ವಿಶೇಷ ವರದಿ : ದುಗ್ಗಳ ಸದಾನಂದ
ನಾಪೋಕ್ಲು, ಅ. ೧೪: “ಭಾರತದ ನೈಜ ಆತ್ಮ ಇರುವುದು ಅದರ ಹಳ್ಳಿಗಳಲ್ಲಿ” - ಇದು ರಾಷ್ಟçಪಿತ ಮಹಾತ್ಮ ಗಾಂಧೀಜಿಯವರ ದೃಢ ನಂಬಿಕೆಯಾಗಿತ್ತು. ದೇಶಕ್ಕೆ ಸಿಗುವ ಸ್ವಾತಂತ್ರ್ಯವು ಕೇವಲ ಆಡಳಿತ ಹಸ್ತಾಂತರವಾಗದೇ, ‘ಗ್ರಾಮ ಸ್ವರಾಜ್ಯ’ದ ಮೂಲಕ ‘ರಾಮರಾಜ್ಯ’ವಾಗಬೇಕು ಎಂಬದು ಅವರ ಕನಸಾಗಿತ್ತು. ನಡುರಾತ್ರಿಯಲ್ಲೂ ಮಹಿಳೆಯರು ಯಾವುದೇ ಭಯವಿಲ್ಲದೆ ಸಂಚರಿಸುವ ಸುರಕ್ಷಿತ ವಾತಾವರಣ, ಕೃಷಿ ಪ್ರಧಾನ ಭಾರತದ ಜೀವಾಳವಾಗಿರುವ ಗೋ ಸಂಪತ್ತಿನ ಸಂರಕ್ಷಣೆ ಹಾಗೂ ಹಸಿವು, ಬಾಯಾರಿಕೆ ಮತ್ತು ಭಯಮುಕ್ತ ಸಮಾಜದ ನಿರ್ಮಾಣಕ್ಕಾಗಿ ಅವರು ಅಹಿಂಸಾತ್ಮಕ ಹೋರಾಟದ ಹಾದಿ ತೋರಿದ್ದರು.ಆದರೆ, ಕಾಲಕ್ರಮೇಣ ಗಾಂಧೀಜಿಯವರ ಈ ಉನ್ನತ ಆಶಯಗಳು ಕೇವಲ ಭಾಷಣಗಳಿಗೆ ಸೀಮಿತವಾಗುತ್ತಿವೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕಾಡುತ್ತಿರುವುದು ಸುಳ್ಳಲ್ಲ.
ಸವಾಲುಗಳ ನಡುವೆ ಸಿಲುಕಿದ ಹಸಿರು ನಾಡು
ಇಂದು ವೀರಯೋಧರ ನಾಡಾದ ಕೊಡಗಿನಲ್ಲಿ ಮತ್ತು ಮಲೆನಾಡಿನ ಭಾಗಗಳಲ್ಲಿ ವಿಶಿಷ್ಟ ಸಾಮಾಜಿಕ ಹಾಗೂ ಆರ್ಥಿಕ ಸವಾಲುಗಳು ಎದುರಾಗಿವೆ. ಒಂದೆಡೆ ಅಕ್ರಮ ಬಾಂಗ್ಲಾ ವಲಸಿಗರನ್ನು ಜಿಲ್ಲೆಯಿಂದ ಹೊರಹಾಕಬೇಕೆಂಬ ಕೂಗು ಗಟ್ಟಿಯಾಗುತ್ತಿದ್ದರೆ, ಇನ್ನೊಂದೆಡೆ ಕಾಫಿ ತೋಟಗಳಲ್ಲಿ ದುಡಿಯುವ ಸ್ಥಳೀಯ ಕಾರ್ಮಿಕರ ತೀವ್ರ ಅಭಾವ ಬೆಳೆಗಾರರನ್ನು ಕಂಗೆಡಿಸಿದೆ. ದುಡಿಯುವ ವರ್ಗದ ಈ ಬಿಕ್ಕಟ್ಟು ಇಡೀ ಗ್ರಾಮೀಣ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
‘ಮಹಾತ್ಮ ಗಾಂಧಿ ಗ್ರಾಮ ಪಂಚಾಯಿತಿ’ : ಬದಲಾವಣೆಯ ಹೊಸ ಸಂಕೇತ?
