ವೀರಾಜಪೇಟೆ, ಅ. ೧೩: ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಪ್ರತಿಯೊಬ್ಬರಿಗೂ ಕ್ರೀಡೆಯು ಅತ್ಯಂತ ಮುಖ್ಯವಾಗಿದೆ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ತಿಳಿಸಿದರು.
ವೀರಾಜಪೇಟೆಯ ಚಿಕ್ಕಪೇಟೆಯಲ್ಲಿರುವ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದ “ಕೊಡವ ಅಂತರ್ ಕೇರಿ ಬ್ಯಾಡ್ಮಿಂಟನ್ ಟೂರ್ನಮೆಂಟ್” ಸಂದರ್ಭ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಟೂರ್ನಮೆಂಟ್ ಅನ್ನು ಅಧಿಕೃತವಾಗಿ ಉದ್ಘಾಟಿಸಿ ಮಾತನಾಡಿದ ಶಾಸಕರು, ಶತಮಾನಗಳಿಂದ ಪ್ರಸಿದ್ಧವಾಗಿರುವ ಬ್ಯಾಡ್ಮಿಂಟನ್ ಕ್ರೀಡೆಯು ಇಂದಿಗೂ ಗ್ರಾಮೀಣ ಭಾಗದ ಜನರನ್ನು ಅಪಾರವಾಗಿ ಆಕರ್ಷಿಸುತ್ತಿದೆ. ಕೊಡವ ಅಂತರ್ ಕೇರಿ ವ್ಯಾಪ್ತಿಯಲ್ಲಿ ಈ ಪಂದ್ಯಾವಳಿ ಆಯೋಜನೆಗೊಂಡಿರುವುದರಿAದ ಸ್ಥಳೀಯ ಬ್ಯಾಡ್ಮಿಂಟನ್ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯದ ಪ್ರದರ್ಶನ ನೀಡಲು ಇದು ಒಂದು ಅತ್ಯುತ್ತಮ ಅವಕಾಶವಾಗಿದೆ ಎಂದರು.
ಬಳಿಕ ಮಾತನಾಡಿದ ಎಂಎಲ್ಸಿ ಸುಜಾ ಕುಶಾಲಪ್ಪ ಅವರು, ಗ್ರಾಮೀಣ ಮತ್ತು ಸ್ಥಳೀಯ ಮಟ್ಟದಲ್ಲಿ ಇಂತಹ ಕ್ರೀಡಾಕೂಟಗಳನ್ನು ಆಯೋಜಿಸುವುದರಿಂದ ಮರೆಯಾಗುತ್ತಿರುವ ಪ್ರತಿಭೆಗಳು ಮುಂಚೂಣಿಗೆ ಬರಲು ಸಾಧ್ಯವಾಗುತ್ತದೆ ಎಂದರು.
ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷರಾದ ಅಮ್ಮಣಿಚಂಡ ರವಿ ಉತ್ತಪ್ಪ ಅವರು ಮಾತನಾಡಿ, ನಮ್ಮ ಭಾಗದ ಸಾಂಪ್ರದಾಯಿಕ ಹಾಗೂ ಜನಪ್ರಿಯ ಕ್ರೀಡೆಗಳನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅಂತರ್ ಕೇರಿ ಮಟ್ಟದ ಇಂತಹ ಬ್ಯಾಡ್ಮಿಂಟನ್ ಪಂದ್ಯಾವಳಿಗಳು ಸ್ಥಳೀಯರಲ್ಲಿ ಒಗ್ಗಟ್ಟನ್ನು ಹೆಚ್ಚಿಸುವುದಲ್ಲದೆ, ಯುವ ಪ್ರತಿಭೆಗಳನ್ನು ಗುರುತಿಸಲು ಸಹಕಾರಿಯಾಗುತ್ತವೆ ಎಂದರು.
ಏಳು ಕೊಡವ ಕೇರಿಗಳ ಒಕ್ಕೂಟದ ಅಧ್ಯಕ್ಷ ಮಾದಂಡ ಪೂವಯ್ಯ ಅವರು ಮಾತನಾಡಿ, ಕ್ರೀಡೆಯು ಕೇವಲ ಜಯ-ಅಪಜಯಕ್ಕೆ ಸೀಮಿತವಾಗಿರದೆ, ಸಮಾಜದಲ್ಲಿ ಸೌಹಾರ್ದತೆ ಮತ್ತು ಬಾಂಧವ್ಯವನ್ನು ಗಟ್ಟಿಗೊಳಿಸುವ ಮಾಧ್ಯಮವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕ್ರೀಡಾಕೂಟದ ಅಧಿಕೃತ ವೀಕ್ಷಕರು ಮಾತನಾಡಿ, ಪಂದ್ಯಾವಳಿಯ ನಿಯಮಾವಳಿಗಳು ಹಾಗೂ ಕ್ರೀಡಾ ಶಿಸ್ತಿನ ಬಗ್ಗೆ ಆಟಗಾರರಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಕೇರಿ ಏರಿಯಾ ಅಧ್ಯಕ್ಷರಾದ ಪಟ್ಟಡ ಮನು ರಾಮಚಂದ್ರ ಅವರು, ಈ ಬಾರಿಯ ಅಂತರ್ ಕೇರಿ ಬ್ಯಾಡ್ಮಿಂಟನ್ ಟೂರ್ನಮೆಂಟ್ಅನ್ನು ಯಶಸ್ವಿಯಾಗಿ ನಡೆಸಿಕೊಡಲು ಸಹಕರಿಸಿದ ಎಲ್ಲಾ ಗಣ್ಯರಿಗೆ, ಪ್ರಾಯೋಜಕರಿಗೆ ಹಾಗೂ ಕ್ರೀಡಾಭಿಮಾನಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಪಂದ್ಯಾವಳಿಯ ಉದ್ದಕ್ಕೂ ರೋಚಕ ಪಂದ್ಯಗಳ ವಿವರಣೆಯನ್ನು ವೀಕ್ಷಕÀ ವಿವರಣೆಗಾರರಾದ ಮಾಳೇಟಿರ ಶ್ರೀನಿವಾಸ್ ಅವರು ನೀಡಿದರು.
ವೇದಿಕೆಯಲ್ಲಿ ಎಂಎಲ್ಸಿ ಸುಜಾ ಕುಶಾಲಪ್ಪ ಅವರ ಪತ್ನಿ ಪ್ರೀತಿ ಕುಶಾಲಪ್ಪ, ಪ್ರಮುಖರಾದ ಮಾದಂಡ ಸುಷ್ಮಾ ತಿಮ್ಮಯ್ಯ, ಮುಕ್ಕಾಟಿರ ಸಬಿತಾ, ವೀರಾಜಪೇಟೆ ಕೊಡವ ಸಮಾಜದ ಉಪಾಧ್ಯಕ್ಷರಾದ ಜಗದೀಶ್, ಪುರಸಭೆಯ ಮಾಜಿ ಅಧ್ಯಕ್ಷರಾದ ದೇಚಮ್ಮ ಕಾಳಪ್ಪ ಸೇರಿದಂತೆ ಕೊಡವ ಅಂತರ್ ಕೇರಿ ಬ್ಯಾಡ್ಮಿಂಟನ್ ಟೂರ್ನಮೆಂಟ್ನ ಪದಾಧಿಕಾರಿಗಳು, ಸದಸ್ಯರುಗಳು ಹಾಗೂ ಸ್ಥಳೀಯ ಪ್ರಮುಖರು ಹಾಜರಿದ್ದರು.