ಸೋಮವಾರಪೇಟೆ, ಅ. ೧೬: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಕ್ಕೆ ನಿನ್ನೆ ರಾತ್ರಿ ಹಾಗೂ ಇಂದು ಮಧ್ಯಾಹ್ನ ನಂತರ ಧಾರಾಕಾರ ಮಳೆಯಾಗಿದೆ. ಗುಡುಗು ಮಿಂಚಿನ ಆರ್ಭಟದೊಂದಿಗೆ ವರುಣನ ಆರ್ಭಟವೂ ಜೋರಾಗಿದ್ದು, ಕೊಳಚೆ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ನಿನ್ನೆ ರಾತ್ರಿಯಿಂದ ಬೆಳಗ್ಗಿನ ಜಾವದವರೆಗೂ ಸುರಿದ ಮಳೆ, ಇಂದು ಬೆಳಿಗ್ಗೆಯಿಂದ ಬಿಡುವು ನೀಡಿತ್ತು. ಮಧ್ಯಾಹ್ನದ ವೇಳೆಗೆ ದಟ್ಟ ಮೋಡ ಮುಸುಕಿದ ವಾತಾವರಣದೊಂದಿಗೆ ಭಾರೀ ಮಳೆ ಸುರಿಯಿತು.

ಧಾರಾಕಾರ ಮಳೆಯಿಂದಾಗಿ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು. ರಸ್ತೆಯ ಬದಿಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದಿರುವ ಹಿನ್ನೆಲೆ ಚರಂಡಿಯಲ್ಲಿ ಹರಿಯಬೇಕಾದ ಮಳೆ ನೀರು, ರಸ್ತೆಯ ಮೇಲೆ ಹರಿದ ಪರಿಣಾಮ, ರಸ್ತೆಯ ಮೇಲೆ ಜಲ್ಲಿ ಕಲ್ಲುಗಳು, ಕೊಳಚೆ, ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ತ್ಯಾಜ್ಯಗಳು ಹರಿದು ಸಂಚಾರಕ್ಕೆ ಸಮಸ್ಯೆಯಾಗಿತ್ತು.

ಇಲ್ಲಿನ ವಿವೇಕಾನಂದ ವೃತ್ತದ ಬಳಿಯಲ್ಲಿ ಮಳೆಯ ಅವಾಂತರ, ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದಾಗಿ ಕೊಳಚೆಯ ಕೆರೆ ನಿರ್ಮಾಣವಾಗಿತ್ತು. ವಿವೇಕಾನಂದ ವೃತ್ತದಿಂದ ಶಾಂತಳ್ಳಿಗೆ ತಿರುವು ಪಡೆಯುವ ಪ್ರದೇಶದಲ್ಲಿ ಭಾರೀ ಪ್ರಮಾಣದ ಕೊಳಚೆ ನೀರು ಸಂಗ್ರಹವಾಗಿ ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು. ದ್ವಿಚಕ್ರ ವಾಹನಗಳ ಸವಾರರ ಕೊಳಚೆ ನೀರಿನ ಸಿಂಚನದೊAದಿಗೆ ರಸ್ತೆಯಲ್ಲಿ ತೆರಳುವಂತಾಗಿದ್ದು, ಪಾದಚಾರಿಗಳೂ ಸಹ ಕೆಸರಿನ ಕೆರೆಯಲ್ಲಿಯೇ ಸಂಚರಿಸುವAತಾಗಿತ್ತು. ನಾಲ್ಕು ಚಕ್ರದ ವಾಹನಗಳು ಸಂಚರಿಸುವ ಸಂದರ್ಭ ಕೊಳಚೆ ನೀರು ತಗ್ಗುಪ್ರದೇಶದ ಅಂಗಡಿ, ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿತ್ತು. ಚೌಡ್ಲು ಗ್ರಾ.ಪಂ. ವ್ಯಾಪ್ತಿಯ ಗಾಂಧಿನಗರ ಶ್ರೀ ಮಾರಿಯಮ್ಮ ದೇವಾಲಯ ಸಮೀಪವಿರುವ ಚರಣ್ ಕಾಂತ್ ಎಂಬವರ ಮನೆಯೊಳಗೆ ಕೊಳಚೆ ನೀರು ನುಗ್ಗಿ ಸಮಸ್ಯೆಯಾಯಿತು. ರಸ್ತೆಯ ಬದಿಯಲ್ಲಿ ಸೂಕ್ತ ಚರಂಡಿ ಇಲ್ಲದೇ ಇರುವ ಹಿನ್ನೆಲೆ ಮಳೆ ನೀರು ತ್ಯಾಜ್ಯಗಳ ಸಹಿತ ನೇರವಾಗಿ ಮನೆಯಂಗಳಕ್ಕೆ ನುಗ್ಗಿದ ಪರಿಣಾಮ ಮನೆಯಲ್ಲಿ ತ್ಯಾಜ್ಯದ ರಾಶಿ ನಿರ್ಮಾಣವಾಯಿತು. ರಸ್ತೆ ಬದಿಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಮಾಡುವಂತೆ ಹತ್ತಾರು ಬಾರಿ ಸಂಬAಧಿಸಿದ ಗ್ರಾ.ಪಂ.ಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರತಿ ಮಳೆಯಲ್ಲೂ ಮನೆಯೊಳಗೆ ತ್ಯಾಜ್ಯದ ನೀರು ನುಗ್ಗುತ್ತಿದೆ ಎಂದು ಚರಣ್‌ಕಾಂತ್ ದೂರಿದರು.