ಈ ಎಲ್ಲಾ ಪ್ರಸ್ತುತ ಗೊಂದಲ ಮತ್ತು ಸವಾಲುಗಳ ನಡುವೆಯೇ, ಜಿಲ್ಲೆಯಲ್ಲಿ ನವ ಆಶಾವಾದವೊಂದು ಚಿಗುರೊಡೆಯುತ್ತಿದೆ. ಕಳೆದ ಸುಮಾರು ೮೦ ವರ್ಷಗಳ ಬಳಿಕ, ಕೊಡಗಿನ ಎಲ್ಲಾ ಗ್ರಾಮ ಪಂಚಾಯಿತಿಗಳ ನಾಮಫಲಕಗಳಲ್ಲಿ ಇದ್ದಕ್ಕಿದ್ದಂತೆ “ಮಹಾತ್ಮ ಗಾಂಧಿ ಗ್ರಾಮ ಪಂಚಾಯಿತಿ” (ಉದಾಹರಣೆಗೆ: ಮಹಾತ್ಮ ಗಾಂಧಿ ಗ್ರಾಮ ಪಂಚಾಯಿತಿ, ನಾಪೋಕ್ಲು) ಎಂದು ಮರುನಾಮಕರಣಗೊಂಡು ರಾರಾಜಿಸುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದೆ.
ಏಕಕಾಲದಲ್ಲಿ ಜಿಲ್ಲೆಯಾದ್ಯಂತ ನಡೆದಿರುವ ಈ ಬದಲಾವಣೆಯು ಗಾಂಧೀಜಿಯವರ ಅಧಿಕಾರ ವಿಕೇಂದ್ರೀಕರಣ ಮತ್ತು ಗ್ರಾಮೀಣಾಭಿವೃದ್ಧಿಯ ಸಿದ್ಧಾಂತಗಳು ಜನರ ಮನೆ ಬಾಗಿಲಿಗೆ ಮರಳುತ್ತಿವೆಯೇ ಎಂಬ ಆಶಾವಾದವನ್ನು ಮೂಡಿಸಿದೆ.
ಹೆಸರಿಗಷ್ಟೇ ಸೀಮಿತವೋ? ನೈಜ ಬದಲಾವಣೆಯೋ?
ಆದರೆ, ಈ ಬದಲಾವಣೆಯನ್ನು ಹಲವರು ಸಂಶಯ ಮತ್ತು ಎಚ್ಚರಿಕೆಯ ಕಣ್ಣುಗಳಿಂದಲೂ ನೋಡುತ್ತಿದ್ದಾರೆ. ಹಿಂದೆ ಮಹಾತ್ಮಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಶ್ರಮಿಕರಿಗೆ ಸಿಗಬೇಕಿದ್ದ ಕೂಲಿ ಉದ್ಯೋಗವನ್ನು ಯಂತ್ರಗಳು ಕಸಿದುಕೊಂಡು, ಬಡವರ ಹಕ್ಕಿನ ಹಣವನ್ನು ಮಧ್ಯವರ್ತಿಗಳು ಹಾಗೂ ಆಯಕಟ್ಟಿನ ಪ್ರಭಾವಿಗಳು ಲಪಟಾಯಿಸಿದ ಉದಾಹರಣೆಗಳು ನಮ್ಮ ಮುಂದಿವೆ. ಹೀಗಾಗಿ, ಪಂಚಾಯಿತಿಗಳ ಮುಂದೆ ಉದ್ಭವಿಸಿರುವ ‘ಮಹಾತ್ಮ ಗಾಂಧಿ’ ಹೆಸರು ಕೇವಲ ನಾಮಫಲಕಕ್ಕೆ (ಬೋರ್ಡ್) ಮಾತ್ರ ಸೀಮಿತವಾಗಿ ಉಳಿಯುತ್ತದೆಯೇ? ಅಥವಾ ನಿಜವಾದ ಅರ್ಥದಲ್ಲಿ ಗಾಂಧೀಜಿಯವರ ‘ಗ್ರಾಮ ಸ್ವರಾಜ್ಯ’ ಹಾಗೂ ರಾಮರಾಜ್ಯದ ಪರಿಕಲ್ಪನೆ ಪ್ರತಿ ಹಳ್ಳಿಯಲ್ಲೂ ನನಸಾಗುವುದೇ? ಎಂಬುದನ್ನು ಮುಂಬರುವ ದಿನಗಳಲ್ಲಿ ಕಾಲವೇ ಉತ್ತರಿಸಬೇಕಿದೆ.