ಕರ್ನಾಟಕ ಸರ್ಕಾರವು ತುಳು ಭಾಷೆಯನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ರಾಜ್ಯದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಇತ್ತೀಚೆಗೆ ಘೋಷಿಸಿದೆ. ಈ ಜಿಲ್ಲೆಗಳ ಎಲ್ಲ ಸರ್ಕಾರಿ ಇಲಾಖೆಗಳ ವ್ಯವಹಾರ, ಕಡತಗಳು, ಅರ್ಜಿಗಳು ಹಾಗೂ ಅಧಿಸೂಚನೆಗಳು ಇನ್ನು ಮುಂದೆ ತುಳು ಭಾಷೆಯಲ್ಲೂ ಲಭ್ಯವಿರಲಿವೆ. ಸ್ಥಳೀಯ ಸಂಸ್ಥೆಗಳು ಮತ್ತು ಅಧಿಕೃತ ಸಭೆಗಳಲ್ಲಿ ಸಾರ್ವಜನಿಕರು ತುಳು ಭಾಷೆಯಲ್ಲಿ ಮಾತನಾಡಲು ಮತ್ತು ವ್ಯವಹರಿಸಲು ಅವಕಾಶವಿರುತ್ತದೆ. ಭಾಷೆಯ ಅನುವಾದ ಹಾಗೂ ಸರ್ಕಾರಿ ನೌಕರರಿಗೆ ತುಳು ಭಾಷಾ ತರಬೇತಿ ನೀಡಲು ಸರ್ಕಾರದಿಂದ ವಾರ್ಷಿಕವಾಗಿ ೮೨ ಲಕ್ಷ ರೂಪಾಯಿಗಳನ್ನು ಮೀಸಲಿಡಲಾಗಿದೆ. 'ಕರ್ನಾಟಕ ಅಧಿಕೃತ ಭಾಷಾ ಕಾಯ್ದೆ-೧೯೬೩'ಕ್ಕೆ ಅಗತ್ಯ ತಿದ್ದುಪಡಿಗಳನ್ನು ತಂದು, ತುಳುವಿಗೆ ಅಧಿಕೃತ ಕಾನೂನು ಮಾನ್ಯತೆ ಅಂತಿಮಗೊಳಿಸಲಾಗುತ್ತದೆ.
ಆಡಳಿತಾತ್ಮಕ ಬಳಕೆ ಹೇಗೆ ಸಾಧ್ಯ?
ಈ ನಿರ್ಧಾರ ಕೇವಲ ಘೋಷಣೆಯಾಗಿ ಉಳಿಯದೆ ಕಾನೂನುಬದ್ಧವಾಗಿ ಜಾರಿಗೆ ಬರಲು ಸರ್ಕಾರ ಕೆಲವು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಸಂವಿಧಾನದ ೩೪೫ನೇ ವಿಧಿಯನ್ವಯ ಪ್ರಾದೇಶಿಕ ಭಾಷೆಯನ್ನು ಆಡಳಿತಕ್ಕೆ ಅಳವಡಿಸಲು ರಾಜ್ಯ ಸರ್ಕಾರಕ್ಕೆ ಮುಕ್ತ ಅವಕಾಶವಿದೆ. ಇದಕ್ಕಾಗಿ 'ಕರ್ನಾಟಕ ಅಧಿಕೃತ ಭಾಷಾ ಕಾಯ್ದೆ-೧೯೬೩'ರ ಸೆಕ್ಷನ್ ೨ಕ್ಕೆ ತಿದ್ದುಪಡಿ ತಂದು ಶಾಸನ ಸಭೆಯಲ್ಲಿ ಅಂಗೀಕಾರ ಪಡೆಯಬೇಕಾಗುತ್ತದೆ. ಈ ಪ್ರಕ್ರಿಯೆ ಮುಗಿದ ಬಳಿಕವಷ್ಟೇ ಇಲಾಖೆಗಳಲ್ಲಿ ತುಳು ಬಳಕೆ ಕಡ್ಡಾಯಗೊಳ್ಳಲಿದೆ. ಕರ್ನಾಟಕ ಸರ್ಕಾರದ ಸಮಿತಿಯು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಉರ್ದು ಭಾಷೆಗೆ ಹೆಚ್ಚುವರಿ ಆಡಳಿತ ಮಾನ್ಯತೆ ನೀಡಿದ ಮಾದರಿಯನ್ನು ಸೂಕ್ಷö್ಮವಾಗಿ ಅಧ್ಯಯನ ಮಾಡಿದೆ. ಅದೇ ಮಾದರಿಯಲ್ಲಿ ಸ್ಥಳೀಯ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ತುಳುವಿನಲ್ಲಿ ಅರ್ಜಿ ಸಲ್ಲಿಸಲು ಮತ್ತು ಕಡತಗಳ ವ್ಯವಹಾರ ನಡೆಸಲು ಅವಕಾಶ ನೀಡಲಾಗುತ್ತದೆ. ವಾರ್ಷಿಕವಾಗಿ ನಿಗದಿಪಡಿಸಲಾದ ೮೨ ಲಕ್ಷ ರೂ. ಅನುದಾನದಲ್ಲಿ ಸರ್ಕಾರಿ ಆದೇಶಗಳು, ಅರ್ಜಿ ನಮೂನೆಗಳು ಹಾಗೂ ಪ್ರಮುಖ ಪ್ರಕಟಣೆಗಳನ್ನು ತುಳು ಭಾಷೆಗೆ ಅನುವಾದಿಸಲಾಗುತ್ತದೆ. ಕರಾವಳಿ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುವ ಹೊರ ಜಿಲ್ಲೆಯ ಅಧಿಕಾರಿಗಳು ಮತ್ತು ನೌಕರರಿಗೆ ಮೂಲಭೂತ ತುಳು ಭಾಷಾ ತರಬೇತಿ ನೀಡಲಾಗುತ್ತದೆ.
ತುಳು ಭಾಷಿಗರ ದಶಕಗಳ ಹೋರಾಟಕ್ಕೆ ರಾಜ್ಯ ಮಟ್ಟದಲ್ಲಿ ಜಯ ಸಿಕ್ಕಿದ್ದರೂ, ತುಳುವನ್ನು ಕೇಂದ್ರ ಸರ್ಕಾರದ ಸಂವಿಧಾನದ ೮ನೇ ಅನುಸೂಚಿಗೆ ಸೇರಿಸುವುದು ತುಳು ಸಂಘಟನೆಗಳ ಅಂತಿಮ ಗುರಿ. ಪ್ರಸ್ತುತ ರಾಜ್ಯ ಸರ್ಕಾರ ನೀಡಿದ ಮಾನ್ಯತೆಯು ಕೇಂದ್ರದ ಮೇಲೆ ಒತ್ತಡ ಹೇರಲು ಬಲವಾದ ಸಾಕ್ಷಿಯಾಗಲಿದೆ.
ಭವ್ಯ ಇತಿಹಾಸ ಮತ್ತು ಲಿಪಿ ಪರಂಪರೆ
ತುಳು ಭಾಷೆಯು ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದ ಅತ್ಯಂತ ಪ್ರಾಚೀನ ಮತ್ತು ಶ್ರೀಮಂತ ಇತಿಹಾಸ ಹೊಂದಿರುವ ಭಾಷೆ. ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಹಾಗೂ ಕೇರಳದ ಕಾಸರಗೋಡು ಜಿಲ್ಲೆಯನ್ನೊಳಗೊಂಡ ಪ್ರದೇಶವನ್ನು 'ತುಳುನಾಡು' ಎಂದು ಕರೆಯಲಾಗುತ್ತದೆ. ದ್ರಾವಿಡ ಭಾಷಾ ಕುಟುಂಬದ ಪ್ರಮುಖ ಐದು ಭಾಷೆಗಳಲ್ಲಿ (ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ತುಳು) ತುಳು ಕೂಡ ಒಂದು. ಪ್ರಖ್ಯಾತ ಭಾಷಾ ವಿಜ್ಞಾನಿ ಡಾ. ರಾಬರ್ಟ್ ಕಾಲ್ವ್ವೆಲ್ ತಮ್ಮ 'ದ್ರಾವಿಡ ಭಾಷೆಗಳ ತೌಲನಿಕ ವ್ಯಾಕರಣ' ಕೃತಿಯಲ್ಲಿ, "ತುಳು ಭಾಷೆಯು ದ್ರಾವಿಡ ಭಾಷಾ ಕುಟುಂಬದಲ್ಲೇ ಅತ್ಯಂತ ಹೆಚ್ಚು ವಿಕಸನಗೊಂಡ ಮತ್ತು ವ್ಯವಸ್ಥಿತವಾದ ಭಾಷೆ" ಎಂದು ಶ್ಲಾಘಿಸಿದ್ದಾರೆ. ಇದು ಸುಮಾರು ೨೦೦೦ಕ್ಕೂ ಹೆಚ್ಚು ವರ್ಷಗಳ ಇತಿಹಾಸವನ್ನು ಹೊಂದಿದೆ. ತುಳು ಭಾಷೆಗೆ ತನ್ನದೇ ಆದ ವಿಶಿಷ್ಟ ಲಿಪಿಯಿದೆ. ಇದನ್ನು 'ತುಳು ಲಿಪಿ' ಅಥವಾ 'ತಿಗಳಾರಿ ಲಿಪಿ' ಎಂದು ಕರೆಯಲಾಗುತ್ತದೆ. ಇದು ಗ್ರಂಥ ಲಿಪಿಯಿಂದ ವಿಕಸನಗೊಂಡಿದೆ. ಮಧ್ವಾಚಾರ್ಯರ ಕಾಲದ (೧೩ನೇ ಶತಮಾನ) ಅನೇಕ ಧಾರ್ಮಿಕ ಗ್ರಂಥಗಳು ಮತ್ತು ತಾಳೆಗರಿಗಳು ಈ ತುಳು ಲಿಪಿಯಲ್ಲೇ ಬರೆಯಲ್ಪಟ್ಟಿವೆ. ಆದರೆ, ಕಾಲಕ್ರಮೇಣ ಮುದ್ರಣ ತಂತ್ರಜ್ಞಾನದ ಕೊರತೆಯಿಂದಾಗಿ ಸಾಹಿತ್ಯಿಕವಾಗಿ ಕನ್ನಡ ಲಿಪಿಯ ಬಳಕೆ ಹೆಚ್ಚಾಯಿತು.
ಮೌಖಿಕ ಮತ್ತು ಲಿಖಿತ ಸಾಹಿತ್ಯ
ತುಳು ಸಾಹಿತ್ಯವನ್ನು ಮೌಖಿಕ ಮತ್ತು ಲಿಖಿತ ಸಾಹಿತ್ಯವೆಂದು ವಿಭಾಗಿಸಬಹುದು. ತುಳು ಭಾಷೆಯ ಜೀವಾಳ ಇರುವುದು ಅದರ ಜಾನಪದದಲ್ಲಿ. ಪಾಡ್ದನಗಳು, ಕಬ್ಬಿಟಗಳು(ಗದ್ದೆ ಕೆಲಸದ ಸಂದರ್ಭ ಜನಪದರ ಬಾಯಿಂದ ಬಾಯಿಗೆ ಹರಿದು ಬಂದ ಹಾಡುಗಳು) ಮತ್ತು ಜಾನಪದ ಕಥೆಗಳು ತಲೆಮಾರುಗಳಿಂದ ಮೌಖಿಕವಾಗಿ ಹರಿದುಬಂದಿವೆ. ಇವುಗಳು ತುಳು ಸಂಸ್ಕೃತಿಯ ಇತಿಹಾಸವನ್ನು ಸಾರುತ್ತವೆ.