ಇನ್ನು ನಿನ್ನೆ ಹಾಗೂ ಇಂದು ಸುರಿದ ಮಳೆಯಿಂದ ಕಾಫಿ ಬೆಳೆಗಾರರಲ್ಲಿ ಹರ್ಷ ಮೂಡಿದ್ದು, ಕಾಫಿ ತೋಟಗಳಿಗೆ ಗೊಬ್ಬರ ಹಾಕುವ ಕಾರ್ಯ ಬಿರುಸು ಪಡೆದುಕೊಂಡಿದೆ. ಬಿರು ಬೇಸಿಗೆಯಿಂದಾಗಿ ಕಾಫಿ ತೋಟಕ್ಕೆ ಗೊಬ್ಬರ ಹಾಕಲು ಸಾಧ್ಯವಾಗಿರಲಿಲ್ಲ. ಸಹಕಾರ ಸಂಘಗಳಿAದ ಗೊಬ್ಬರವನ್ನು ಖರೀದಿಸಿ ಮನೆ, ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿತ್ತು. ಇದೀಗ ಮಳೆ ಬಿದ್ದ ಹಿನ್ನೆಲೆ ಕಾಫಿ ತೋಟಗಳಿಗೆ ಗೊಬ್ಬರ ಹಾಕುವ ಕಾರ್ಯ ಭರದಿಂದ ಸಾಗುತ್ತಿದೆ.

ತಾಲೂಕಿನ ಶಾಂತಳ್ಳಿಗೆ ೨.೬೦ ಇಂಚು, ಕಂಬಳ್ಳಿಗೆ ೨.೫ ಇಂಚು, ಬೆಟ್ಟದಕೊಪ್ಪಕ್ಕೆ ೨.೫೮ ಇಂಚು, ಕುಂದಳ್ಳಿಗೆ ೨.೩೭ ಇಂಚು, ಹಳ್ಳಿಯೂರಿಗೆ ೧.೮೦, ಗುಡ್ಡಳ್ಳಿಗೆ ೨.೭೫, ಕೊತ್ನಳ್ಳಿಗೆ ೩.೨೦, ಬಾಚಳ್ಳಿಗೆ ೨.೭೦, ಸೋಮವಾರಪೇಟೆ ಭಾಗಕ್ಕೆ ೧.೭೦, ಹಿರಕರ, ಗೌಡಳ್ಳಿ, ದೊಡ್ಡಮಳ್ತೆ ಭಾಗಕ್ಕೆ ೨.೫೦ ಇಂಚು ಸೇರಿದಂತೆ ಗೋಣಿಮರೂರು, ಅಬ್ಬೂರುಕಟ್ಟೆ ಭಾಗಕ್ಕೂ ಭಾರೀ ಮಳೆ ಸುರಿಯಿತು.