ಮೂರ್ನಾಡು, ಅ. ೧೬: ಇಲ್ಲಿನ ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ೩೩ನೇ ವರ್ಷದ ಅದ್ದೂರಿ ಆಯುಧ ಪೂಜಾ ಮಹೋತ್ಸವ ತಾ.೨೦ರಂದು ನಡೆಯಲಿದೆ.

ಇಲ್ಲಿನ ಪಿಎಂಶ್ರೀ ಕೆಪಿಎಸ್ ಸರ್ಕಾರಿ ಪ್ರೌಢಶಾಲಾ ಮೈದಾನ ಹಾಗೂ ನಾಡ್‌ಮಂದ್‌ನಲ್ಲಿ ನಿರ್ಮಿಸಲಾಗುತ್ತಿರುವ ಭವ್ಯ ಅಲಂಕೃತ ವೇದಿಕೆಯಲ್ಲಿ ನಡೆಯಲಿರುವ ಆಯುಧ ಪೂಜಾ ಮಹೋತ್ಸವಕ್ಕಾಗಿ ಮೂರ್ನಾಡು ಪಟ್ಟಣ ವಿದ್ಯುತ್ ಅಲಂಕಾರದಿAದ ಕಂಗೊಳಿಸುತ್ತಿದ್ದು, ಸಂಭ್ರಮಕ್ಕೆ ಸಜ್ಜಾಗಿದೆ.

ಸಂಘದ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮ ಅಪರಾಹ್ನ ೨ ಗಂಟೆಗೆ ಅಲಂಕೃತ ವಾಹನಗಳಿಗೆ ಸಾಮೂಹಿಕ ಪೂಜೆಯೊಂದಿಗೆ ಆರಂಭಗೊಳ್ಳಲಿದೆ. ಬಳಿಕ ಮುಖ್ಯರಸ್ತೆಯಲ್ಲಿ ಅಲಂಕೃತ ವಾಹನಗಳ ಮೆರವಣಿಗೆ ನಡೆಯಲಿದ್ದು, ಇದನ್ನು ವೀಕ್ಷಿಸಲು ರಸ್ತೆಯ ಎರಡೂ ಬದಿಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಲಿದ್ದಾರೆ.

ಈ ಬಾರಿ ಮೆರವಣಿಗೆಗೆ ವಿಶೇಷ ಮೆರುಗು ನೀಡಲು ಬೆಳ್ತಂಗಡಿಯ ಶೆಟ್ಟಿ ಬೊಂಬೆ ಬಳಗದಿಂದ ಬೊಂಬೆ ಕುಣಿತ ಹಾಗೂ ವಾದ್ಯಗೋಷ್ಠಿ ಆಯೋಜಿಸಲಾಗಿದೆ. ಅಲಂಕೃತ ವಾಹನಗಳೊಂದಿಗೆ ಬೊಂಬೆ ಕುಣಿತ ಮತ್ತು ವಾದ್ಯಗೋಷ್ಠಿಯ ಪ್ರದರ್ಶನ ಮೆರವಣಿಗೆಯ ಆಕರ್ಷಣೆಯನ್ನು ಹೆಚ್ಚಿಸಲಿದೆ.

ಸಂಜೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಅಶ್ವಥ್ ರೈ. ಬಿ.ಬಿ. ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಕೊಡವ ಸಮಾಜದ ಅಧ್ಯಕ್ಷ ಹಾಗೂ ಉದ್ಯಮಿ ಚಿರಿಯಪಂಡ ಎಸ್. ಸುರೇಶ್ ನಂಜಪ್ಪ, ಬೆಂಗಳೂರಿನ ಸಿಗ್ಮಾ ನೆಟ್‌ವರ್ಕ್ಸ್ ಮಾಲೀಕ ಹಾಗೂ ಸಮಾಜ ಸೇವಕ ಅವರೆಮಾದಂಡ ಶರಣ್ ಪೂಣಚ್ಚ, ಮಡಿಕೇರಿ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಹೆಚ್.ವಿ. ಚಂದ್ರಶೇಖರ್, ಚೆನ್ನೆöÊನ ಉದ್ಯಮಿ ಸತೀಶ್ ಬಿ. ಗುಡ್ಡೇರ, ಪಿಎಂಶ್ರೀ ಕೆಪಿಎಸ್ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಸ್ವರ್ಣಲತ, ಪಿಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಬಿ.ಎಸ್. ಪುಷ್ಪಾವತಿ, ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಬಿ.ಎಂ. ಕಲ್ಪನಾ ಸಾಮ್ರಾಟ್, ಮೂರ್ನಾಡು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷ ವಿಠಲ್ ಪೂವಯ್ಯ ಪಳಂಗAಡ, ಬೆಂಗಳೂರಿನ ಕೊಡವ ಸ್ನೇಹಕೂಟದ ಅಧ್ಯಕ್ಷ ಅಚ್ಚಕಾಳೇರ ರವಿ ನಾಣಯ್ಯ, ಕೊಡವ ಭಾಷಿಕ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಡಾ. ಮೇಚಿರ ಸುಭಾಷ್ ನಾಣಯ್ಯ, ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ತೇಲಪಂಡ ಸುಬ್ಬಯ್ಯ, ಮೂರ್ನಾಡು ಗೌಡ ಸಮಾಜದ ಅಧ್ಯಕ್ಷ ಪಾಣತ್ತಲೆ ಟಿ. ಹರೀಶ್, ಮೂರ್ನಾಡು ತ್ರಿನೇತ್ರ ಸಂಘದ ಗೌರವಾಧ್ಯಕ್ಷ ಎನ್.ಕೆ. ಕುಂಞÂರಾಮ, ಮೂರ್ನಾಡು ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಮುಕ್ಕಾಟಿರ ರವಿ ಚೀಯಣ್ಣ, ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಎ. ಅಬ್ದುಲ್ ಮಜೀದ್ ಹಾಗೂ ಮೂರ್ನಾಡು ಇನ್‌ಫೆಂಟ್ ಜೀಸಸ್ ಚರ್ಚ್ನ ಉಪಾಧ್ಯಕ್ಷ ಕೆ.ಜೆ. ಮ್ಯಾಥ್ಯೂ ಜೋಸೆಫ್ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಕಳೆದ ಸಾಲಿನ ೧೦ನೇ ತರಗತಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮೂವರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಅಲ್ಲದೆ ತಲಾ ಒಬ್ಬರು ನಿವೃತ್ತ ಶಿಕ್ಷಕರು ಹಾಗೂ ಮಾಜಿ ಸೈನಿಕರನ್ನು ಸಂಘದ ವತಿಯಿಂದ ಗೌರವಿಸಲಾಗುವುದು.

ಅಲಂಕೃತ ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರ ಹಾಗೂ ಆರು ಚಕ್ರ ವಾಹನಗಳು ಮತ್ತು ಅಂಗಡಿಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಗುವುದು. ಸಾರ್ವಜನಿಕರಿಗೆ ರಾತ್ರಿ ಊಟೋಪಚಾರದ ವ್ಯವಸ್ಥೆಯನ್ನೂ ಸಂಘದ ವತಿಯಿಂದ ಮಾಡಲಾಗಿದೆ.