ಲಭ್ಯವಿರುವ ಅತ್ಯಂತ ಹಳೆಯ ತುಳು ಮಹಾಕಾವ್ಯವೆಂದರೆ ೧೫ನೇ ಶತಮಾನದ 'ಶ್ರೀ ಮಹಾಭಾರತೋ' (ಕರ್ತೃ ಅರುಣಾಬ್ಜ ಕವಿ). ಇದರೊಂದಿಗೆ 'ತುಳು ದೇವೀ ಮಹಾತ್ಮೆ' ಮತ್ತು 'ಭಾಗವತೋ'ದಂತಹ ಕೃತಿಗಳು ತುಳು ಭಾಷೆಯ ಲಿಖಿತ ಪರಂಪರೆಗೆ ಸಾಕ್ಷಿ. ತುಳು ಭಾಷೆಯು ಕೇವಲ ಸಂವಹನ ಮಾಧ್ಯಮವಾಗಿರದೆ, ಅಲ್ಲಿನ ವಿಶಿಷ್ಟ ಆಚರಣೆಗಳೊಂದಿಗೆ ಬೆಸೆದುಕೊಂಡಿದೆ. ತುಳುನಾಡಿನ ದೈವಾರಾಧನೆಯ ಸಂದರ್ಭದಲ್ಲಿ ಬಳಸುವ ನುಡಿಗಟ್ಟುಗಳು ಮತ್ತು ಪಾಡ್ದನಗಳು ತುಳು ಭಾಷೆಯ ಸಾಂಸ್ಕೃತಿಕ ಗಟ್ಟಿತನವನ್ನು ತೋರ್ಪಡಿಸುತ್ತವೆ.
ಯಕ್ಷಗಾನ ಮತ್ತು ರಂಗಭೂಮಿಗಳು ಇತ್ತೀಚಿನ ದಶಕಗಳಲ್ಲಿ ತುಳು ಭಾಷೆಯನ್ನು ಜಾಗತಿಕ ಮಟ್ಟದಲ್ಲಿ ಜೀವಂತವಾಗಿಡಲು ದೊಡ್ಡ ಕೊಡುಗೆ ನೀಡಿವೆ. ಪ್ರಸ್ತುತ ತುಳು ಭಾಷೆಯನ್ನು ಸುಮಾರು ೨೫ ರಿಂದ ೩೦ ಲಕ್ಷ ಜನ ಮಾತನಾಡುತ್ತಾರೆ. ಸರ್ಕಾರವು ಭಾಷೆಗೆ ಮಾನ್ಯತೆ ನೀಡಿರುವುದು, ತುಳು ಇತಿಹಾಸಕ್ಕೆ ಸಿಕ್ಕ ದೊಡ್ಡ ಗೌರವ.
ಶಾಸನಗಳ ದಾಖಲೆ
ದೀರ್ಘ ಕಾಲದವರೆಗೆ ತುಳುವನ್ನು ಕೇವಲ ಆಡುಭಾಷೆ ಎಂದೇ ಭಾವಿಸಲಾಗಿತ್ತು. ಆದರೆ ಇತ್ತೀಚಿನ ಸಂಶೋಧನೆಗಳು ಮತ್ತು ಪತ್ತೆಯಾದ ಶಾಸನಗಳು ತುಳು, ಲಿಖಿತ ರೂಪದಲ್ಲೂ ಅತ್ಯಂತ ಹಳೆಯದು ಎಂಬುದನ್ನು ಸಾಬೀತುಪಡಿಸಿವೆ. ಮಂಗಳೂರಿನ ಕುಲಶೇಖರದ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಪತ್ತೆಯಾದ ಕುಲಶೇಖರ ಆಳುಪೇಂದ್ರನ ಶಿಲಾ ಶಾಸನ (ಕ್ರಿ.ಶ. ೧೧೫೯), ಇದುವರೆಗೆ ದೊರೆತಿರುವ, ಕಾಲ ಉಲ್ಲೇಖವಿರುವ ಅತ್ಯಂತ ಪ್ರಾಚೀನ ತುಳು ಶಾಸನ ಎಂದು ಇತಿಹಾಸಕಾರರು ಗುರುತಿಸಿದ್ದಾರೆ. ಉಡುಪಿ ಜಿಲ್ಲೆಯ ಕೋಟದ ದೇವಸ್ಥಾನದಲ್ಲಿ ಸಿಕ್ಕಿರುವ ಶಾಸನ (ಕ್ರಿ.