ಸಿದ್ದಾಪುರ, ಅ. ೨೦: ಸಿದ್ದಾಪುರ ವಾಹನ ಚಾಲಕರ ಮಜ್ದೂರ್ ಸಂಘದ ವತಿಯಿಂದ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳೊಂದಿಗೆ ಆಯುಧ ಪೂಜೆಯನ್ನು ವಿಜೃಂಭಣೆಯಿAದ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಬಿ.ಎಂ.ಎಸ್. ಸಂಘಟನೆಯ ಅಧ್ಯಕ್ಷ ಸೂದನ ಸತೀಶ್ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಎ.ಸಿ. ಸುಬ್ಬಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಸಾಮೂಹಿಕ ಆಯುಧ ಪೂಜೆ ನೆರವೇರಿಸಲಾಯಿತು.
ಉದ್ಯಮಿ ವೆಂಕಪ್ಪ ರೈ ಸೈಕಲ್ ಸ್ಪರ್ಧೆ ಹಾಗೂ ರಸ್ತೆ ಓಟದ ಸ್ಪರ್ಧೆಗೆ ಚಾಲನೆ ನೀಡಿದರು. ಮಹಿಳೆಯರಿಗೆ ಸಂಗೀತ ಕುರ್ಚಿ ಹಾಗೂ ಪುರುಷರಿಗೆ ಕಣ್ಣು ಕಟ್ಟಿಕೊಂಡು ಮಡಿಕೆ ಒಡೆಯುವ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಯುಧ ಪೂಜಾ ಆಚರಣೆ ಸಮಿತಿ ಅಧ್ಯಕ್ಷ ಪಿ.ಕೆ. ದಾಸನ್ ವಹಿಸಿದ್ದರು. ಇದೇ ಸಂದರ್ಭ ಸದಸ್ಯರ ಮಕ್ಕಳಲ್ಲಿ ಹತ್ತನೇ ತರಗತಿ, ದ್ವಿತೀಯ ಪಿಯುಸಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು. ಬಿ.ಎಂ.ಎಸ್. ಸಂಘಟನೆಯ ಅಧ್ಯಕ್ಷ ಸೂದನ ಸತೀಶ್, ಸಿದ್ದಾಪುರ ವಲಯ ಕಾಂಗ್ರೆಸ್ ಅಧ್ಯಕ್ಷ ಎಸ್.ಬಿ. ಪ್ರತೀಶ್, ವಾಹನ ಚಾಲಕರ ಮಜ್ದೂರ್ ಸಂಘದ ನಿರ್ದೇಶಕ ಜಿಮ್ಮಿ ಸಿಕ್ವೇರ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿವಿಧ ನೃತ್ಯಶಾಲೆಗಳ ಮಕ್ಕಳು ಹಾಗೂ ಸ್ಥಳೀಯ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ವೇದಿಕೆಯಲ್ಲಿದ್ದ ಗಣ್ಯರು ಬಹುಮಾನ ವಿತರಿಸಿದರು.
ಸಭಾ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಎಡಿಕೇರಿ ಪ್ರಸನ್ನ, ಎಸ್ಎನ್ಡಿಪಿ ಯೂನಿಯನ್ ಜಿಲ್ಲಾಧ್ಯಕ್ಷ ವಿ.ಕೆ. ಲೋಕೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎಸ್. ವೆಂಕಟೇಶ್ ಹಾಗೂ ಮೂಕೊಂಡ ವಿಜು ಸುಬ್ರಮಣಿ, ಬಿಜೆಪಿ ವೀರಾಜಪೇಟೆ ತಾಲೂಕು ಪ್ರಧಾನ ಕಾರ್ಯದರ್ಶಿ ಕುಟ್ಟಂಡ ಅಜಿತ್ ಕರುಂಬಯ್ಯ, ಬಿ.ಎಂ.ಎಸ್. ಸಂಘಟನೆಯ ಕಾನೂನು ಸಲಹೆಗಾರ ರತ್ನಾಕರ ಶೆಟ್ಟಿ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಪಂಚಾಯಿತಿ ಮಾಜಿ ಸದಸ್ಯ ಪಳನಿ ಸ್ವಾಮಿ, ಸಿದ್ದಾಪುರ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ರೂಪೇಶ್, ಕೇರಳಾಪುರದ ಸಮಾಜ ಸೇವಕ ಹರೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಆಟೋ ರಿಕ್ಷಾಗಳ ಅಲಂಕಾರ ಸ್ಪರ್ಧೆಯನ್ನೂ ಆಯೋಜಿಸಲಾಗಿತ್ತು. ಜಿಮ್ಮಿ ಸೀಕ್ವೆರಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ವಂದಿಸಿದರು.