ಗೋಣಿಕೊಪ್ಪಲು, ಅ. ೧೭: ದಶಮಂಟಪಗಳಿಗೆ ತಲಾ ೨.೫೦ ಲಕ್ಷ ಅನುದಾನ ಹಾಗೂ ನವರಾತ್ರಿಯಂದು ಅತ್ಯುತ್ತಮ ಮಂಟಪಗಳಿಗೆ ನೀಡುವ ಬಹುಮಾನಗಳ ಒಟ್ಟು ಮೊತ್ತವನ್ನು ೧ ಲಕ್ಷಕ್ಕೆ ಏರಿಸುವ ಮೂಲಕ ದಶಮಂಟಪಗಳ ಅಧ್ಯಕ್ಷರುಗಳ ಬಹು ಬೇಡಿಕೆಯನ್ನು ಈಡೇರಿಸುವಲ್ಲಿ ವೀರಾಜಪೇಟೆ ಶಾಸಕರು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಹಾಗೂ ಶ್ರೀ ಕಾವೇರಿ ದಸರಾ ಜನೋತ್ಸವದ ಅಧ್ಯಕ್ಷರೂ ಆಗಿರುವ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಈಡೇರಿಸಿದರು.
ಶ್ರೀ ಕಾವೇರಿ ದಸರಾ ಜನೋತ್ಸವದ ಅಂಗವಾಗಿ ಗೋಣಿಕೊಪ್ಪ ದಸರಾ ದಶಮಂಟಪ ಸಮಿತಿಗಳೊಂದಿಗೆ ನಡೆದ ವಿಶೇಷ ಸಭೆಯಲ್ಲಿ ಶಾಸಕ ಪೊನ್ನಣ್ಣ ದಶಮಂಟಪಗಳ ಅಧ್ಯಕ್ಷರುಗಳು ಮಂಡಿಸಿದ ಬೇಡಿಕೆಗಳಿಗೆ ಸ್ಪಂದಿಸಿದರು. ಈ ಬಾರಿಯ ದಸರಾ ಜನೋತ್ಸವ ಅತ್ಯಂತ ಅಚ್ಚುಕಟ್ಟಾಗಿ ಮತ್ತು ಯಶಸ್ವಿಯಾಗಿ ನಡೆಯುತ್ತಿರುವ ಬಗ್ಗೆ ಮೆಚ್ಚುಗೆಯ ನುಡಿಯಾಡಿದರು. ದಸರಾ ಯಶಸ್ವಿಗೆ ನಗರದ ಪತ್ರಕರ್ತರು ಉತ್ತಮ ರೀತಿಯಲ್ಲಿ ಸ್ಪಂಧಿಸುತ್ತಿರುವ ಬಗ್ಗೆ ಶ್ಲಾಘಿಸಿದರು.
ಕಾವೇರಿ ಕಲಾ ವೇದಿಕೆಯ ಆವರಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಶಾಸಕ ಪೊನ್ನಣ್ಣ, ದಸರಾ ಜನೋತ್ಸವದ ಕೊನೆಯ ದಿನ ನಡೆಯುವ ಅದ್ಧೂರಿ ಶೋಭಾಯಾತ್ರೆಯ ಬಗ್ಗೆ ಗಂಭೀರವಾಗಿ ಚರ್ಚಿಸಿದರು. ಶೋಭಾಯಾತ್ರೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲರೂ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಜಾಗೃತಿ ವಹಿಸಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ದಶಮಂಟಪದ ಅಧ್ಯಕ್ಷ ಕಾಡ್ಯಮಾಡ ಚೇತನ್ ಮಾತನಾಡಿ, ಮಂಟಪಗಳು ತಲಾ ೧೦ ಲಕ್ಷ ವೆಚ್ಚದಲ್ಲಿ ನವರಾತ್ರಿ ದಿನದಂದು ಉತ್ತಮ ಪ್ರದರ್ಶನ ನೀಡುತ್ತಿವೆ. ಕಾವೇರಿ ದಸರಾ ಸಮಿತಿ ನೀಡುವ ಅನುದಾನವನ್ನು ಕನಿಷ್ಟ ಮೂರುವರೆ ಲಕ್ಷಕ್ಕೆ ಏರಿಸಬೇಕು. ದಾನಿಗಳ ಬಳಿ ತೆರಳಿದಾಗ ಸರ್ಕಾರ ಅನುದಾನ ನೀಡುತ್ತಿದೆ ಎಂಬ ಮಾತನ್ನು ಆಡುತ್ತಾರೆ. ಇದರಿಂದಾಗಿ ದಾನಿಗಳೇ ನಿರೀಕ್ಷಿತ ಮಟ್ಟದಲ್ಲಿ ಹಣ ಸಂಗ್ರಹವಾಗುತ್ತಿಲ್ಲ ಎಂದು ಗಮನ ಸೆಳೆದರು.
