ಗೋಣಿಕೊಪ್ಪಲು. ಅ. ೧೪: ಗೋಣಿಕೊಪ್ಪಲು ಸೆಸ್ಕ್ ಉಪವಿಭಾಗದ ಕಚೇರಿಯಲ್ಲಿ ಪಿಎಂ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆಯಡಿ ಸೇವಾ ಸೇತು ಅಭಿಯಾನವನ್ನು ಪ್ರಾರಂಭಿಸಲಾಯಿತು. ಕಾರ್ಯಕ್ರಮದ ಪ್ರಾರಂಭದ ದಿನದಂದು ಪೊನ್ನಂಪೇಟೆ ತಾಲೂಕಿನ ತಹಶೀಲ್ದಾರರಾದ ಸಂಜನಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ರಾಮಚಂದ್ರ ಅವರು ಹಾಗೂ ಗೋಣಿಕೊಪ್ಪಲು ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸತೀಶ್ ಎಸ್. ಎಸ್. ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲು ಶಾಖೆಯ ಶಾಖಾಧಿಕಾರಿಗಳಾದ ಹೇಮಂತ್ ಕುಮಾರ್, ಬಾಳೆಲೆ ಶಾಖೆಯ ಶಾಖಾಧಿಕಾರಿಗಳಾದ ರಂಗಸ್ವಾಮಿ ಹಾಗೂ ಶ್ರೀಮಂಗಲ ಶಾಖೆಯ ಶಾಖಾಧಿಕಾರಿಗಳಾದ ನಾಗೇಂದ್ರ ಪ್ರಸಾದ್ ಹಾಗೂ ಸಹಾಯಕ ಇಂಜಿನಿಯರ್ ತಾಂತ್ರಿಕ ಮಲ್ಲಿಗೆ ಅವರು ಭಾಗವಹಿಸಿದ್ದರು. ಪೊನ್ನಂಪೇಟೆ ತಾಲೂಕಿನ ಎಲ್ಲಾ ವಿದ್ಯುತ್ ಗುತ್ತಿಗೆದಾರರು ಹಾಗೂ ಇಲಾಖೆಯ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಸುಮಾರು ೮ ಅಧಿಕೃತ ಸೌರ ಮೇಲ್ಛಾವಣಿ (ಎಸ್ಆರ್ಟಿಪಿವಿ) ಮಾರಾಟಗಾರರು ಭಾಗವಹಿಸಿದರು.
ಕೆನರಾ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ನ ಪ್ರತಿನಿಧಿಗಳು ಸಹ ಪಾಲ್ಗೊಂಡು, ಯೋಜನೆಯಡಿ ದೊರೆಯುವ ಸಹಾಯಧನ, ಬ್ಯಾಂಕ್ ಸಾಲ ಸೌಲಭ್ಯಗಳು ಹಾಗೂ ಸೌರ ವಿದ್ಯುತ್ ಘಟಕಗಳ ಅಳವಡಿಕೆಯ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಸುಮಾರು ೫೦ರಿಂದ ೬೦ ಗ್ರಾಹಕರು ಹಾಗೂ ಸಾರ್ವಜನಿಕರು ಭಾಗವಹಿಸಿ ಯೋಜನೆಯ ಕುರಿತು ಮಾಹಿತಿ ಪಡೆದುಕೊಂಡರು. ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಯೋಜನೆಯ ಕುರಿತು ಸಾರ್ವಜನಿಕರಲ್ಲಿ ಆಸಕ್ತಿ ಮತ್ತು ಮೆಚ್ಚುಗೆ ಕಂಡುಬAದಿತು. ಈ ಅಭಿಯಾನದ ಮೂಲಕ ಪಿಎಂ ಸೂರ್ಯ ಘರ್ ಯೋಜನೆಯ ಪ್ರಯೋಜನಗಳನ್ನು ಹೆಚ್ಚಿನ ಗ್ರಾಹಕರಿಗೆ ತಲುಪಿಸುವುದು ಹಾಗೂ ಮನೆಗಳ ಮೇಲ್ಛಾವಣಿಯಲ್ಲಿ ಸೌರ ವಿದ್ಯುತ್ ಘಟಕಗಳನ್ನು ಅಳವಡಿಸಿಕೊಳ್ಳಲು ಸಾರ್ವಜನಿಕರನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಲಾಗಿದೆ. ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರಿಗೆ ಎಲ್ಟಿ-೪(ಸಿ) ವಿದ್ಯುತ್ ದರ ವರ್ಗದಡಿ ಸರ್ಕಾರದಿಂದ ದೊರೆಯುವ ಸೌಲಭ್ಯದ ಕುರಿತು ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸತೀಶ್ ಎಸ್. ಎಸ್. ಅವರು ಮಾಹಿತಿ ನೀಡಿದರು.
ಈ ಸೌಲಭ್ಯದಡಿ ಅನ್ವಯವಾಗುವ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟು, ವರ್ಷದಲ್ಲಿ ಗರಿಷ್ಠ ಆರು ತಿಂಗಳವರೆಗೆ ನಿಗದಿತ ಸ್ಥಿರ ಶುಲ್ಕದಲ್ಲಿ ಶೇಕಡಾ ೭೫ರಷ್ಟು ವಿನಾಯಿತಿ ಪಡೆಯಲು ಅವಕಾಶವಿದೆ ಎಂದು ತಿಳಿಸಿದರು. ಈ ಸೌಲಭ್ಯದ ಕುರಿತು ಹೆಚ್ಚಿನ ಮಾಹಿತಿಗಾಗಿ ಗೋಣಿಕೊಪ್ಪಲು ಉಪವಿಭಾಗದ ಕಚೇರಿಯನ್ನು ಸಂಪರ್ಕಿಸುವAತೆ ಕಾಫಿ ಬೆಳೆಗಾರರಿಗೆ ಮಾಹಿತಿ ನೀಡಲಾಯಿತು.