ಚೆಯ್ಯಂಡಾಣೆ, ಅ. ೨೦: ಕನ್ನಡ ರಾಜ್ಯೋತ್ಸವದ ಅಂಗವಾಗಿ ಚೆಯ್ಯಂಡಾಣೆ ಕನ್ನಡ ರಾಜ್ಯೋತ್ಸವ ಕ್ರೀಡಾ ಸಮಿತಿಯ ವತಿಯಿಂದ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದ್ದು, ಇದರ ಭಾಗವಾಗಿ ನವೆಂಬರ್ ೨ ರಂದು ನರಿಯಂದಡ, ಕೋಕೇರಿ, ಚೇಲಾವರ ಗ್ರಾಮಸ್ಥರಿಗೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಹಾಗೂ ಕ್ರಿಕೆಟ್ ಪಂದ್ಯಾಟ ನಡೆಯಲಿದೆ.

ಅಂದು ಬೆಳಿಗ್ಗೆ ೯ ಗಂಟೆಗೆ ನರಿಯಂದಡ ಕೇಂದ್ರ ಪ್ರೌಢಶಾಲೆಯ ಮೈದಾನದಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಆರಂಭವಾಗಲಿದ್ದು, ೦.೨೨ ಎಂಎA ಹಾಗೂ ೧೨ ಬೋರ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.

ಮಧ್ಯಾಹ್ನ ೨ ಗಂಟೆಗೆ ಗ್ರಾಮಸ್ಥರಿಗಾಗಿ ಕ್ರಿಕೆಟ್ ಪಂದ್ಯಾಟವನ್ನು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಆಯೋಜಿಸಲಾಗಿದೆ.

ಮೊದಲ ಪಂದ್ಯದಲ್ಲಿ ನರಿಯಂದಡ ಹಾಗೂ ಚೇಲಾವರ ತಂಡಗಳು ಮುಖಾಮುಖಿ ಯಾಗಲಿವೆ. ಈ ಪಂದ್ಯದಲ್ಲಿ ವಿಜೇತರಾದ ತಂಡವು ಫೈನಲ್ ಪಂದ್ಯದಲ್ಲಿ ಕೋಕೇರಿ ತಂಡವನ್ನು ಎದುರಿಸಲಿದೆ.

ಕ್ರೀಡಾಕೂಟದ ಮೂಲಕ ಗ್ರಾಮಸ್ಥರಲ್ಲಿ ಕ್ರೀಡಾಸಕ್ತಿ ಹಾಗೂ ಪರಸ್ಪರ ಸೌಹಾರ್ದವನ್ನು ಬೆಳೆಸುವ ಉದ್ದೇಶ ಹೊಂದಲಾಗಿದೆ. ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕೆಂದು ಕನ್ನಡ ರಾಜ್ಯೋತ್ಸವ ಕ್ರೀಡಾಕೂಟ ಸಮಿತಿಯು ಪ್ರಕಟಣೆಯಲ್ಲಿ ಮನವಿ ಮಾಡಿದೆ.