ಮಡಿಕೇರಿ, ಅ. ೧೭: ಮಡಿಕೇರಿ ದಸರಾ ಉತ್ಸವಕ್ಕೆ ಈ ಬಾರಿ ದಾಖಲೆಯ ೨ ಕೋಟಿ ರೂ. ಅನುದಾನ ದೊರೆತಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಆಯುಧ ಪೂಜೆಯಂದು ಕೊಡಗು ಮೂಲದ ಕ್ರೀಡಾಪಟು ಪೂವಮ್ಮ ಸೇರಿದಂತೆ ಖ್ಯಾತ ಕಲಾವಿದರಾದ ವಾಸುಕಿ ವೈಭವ್ ಹಾಗೂ ಅನನ್ಯ ಭಟ್ ಆಗಮಿಸಲಿದ್ದಾರೆ ಎಂದು ದಸರಾ ಸಮಿತಿ ಪದಾಧಿಕಾರಿಗಳು ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷ ಅರುಣ್ಕುಮಾರ್ ಮಾತನಾಡಿ, ಅಕ್ಟೋಬರ್ ೧೧ರಿಂದ ಕರಗ ಉತ್ಸವ ಆರಂಭವಾಗಿದ್ದು, ಅಕ್ಟೋಬರ್ ೧೨ರಿಂದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಕವಿಗೋಷ್ಠಿ, ಮಕ್ಕಳ ದಸರಾ ಈಗಾಗಲೇ ನಡೆದಿದ್ದು, ಜಾನಪದ ದಸರಾ, ಮಹಿಳಾ ದಸರಾ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದಸರಾ ಉತ್ಸವದ ಯಶಸ್ಸಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ದಸರಾ ಸಮಿತಿ ಅಧ್ಯಕ್ಷರು ಹಾಗೂ ನಗರಸಭೆ ಅಧ್ಯಕ್ಷೆ ಕಲಾವತಿ ಮಾತನಾಡಿ, ದಸರಾ ಉತ್ಸವಕ್ಕೆ ೨ ಕೋಟಿ ರೂ. ಅನುದಾನ ದೊರೆತಿದ್ದು, ಪ್ರತಿದಿನ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಸಾರ್ವಜನಿಕರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಉತ್ಸವದ ಸಂಭ್ರಮ ಹೆಚ್ಚಿಸಬೇಕು ಎಂದರು.
ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ ಮಾತನಾಡಿ, ಶಾಸಕ ಡಾ. ಮಂತರ್ ಗೌಡ ಅವರ ಪ್ರಯತ್ನದಿಂದ ಈ ಬಾರಿ ದಾಖಲೆಯ ೨ ಕೋಟಿ ರೂ. ಅನುದಾನ ದೊರೆತಿದೆ. ಅನುದಾನದ ಬಹುಪಾಲು ಕರಗ ಹಾಗೂ ದಶಮಂಟಪಗಳಿಗೆ ನೀಡಬೇಕಿರುವುದರಿಂದ ಉಳಿದ ೫೦ ಲಕ್ಷದಲ್ಲಿ ದಸರಾ ಉತ್ಸವ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ದಸರಾ ಸಮಿತಿ ಉಪಾಧ್ಯಕ್ಷರು ಹಾಗೂ ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ಏಷ್ಯನ್ ಗೇಮ್ಸ್ನಲ್ಲಿ ಪಾಲ್ಗೊಂಡು ಚಿನ್ನದ ಪದಕ ಗೆದ್ದಿರುವ ಕೊಡಗು ಮೂಲದ ಕ್ರೀಡಾಪಟು ಪೂವಮ್ಮ ಅವರು ಆಯುಧ ಪೂಜೆಯಂದು ಆಗಮಿಸಲಿದ್ದು, ಅವರನ್ನು ಸನ್ಮಾನಿಸಲಾಗುವುದು ಎಂದರು.
ದಸರಾ ದೀಪಾಲಂಕಾರದಲ್ಲಿನ ಲೋಪದೋಷಗಳ ಕುರಿತು ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಮಡಿಕೇರಿ ಮೂಲದ ಅನುಭವಿ ವ್ಯಕ್ತಿಗೆ ದೀಪಾಲಂಕಾರದ ಟೆಂಡರ್ ದೊರೆಯುತ್ತಿತ್ತು. ಆದರೆ, ಈ ಬಾರಿ ಬೆಂಗಳೂರು ಮೂಲದ ಸಂಸ್ಥೆಯೊAದು ಕಡಿಮೆ ಮೊತ್ತಕ್ಕೆ ಟೆಂಡರ್ ಪಡೆದಿದ್ದು, ಅನುಭವದ ಕೊರತೆಯಿಂದ ಕೆಲವು ಸಮಸ್ಯೆಗಳು ಎದುರಾಗಿವೆ. ಅಲಂಕಾರ ಸಮಿತಿ ಅಧ್ಯಕ್ಷರು ಸೂಕ್ತ ಮಾಹಿತಿ ನೀಡಿದ್ದರೂ ಕೆಲವೆಡೆ ಲೋಪದೋಷಗಳು ಕಂಡುಬAದಿವೆ. ಕೆಲವು ಕಡೆ ಉದ್ದೇಶಪೂರ್ವಕವಾಗಿ ವಿದ್ಯುತ್ ತಂತಿಗಳನ್ನು ಕತ್ತರಿಸಿರುವುದು ಹಾಗೂ ಕಟೌಟ್ಗಳ ಹಗ್ಗಗಳನ್ನು ತುಂಡರಿಸಿರುವ ಘಟನೆಗಳೂ ನಡೆದಿವೆ. ಈ ಕುರಿತು ಸಂಸ್ಥೆಯ ಪ್ರಮುಖರೊಂದಿಗೆ ಚರ್ಚಿಸಲಾಗಿದ್ದು, ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ದಶಮಂಟಪ ಸಮಿತಿ ಅಧ್ಯಕ್ಷ ಪಾಂಡೀರ ಪೂಣಚ್ಚ ಮಾತನಾಡಿ, ದಶಮಂಟಪಗಳ ತೀರ್ಪುಗಾರಿಕೆಗೆ ಈಗಾಗಲೇ ಸಮಯ ಮತ್ತು ಸ್ಥಳ ನಿಗದಿಪಡಿಸಲಾಗಿದೆ. ಮಂಟಪಗಳಲ್ಲಿ ಅಪಾಯಕಾರಿ ವಸ್ತುಗಳನ್ನು ಬಳಸಬಾರದು ಹಾಗೂ ನಿಗದಿತ ಸಮಯವನ್ನು ಕಡ್ಡಾಯವಾಗಿ ಪಾಲಿಸಬೇಕು.
ಸಮಯ ಪಾಲಿಸದಿದ್ದಲ್ಲಿ ಐದು ಅಂಕಗಳನ್ನು ಕಡಿತಗೊಳಿಸುವುದು ಸೇರಿದಂತೆ ಅಗತ್ಯ ನಿಯಮಗಳನ್ನು ಮಂಟಪ ಸಮಿತಿಗಳಿಗೆ ತಿಳಿಸಲಾಗಿದೆ ಎಂದರು. ಗೋಷ್ಠಿಯಲ್ಲಿ ದಸರಾ ಸಮಿತಿ ಖಜಾಂಚಿ ಸಬಿತಾ ಉಪಸ್ಥಿತರಿದ್ದರು.