಳಲ್ಲಿ ತುರ್ತು ಚಿಕಿತ್ಸೆಯ ಅಗತ್ಯವಿದ್ದಾಗ ಮಡಿಕೇರಿ ಹಾಗೂ ಕುಶಾಲನಗರಕ್ಕೆ ತೆರಳಬೇಕಾಗುತ್ತದೆ. ಈ ಸಂದರ್ಭದಲ್ಲಿ ಆಟೋ ಚಾಲಕರು ಬಾಡಿಗೆಗಿಂತ ದುಪ್ಪಟ್ಟು ದಂಡ ಪಾವತಿಸಬೇಕಾದ ಪರಿಸ್ಥಿತಿ ಎದುರಾಗುತ್ತಿದೆ. ಇಂತಹ ತುರ್ತು ಸಂದರ್ಭಗಳಲ್ಲಿ ವಿನಾಯಿತಿ ನೀಡುವಂತೆ ಹಾಗೂ ಆಟೋರಿಕ್ಷಾಗಳ ಸಂಚಾರ ಪರಿಮಿತಿಯನ್ನು ೧೫ ಕಿ.ಮೀ.ಗಿಂತ ಹೆಚ್ಚಿಸುವಂತೆ ಶಾಸಕರ ಗಮನಕ್ಕೆ ತರಬೇಕು ಎಂದು ಸಲಹೆ ನೀಡಿದರು.
ಸುಂಟಿಕೊಪ್ಪ ಹೋಬಳಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿನಿ ಶ್ರೀಶಾ ಅವರಿಗೆ ೧೦ ಸಾವಿರ ನಗದು ನೀಡಿ ಪ್ರೋತ್ಸಾಹಿಸಲಾಯಿತು.
ದಾನಿ ಹಾಗೂ ಕಾಫಿ ಬೆಳೆಗಾರ ಟಿ.ಕೆ. ಸಾಯಿಕುಮಾರ್ ಮಾತನಾಡಿ, ಆಟೋ ಚಾಲಕರು ಸರ್ವಧರ್ಮ ಸಮನ್ವಯದ ಮನೋಭಾವದೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಸೇವೆ ಶ್ಲಾಘನೀಯವಾಗಿದೆ. ಸಂಘದ ಕಾರ್ಯಚಟುವಟಿಕೆಗಳನ್ನು ಗುರುತಿಸಿ, ಸಂಘದ ಅಸ್ತಿತ್ವವನ್ನು ಸಾರುವ ನಿಟ್ಟಿನಲ್ಲಿ ಮಹಾದ್ವಾರ ನಿರ್ಮಿಸಿಕೊಡಲಾಗಿದೆ ಎಂದರು.
ಇಮ್ಮಾನ್ಯುವೆಲ್ ದೇವಾಲಯದ ಧರ್ಮಗುರು ಜೈಸನ್ ಗೌಡರ್ ಆಶೀರ್ವಚನ ನೀಡಿ, ಸುಂಟಿಕೊಪ್ಪ ಆಟೋ ಚಾಲಕರ ಸಂಘವು ಇದುವರೆಗೆ ಸಮಾಜಮುಖಿ ಹಾಗೂ ಅಭಿವೃದ್ಧಿಪರ ಕಾರ್ಯಗಳನ್ನು ಮಾಡಿಕೊಂಡು ಬಂದಿದೆ. ಮುಂದೆಯೂ ಸಂಘಟಿತವಾಗಿ, ಜಾತ್ಯತೀತ ಹಾಗೂ ಧರ್ಮಾತೀತ ನೆಲೆಯಲ್ಲಿ ಅಭಿವೃದ್ಧಿಯತ್ತ ಸಾಗಲು ಶಕ್ತಿ ದೊರೆಯಲಿ ಎಂದು ಹಾರೈಸಿದರು.
ಸಿ.ಎಂ. ಹಮ್ಮಿದ್ ಮೌಲವಿ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ದ್ವೇಷದ ವಾತಾವರಣ ಕಂಡುಬರುತ್ತಿರುವ ಸಂದರ್ಭ ಸ್ನೇಹದ ಸೇತುವೆ ನಿರ್ಮಿಸುವ ಕಾರ್ಯದ ಮೂಲಕ ಸುಂಟಿಕೊಪ್ಪ ಆಟೋ ಚಾಲಕರ ಮತ್ತು ಮಾಲೀಕರ ಸಂಘ ಮಾದರಿಯಾಗಿದೆ. ಮಂದಿರ, ಮಸೀದಿ ಹಾಗೂ ಚರ್ಚ್ಗಳು ಎಲ್ಲ ಧರ್ಮಗಳಲ್ಲೂ ಒಳಿತನ್ನೇ ಬಯಸುವ ಸಂದೇಶವನ್ನು ಸಾರುತ್ತವೆ. ಹಬ್ಬ-ಹರಿದಿನಗಳ ಆಚರಣೆಯು ಮನುಕುಲದ ಒಳಿತನ್ನು ಬಯಸುವ ಉತ್ತಮ ಸಂದೇಶವಾಗಿದೆ ಎಂದರು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಬಿ. ಭಾರತೀಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜೆರ್ಮಿ ಡಿಸೋಜ, ಮಾಜಿ ಸದಸ್ಯರಾದ ರಫೀಕ್ ಖಾನ್, ಪ್ರಸಾದ್ ಕುಟ್ಟಪ್ಪ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎ. ಉಸ್ಮಾನ್ ಮಾತನಾಡಿದರು.
ಆಟೋ ಚಾಲಕರ ಸಂಘಕ್ಕೆ ದ್ವಾರ ಹಾಗೂ ನಾಮಫಲಕವನ್ನು ಕೊಡುಗೆಯಾಗಿ ನೀಡಿದ ಕಾಫಿ ಬೆಳೆಗಾರ ಟಿ.ಕೆ. ಸಾಯಿಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ. ಲತೀಫ್ ಹಾಗೂ ಎಸ್ಎಸ್ಎಲ್ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿ ಶ್ರೀಶಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷ ಶರೀಫ್, ವಾಹನ ಚಾಲಕರ ಸಂಘದ ಅಧ್ಯಕ್ಷ ಕೆ.ವಿ. ಕಿಟ್ಟಣ್ಣ ರೈ, ದಾನಿ ವಿಲಿಯಂ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಇ. ಕರೀಂ, ಸದಸ್ಯರಾದ ಆಲಿಕುಟ್ಟಿ, ಪಿ.ಎಫ್. ಸೆಬಾಸ್ಟೀನ್, ವಸಂತಿ, ಶಾಂತಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಓಡಿಯಪ್ಪನ ವಿಮಲಾವತಿ, ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ಬಿ.ಸಿ. ದಿನೇಶ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ನಿರ್ದೇಶಕ ಬಿ.ಡಿ. ರಾಜು ರೈ, ಆಟೋ ಚಾಲಕರ ಸಂಘದ ಕಾರ್ಯದರ್ಶಿ ಸಚಿನ್ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶ್ರೀಶಾ ಪ್ರಾರ್ಥಿಸಿದರು. ಬಿ.ಕೆ. ಪ್ರಶಾಂತ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಇದೇ ಸಂದರ್ಭದಲ್ಲಿ ಸಂಘದ ಕಚೇರಿಯಲ್ಲಿ ಗಣೇಶ್ ಉಪಾಧ್ಯಾಯ ಅವರು ಆಟೋರಿಕ್ಷಾಗಳಿಗೆ ಸಾಮೂಹಿಕ ಪೂಜೆ ನೆರವೇರಿಸಿದರು.