ಶ. ೧೧೭೫-೭೬)ದಲ್ಲಿ ಆಳುಪ ರಾಜ ಕುಲಶೇಖರನು ದೇವಸ್ಥಾನಕ್ಕೆ ಭೂದಾನ ನೀಡಿದ ಉಲ್ಲೇಖವಿದೆ. ಇದು ಅಂದಿನ ಕಾಲದಲ್ಲೇ ತುಳು ಲಿಪಿ (ತಿಗಳಾರಿ ಲಿಪಿ) ಆಡಳಿತ ಮತ್ತು ಧಾರ್ಮಿಕ ವ್ಯವಹಾರಗಳಲ್ಲಿ ಚಾಲ್ತಿಯಲ್ಲಿತ್ತು ಎಂಬುದಕ್ಕೆ ಸಾಕ್ಷಿ. ಇತಿಹಾಸಕಾರರ ಪ್ರಕಾರ ೭ ಅಥವಾ ೮ನೇ ಶತಮಾನಕ್ಕೆ ಸೇರಿದ ಪೆಲಾತ್ತೂರು ಶಾಸನ, ಅತ್ಯಂತ ಹಳೆಯ ಗ್ರಂಥ ಪ್ರಭಾವಿತ ತುಳು ಲಿಪಿಯ ರಚನೆ. ಇವುಗಳ ಜೊತೆಗೆ, ಕಾಸರಗೋಡಿನ ಅನಂತಪುರ ದೇವಸ್ಥಾನ, ವಿಟ್ಲದ ಮಾಮೇಶ್ವರ ಮುಂತಾದೆಡೆ, ಇತಿಹಾಸ ತಜ್ಞರಾದ ಡಾ. ಕೆ. ವಿ. ರಮೇಶ್ ಹಾಗೂ ಡಾ. ಪಿ. ಗುರುರಾಜ ಭಟ್ ಅವರು ತುಳು ಶಾಸನಗಳನ್ನು ಗುರುತಿಸಿ ಅಧ್ಯಯನ ನಡೆಸಿದ್ದಾರೆ.
ಪಾಡ್ದನಗಳ ಸಾಂಸ್ಕೃತಿಕ ಗತ್ತು
ಪಾಡ್ದನ (ಅಥವಾ ಪಾರ್ದನ) ಎಂದರೆ ತುಳುನಾಡಿನ ವಿಶಿಷ್ಟ ಮೌಖಿಕ ಮಹಾಕಾವ್ಯಗಳು. ಇವು ಕೇವಲ ಹಾಡುಗಳಲ್ಲ, ತುಳುನಾಡಿನ ಇತಿಹಾಸ, ಸಂಸ್ಕೃತಿ, ಸಾಮಾಜಿಕ ನ್ಯಾಯ ಮತ್ತು ದೈವಿಕ ನಂಬಿಕೆಗಳ ಜೀವಂತ ದಾಖಲೆಗಳು. ಪಾಡ್ದನಗಳನ್ನು ಪ್ರಮುಖವಾಗಿ ಭೂತಾರಾಧನೆ ಅಥವಾ ದೈವಾರಾಧನೆಯ ಸಂದರ್ಭದಲ್ಲಿ ದೈವದ ಸೃಷ್ಟಿ, ಜನ್ಮ ವೃತ್ತಾಂತ, ಕಾರ್ಣಿಕದ ಕಥೆ ಮತ್ತು ಸಾಹಸಗಳನ್ನು ವಿವರಿಸಲು ಹಾಡಲಾಗುತ್ತದೆ. ಸಮಾಜದಲ್ಲಿ ಅನ್ಯಾಯದ ವಿರುದ್ಧ ಹೋರಾಡಿ, ವೀರಮರಣವನ್ನಪ್ಪಿ, ದೈವತ್ವಕ್ಕೇರಿದ ಶೋಷಿತ ವರ್ಗದ ನಾಯಕರ ಕಥೆಗಳೂ ಇದರಲ್ಲಿವೆ. ಸುಮಾರು ೧೫,೬೮೩ ಸಾಲುಗಳನ್ನು ಹೊಂದಿರುವ 'ಸಿರಿ ಪಾಡ್ದನ' ತುಳುವಿನ ಅತಿ ದೊಡ್ಡ ಮೌಖಿಕ ಮಹಾಕಾವ್ಯ. ಪಾಡ್ದನಗಳಲ್ಲಿ ಬಳಕೆಯಾಗುವ ತುಳು ಭಾಷೆಯು ಅತ್ಯಂತ ಪ್ರಾಚೀನವಾಗಿದ್ದು, ಪ್ರಸ್ತುತ ಆಡುವ ತುಳು ಭಾಷೆಗಿಂತ ಭಿನ್ನವಾದ ಹಳಗನ್ನಡ ಅಥವಾ ಹಳೇ ತುಳುವಿನ ಅಪರೂಪದ ಪ್ರಕೃತಿ ಸಹಜ ಶಬ್ದಗಳನ್ನು ಹೊಂದಿದೆ.
