ಗೋಣಿಕೊಪ್ಪಲು, ಅ.೨೦: ಅನ್ನದಾನ ಮಹಾದಾನವಾಗಿದ್ದು, ಈ ನಿಟ್ಟಿನಲ್ಲಿ ನವಚೇತನ ದಸರಾ ಸಮಿತಿಯು ಕಳೆದ ೩೭ ವರ್ಷಗಳಿಂದ ಆಯುಧ ಪೂಜೆಯಂದು ಸಾವಿರಾರು ನಾಗರಿಕರಿಗೆ ಅನ್ನಸಂತರ್ಪಣೆ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹಿರಿಯ ಉದ್ಯಮಿ ಎಂ.ಜಿ. ಮೋಹನ್ ಹೇಳಿದರು.

ಗೋಣಿಕೊಪ್ಪಲು ಮಾರುಕಟ್ಟೆ ಆವರಣದಲ್ಲಿ ಆಯೋಜಿಸಿದ್ದ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಿತಿಯ ಅನ್ನದಾನ ಕಾರ್ಯಕ್ರಮ ಮುಂದಿನ ವರ್ಷಗಳಲ್ಲೂ ಯಶಸ್ವಿಯಾಗಿ ಮುಂದುವರಿಯಲಿ ಎಂದು ಆಶಿಸಿದರು. ಸರ್ವಧರ್ಮೀಯರನ್ನು ಒಳಗೊಂಡಿರುವ ನವಚೇತನ ದಸರಾ ಸಮಿತಿಯು ಆಯುಧ ಪೂಜೆಯಂದು ಮಾರ್ಕೆಟ್ ಆವರಣದಲ್ಲಿ ಸಾವಿರಾರು ಜನರಿಗೆ ಅನ್ನಸಂತರ್ಪಣೆ ಮಾಡುವ ಮೂಲಕ ವಿಶಿಷ್ಟವಾಗಿ ಗುರುತಿಸಿಕೊಂಡಿದೆ. ಸಮಿತಿಯಲ್ಲಿ ಯುವಕರ ತಂಡ ಸಕ್ರಿಯವಾಗಿ ಪಾಲ್ಗೊಂಡು ಹಿರಿಯರ ಮಾರ್ಗದರ್ಶನದಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ರೂಪಿಸುತ್ತಿದೆ.

ವ್ಯಾಪಾರಿಗಳಿಂದ ದೇಣಿಗೆಯಾಗಿ ಸಂಗ್ರಹಿಸಿದ ಹಣದಿಂದ ಅನ್ನದಾನ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಸಮಿತಿಯ ಸ್ಥಾಪಕ ಕಾರ್ಯದರ್ಶಿ ಶಾಂತರಾಮ್ ಕಾಮತ್ ತಿಳಿಸಿದರು.

ನವಚೇತನ ದಸರಾ ಸಮಿತಿ ಅಧ್ಯಕ್ಷ ಕರ್ಣರಾಜ್ ತಂಬಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಕಾವೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಸ್ಥಾಪಕ ಅಧ್ಯಕ್ಷ ಕುಪ್ಪಂಡ ಗಣೇಶ್ ತಿಮ್ಮಯ್ಯ, ನಿವೃತ್ತ ಸೈನಿಕ ಕೇಳಪಂಡ ಸುರೇಶ್ ಕಾರ್ಯಪ್ಪ, ರೋಟರಿ ಕ್ಲಬ್ ಅಧ್ಯಕ್ಷ ಎಂ.ಪಿ. ಪ್ರಮೋದ್ ಕಾಮತ್, ನಾಡಹಬ್ಬ ದಸರಾ ಸಂಚಾಲಕ ನಾರಾಯಣಸ್ವಾಮಿ ನಾಯ್ಡು, ಹಿರಿಯ ವರ್ತಕ ಎಂ.ಆರ್. ರಫೀಕ್, ಕಾವೇರಿ ದಸರಾ ಸಮಿತಿ ಸಂಯೋಜಕ ಎಂ.ಪಿ. ಚಂದನ್ ಕಾಮತ್ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಅಸ್ಗರ್, ಉಪಾಧ್ಯಕ್ಷರಾದ ಸಚಿನ್, ಎಂ.ಆರ್. ರಫೀಕ್, ಶಮೀರ್, ಹಮಾನ್, ಪ್ರದೀಪ್, ಅಬ್ದುಲ್ ಸಮ್ಮದ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು. ಸಮಿತಿಯ ಸಂಚಾಲಕ ಕೆ.ಪಿ. ಅಬ್ದುಲ್ ಜಲೀಲ್ ಸ್ವಾಗತಿಸಿ ವಂದಿಸಿದರು.