ಇವರ ಮಾತಿಗೆ ಕಾಡ್ಲಯ್ಯಪ್ಪ ದಸರಾ ಸಮಿತಿಯ ಶಾಜಿ ಅಚ್ಚುತ್ತನ್ ಧನಿಗೂಡಿಸಿದರು. ನಾಡ ಹಬ್ಬ ದಸರಾ ಸಮಿತಿಯ ಪ್ರಭಾಕರ್ ನೆಲ್ಲಿತ್ತಾಯ ಪ್ರತಿಕ್ರಿಯಿಸಿ ಕನಿಷ್ಟ ೩ ಲಕ್ಷ ನೀಡುವಂತೆ ಕೋರಿದರು. ಅಂತಿಮವಾಗಿ ಶಾಸಕರು ಮಾತನಾಡಿ ಈ ಬಾರಿ ನಗರದ ವಿದ್ಯುತ್ ಅಲಂಕಾರಕ್ಕೆ ಹೆಚ್ಚಿನ ಹಣವನ್ನು ವಿನಿಯೋಗಿಸಲಾಗಿದೆ. ಅಂತಿಮ ದಿನದಂದು ಹಲವು ಗಣ್ಯರನ್ನು ಸನ್ಮಾನಿಸುವ ಕಾರ್ಯಕ್ರಮವಿದೆ. ವೇದಿಕೆ ಖರ್ಚು ಹೆಚ್ಚಾಗಿದೆ. ಈ ಬಾರಿ ೨.೫೦ ಲಕ್ಷ ರೂ.ಗಳನ್ನು ಮಂಟಪಗಳಿಗೆ ನೀಡಲಾಗುತ್ತದೆ. ದಶಮಂಟಪ ಅಧ್ಯಕ್ಷರುಗಳು ಸಹಕರಿಸುವಂತೆ ಮನವಿ ಮಾಡಿದರು.
ಕಾವೇರಿ ದಸರಾ ಸಮಿತಿ ನೀಡುವ ಅನುದಾನ ೬ ತಿಂಗಳ ನಂತರದ ಸಮಿತಿಗಳಿಗೆ ತಲುಪುತ್ತಿದೆ. ಈ ಬಾರಿ ಬೇಗನೇ ಅನುದಾನವನ್ನು ಸಮಿತಿಯ ಖಾತೆಗಳಿಗೆ ಜಮಾ ಮಾಡಬೇಕು. ತೀರ್ಪುಗಾರಿಕೆಯನ್ನು ಕಳೆದ ವರ್ಷದಂತೆ ಪಾರದರ್ಶಕವಾಗಿ ನೀಡಲು ಅಗತ್ಯವಿರುವ ಅಧಿಕಾರಿಗಳನ್ನು ನೇಮಿಸಬೇಕು. ಮಂಟಪಗಳು ತೆರಳುವ ಕೆಲವು ರಸ್ತೆಗಳು ಹಾಳಾಗಿದ್ದು ಕೂಡಲೇ ದುರಸ್ತಿಪಡಿಸಬೇಕೆಂದು ದಶಮಂಟಪಗಳ ಪ್ರಮುಖರುಗಳಾದ, ಸಜನ್, ಶಾಜಿ ಅಚ್ಚುತ್ತನ್, ಮುರುಗ, ನಾರಾಯಣ ಸ್ವಾಮಿ ನಾಯ್ಡು, ಸುದೀಶ್ ರೈ, ಇನ್ನಿತರ ಪ್ರಮುಖರು ಗಮನ ಸೆಳೆದರು. ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಸಭೆಯಲ್ಲಿ ಕಾವೇರಿ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಪ್ರಧಾನ ಕಾರ್ಯದರ್ಶಿ ಎನ್.ಎಸ್. ಕಂದ ದೇವಯ್ಯ, ಪ್ರಧಾನ ಸಂಚಾಲಕ ಬಿ.ಎನ್. ಪ್ರಕಾಶ್, ಕಾರ್ಯದರ್ಶಿ ವರಲಕ್ಷಿö್ಮ, ಸಂಯೋಜಕರಾದ ಮನೆಯಪಂಡ ಶೀಲಾ ಬೋಪಣ್ಣ, ದಿಲನ್ ಚಂಗಪ್ಪ, ಎಂ.ಪಿ. ಚಂದನ್ ಕಾಮತ್,ಧ್ಯಾನ್ ಸುಬ್ಬಯ್ಯ, ಎಂ.ಮAಜುಳ ಸೇರಿದಂತೆ ಶ್ರೀ ಕಾವೇರಿ ದಸರಾ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಈ ಬಾರಿಯ ಶೋಭಾಯಾತ್ರೆಯಲ್ಲಿ ಉತ್ತಮವಾಗಿ ಮೂಡಿಬರುವ ಮಂಟಪದ ತಂಡಕ್ಕೆ ರೂ. ೧ ಲಕ್ಷ ನಗದು ಬಹುಮಾನ ನೀಡುವುದಾಗಿ ಶಾಸಕರು ಪ್ರಕಟಿಸಿದರು. ಇದರಲ್ಲಿ ೫೦,೦೦೦ (ಪ್ರ),೩೦,೦೦೦(ದ್ವಿ) ಹಾಗೂ ೨೦,೦೦೦ (ತೃ) ನಗದು ಬಹುಮಾನವಾಗಿ ಆಕರ್ಷಕ ಟ್ರೋಫಿಯೊಂದಿಗೆ ನೀಡಲಾಗುತ್ತದೆ ಎಂದರು. -ಹೆಚ್.ಕೆ. ಜಗದೀಶ್