ಮಡಿಕೇರಿ, ಅ.೨೦: ದಸರಾ ಸಂದರ್ಭದಲ್ಲಿ ಈ ಹಿಂದೆ ಗೋಣಿಕೊಪ್ಪಲು ಪಟ್ಟಣದ ಸುತ್ತಮುತ್ತಲಿನ ೧೦ ಕಿ.ಮೀ. ವ್ಯಾಪ್ತಿಗೆ ಸೀಮಿತವಾಗಿದ್ದ ಮದ್ಯ ಮಾರಾಟ ನಿಷೇಧವನ್ನು ೨೦೨೬ರಲ್ಲಿ ಇಡೀ ಪೊನ್ನಂಪೇಟೆ ತಾಲೂಕಿಗೆ ವಿಸ್ತರಿಸಿರುವುದು ಯಾವ ನ್ಯಾಯದ ಆಧಾರದ ಮೇಲೆ ಎಂದು ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಕಿಲನ್ ಗಣಪತಿ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ದಸರಾ ಮೆರವಣಿಗೆ ಸಾಗುವ ಮಾರ್ಗದಲ್ಲಿ ಮಾತ್ರ ಮದ್ಯ ಮಾರಾಟ ನಿಷೇಧಿಸಿ, ನಗರದ ಇತರ ಪ್ರದೇಶಗಳಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಲಾಗುತ್ತಿದೆ. ಆದರೆ, ಪೊನ್ನಂಪೇಟೆ ತಾಲೂಕಿನಾದ್ಯಂತ ಮದ್ಯ ಮಾರಾಟ ನಿಷೇಧಿಸಿರುವುದಕ್ಕೆ ಕಾರಣವೇನು ಎಂದು ಅವರು ಪ್ರಶ್ನಿಸಿದ್ದಾರೆ.
ಮೈಸೂರಿಗೆ ಒಂದು ಮಾನದಂಡ, ಪೊನ್ನಂಪೇಟೆ ತಾಲೂಕಿಗೆ ಮತ್ತೊಂದು ಮಾನದಂಡವೇ? ಮೈಸೂರಿನಲ್ಲಿ ಮೆರವಣಿಗೆ ಸಾಗುವ ಮಾರ್ಗಕ್ಕೆ ಮಾತ್ರ ನಿರ್ಬಂಧ ವಿಧಿಸಲು ಸಾಧ್ಯವಾಗುವಾಗ, ಪೊನ್ನಂಪೇಟೆ ತಾಲೂಕಿನಾದ್ಯಂತ ಮದ್ಯ ಮಾರಾಟ ನಿಷೇಧಿಸುವ ಅಗತ್ಯವೇನಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹಬ್ಬಗಳ ಆಚರಣೆ ಹಾಗೂ ಧಾರ್ಮಿಕ ಸಂಪ್ರದಾಯಗಳಿಗೆ ಗೌರವ ನೀಡುವುದರ ಜೊತೆಗೆ, ಮದ್ಯದಂಗಡಿ ಪರವಾನಗಿದಾರರ ವ್ಯಾಪಾರ ಹಕ್ಕು, ಜೀವನೋಪಾಯ ಮತ್ತು ಆರ್ಥಿಕ ಹಿತಾಸಕ್ತಿಗಳನ್ನೂ ಪರಿಗಣಿಸಬೇಕು. ಮದ್ಯ ಮಾರಾಟ ನಿಷೇಧದ ವ್ಯಾಪ್ತಿಯನ್ನು ನಿರ್ಧರಿಸುವಾಗ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.