ನಾಪೋಕ್ಲು, ಅ.೧೪: ದಶಕಗಳಿಂದ ವಿದ್ಯುತ್ ಸೌಲಭ್ಯದಿಂದ ವಂಚಿತವಾಗಿದ್ದ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ದಬ್ಬಡ್ಕ ಭಾಗದ ೨೯ ಕುಟುಂಬಗಳ ಪೈಕಿ ತಾತ್ಕಾಲಿಕ ಸೌರ ವಿದ್ಯುತ್ ಸಂಪರ್ಕಕ್ಕೆ ಬೇಡಿಕೆ ಸಲ್ಲಿಸಿದ್ದ ೨೨ ಕುಟುಂಬಗಳಿಗೆ ಸೋಲಾರ್ ವ್ಯವಸ್ಥೆ ಅಳವಡಿಸುವ ಕಾಮಗಾರಿಗೆ ಚಾಲನೆ ನೀಡಲಾಯಿತು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರ ಸೂಚನೆಯಂತೆ ಅರಣ್ಯ ಇಲಾಖೆಯ ಮೂಲಕ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಕಮಲ ಬದಿಕೋಡಿ ಅವರ ಮನೆಯಲ್ಲಿ ಸೋಲಾರ್ ವ್ಯವಸ್ಥೆ ಅಳವಡಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಲಾಯಿತು. ಉಳಿದ ಅರ್ಹ ಮನೆಗಳಿಗೂ ಹಂತ ಹಂತವಾಗಿ ಸೋಲಾರ್ ವ್ಯವಸ್ಥೆ ಅಳವಡಿಸಲಾಗುವುದು ಎಂದು ತಿಳಿಸಲಾಗಿದೆ.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್, ಸಂಪಾಜೆ ವಲಯ ಅರಣ್ಯಾಧಿಕಾರಿ ಡಿನ್ಸಿ ದೇಚಮ್ಮ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ, ವಲಯ ಕಾಂಗ್ರೆಸ್ ಅಧ್ಯಕ್ಷ ರವಿರಾಜ್ ಹೊಸೂರು, ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಸೂರಜ್ ಹೊಸೂರು ಹಾಗೂ ಸ್ಥಳೀಯ ಪ್ರಮುಖರು ಪೂಜೆ ನೆರವೇರಿಸಿ ಯೋಜನೆಗೆ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ವಲಯ ಅರಣ್ಯಾಧಿಕಾರಿ ಡಿನ್ಸಿ ದೇಚಮ್ಮ, ಶಾಸಕರ ಸೂಚನೆಯಂತೆ ಅರಣ್ಯ ಇಲಾಖೆಯೊಂದಿಗೆ ಚರ್ಚಿಸಿ ಸರ್ಕಾರದ ಮೂಲಕ ಈ ಸೌಲಭ್ಯ ಒದಗಿಸಲಾಗಿದೆ. ಅರ್ಹ ಫಲಾನುಭವಿಗಳು ಸೌಲಭ್ಯವನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ವಲಯ ಕಾಂಗ್ರೆಸ್ ಅಧ್ಯಕ್ಷ ರವಿರಾಜ್ ಹೊಸೂರು ಮಾತನಾಡಿ, ದಬ್ಬಡ್ಕ ಭಾಗದ ೨೮ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಬಾಕಿಯಾಗಿತ್ತು. ಅಂದಿನಿAದಲೂ ಸಮಸ್ಯೆ ಮುಂದುವರಿದಿತ್ತು. ಇದನ್ನು ಮನಗಂಡ ಶಾಸಕ ಪೊನ್ನಣ್ಣ ಅವರು ಸರ್ಕಾರದೊಂದಿಗೆ ಮಾತುಕತೆ ನಡೆಸಿ, ಖಾಯಂ ವಿದ್ಯುತ್ ಸಂಪರ್ಕಕ್ಕೆ ಅನುಮತಿ ದೊರೆಯುವವರೆಗೆ ಜನರಿಗೆ ಅನುಕೂಲವಾಗುವಂತೆ ತಾತ್ಕಾಲಿಕ ಸೌರ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ವಿಶೇಷ ಪ್ರಯತ್ನ ಮಾಡಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಕ್ಷದ ಮಾಜಿ ವಲಯ ಅಧ್ಯಕ್ಷ ಸೋಮಣ್ಣ ಬಾಲಂಬಿ, ಹಿರಿಯರಾದ ಬಂಗಾರಕೋಡಿ ವೆಂಕಟರಮಣ, ರಘುನಾಥ್ ಬಾಲಂಬಿ, ಮಾಣಿಕಲ್ಲು ವಿನಯ, ಹರ್ಷಿತ್ ಚೆಂಡೆಡ್ಕ, ಉದಯ ಹೊದ್ದಟ್ಟಿ, ಕೊಪ್ಪದ ಶಿವರಾಮ, ಕೊಪ್ಪದ ಭುವನೇಶ್ವರ, ಹೊಸೂರು ಗಿರೀಶ್, ಕೆದಂಬಾಡಿ ಗಿರೀಶ್, ಬಂಗಾರಕೋಡಿ ವಿಕಿ, ಅರಣ್ಯ ಇಲಾಖೆಯ ಸಿಬ್ಬಂದಿ, ಗ್ರಾಮಸ್ಥರು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.