ತುಳು ಭಾಷೆಯು ಎರಡು ನೆಲೆಗಟ್ಟುಗಳ (ಲಿಖಿತ ಶಾಸನಗಳು ಮತ್ತು ಮೌಖಿಕ ಪಾಡ್ದನಗಳು) ಮೇಲೆಯೇ ಇಂದಿಗೂ ತನ್ನ ಅಸ್ತಿತ್ವವನ್ನು ಗಟ್ಟಿಯಾಗಿ ಕಾಯ್ದುಕೊಂಡಿದೆ. ದೈವಾರಾಧನೆ ಕೇವಲ ಒಂದು ಧಾರ್ಮಿಕ ಆಚರಣೆಯಾಗಿರದೆ, ತುಳುವರ ಬದುಕು, ಸಾಮಾಜಿಕ ನ್ಯಾಯ ಮತ್ತು ಪ್ರಕೃತಿಯೊಂದಿಗಿನ ಅವಿನಾಭಾವ ಸಂಬAಧದ ಸಂಕೇತವಾಗಿದೆ. ತುಳುನಾಡಿನಲ್ಲಿ 'ದೈವ' ಅಥವಾ 'ಭೂತ' ಎಂದರೆ ಕೆಟ್ಟ ಶಕ್ತಿಗಳಲ್ಲ, ಅವು ಸ್ಥಳೀಯ ಕಾವಲು ದೇವತೆಗಳು ಮತ್ತು ರಕ್ಷಕ ಶಕ್ತಿಗಳು.
ಉಪಸಂಹಾರ
ಸಾವಿರಾರು ವರ್ಷಗಳ ಇತಿಹಾಸವಿರುವ, ಕೋಟಿ-ಚೆನ್ನಯ್ಯ ಹಾಗೂ ಸಿರಿ ಪರಂಪರೆಯ ಹೆಮ್ಮೆಯ ನುಡಿಯಾದ ತುಳು ಭಾಷೆಗೆ ರಾಜ್ಯ ಸರ್ಕಾರವು ಅಧಿಕೃತ ಆಡಳಿತ ಭಾಷಾ ಸ್ಥಾನಮಾನ ನೀಡಿರುವುದು ಕರಾವಳಿ ಜನರ ದಶಕಗಳ ಹೋರಾಟಕ್ಕೆ ಸಂದ ಗೌರವ. ಈ ನಿರ್ಧಾರದಿಂದಾಗಿ ತುಳು ಭಾಷೆಯು ಕೇವಲ ಆಡುಭಾಷೆಯಾಗಿ ಉಳಿಯದೆ, ಆಡಳಿತ, ಶಿಕ್ಷಣ ಮತ್ತು ತಂತ್ರಜ್ಞಾನದ ರಂಗದಲ್ಲೂ ಮುÄನ್ನಡೆಯಲು ಹಾದಿ ಸುಗಮವಾಗಿದೆ. ಪ್ರಾದೇಶಿಕ ಭಾಷೆಗಳ ಅಸ್ತಿತ್ವಕ್ಕೆ ಧಕ್ಕೆ ಬರುತ್ತಿರುವ ಇಂದಿನ ದಿನಗಳಲ್ಲಿ, ತುಳುವಿಗೆ ಸಿಕ್ಕಿರುವ ಈ ಹೊಸ ಆಡಳಿತಾತ್ಮಕ ಬಲವು ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಹೊಸ ಭರವಸೆ ನೀಡಿದೆ. ಮುಂದಿನ ದಿನಗಳಲ್ಲಿ ಈ ಭಾಷೆಯು ಸಂವಿಧಾನದ ೮ನೇ ಅನುಸೂಚಿಗೆ ಸೇರ್ಪಡೆಗೊಂಡು ದೇಶಮಟ್ಟದಲ್ಲಿ ಮಿನುಗಲಿ ಎಂಬುದೇ ಸಕಲ ತುಳು ಭಾಷಾಭಿಮಾನಿಗಳ ಆಶಯ.