ಮಡಿಕೇರಿ, ಅ. ೧೦: ಮಡಿಕೇರಿಯ ಓಂಕಾರೇಶ್ವರ ದೇವಾಲಯದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತಾಗಿ ಶಾಸಕ ಡಾ.ಮಂತÀರ್ ಗೌಡ ಅವರು ಶುಕ್ರವಾರ ದೇವಾಲಯ ಸಮಿತಿ ಪ್ರಮುಖರೊಂದಿಗೆ ಚರ್ಚಿಸಿದರು.

ಈಗಾಗಲೇ ಆಂಜನೇಯ ದೇಗುಲದ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಆದರೆ, ಓಂಕಾರೇಶ್ವರ ಪುಷ್ಕರಿಣಿ ಜೀರ್ಣೋದ್ಧಾರ, ಓಂಕಾರ್ ಸದನ ಭವನ ದುರಸ್ತಿ ಮತ್ತು ವಿಸ್ತರಣೆ ಹಾಗೂ ದೇವಾಲಯ ಅರ್ಚಕರು ಮತ್ತು ಸಿಬ್ಬಂದಿಗಳಿಗೆ ವಸತಿ ನಿರ್ಮಾಣ ಕಾರ್ಯಗಳು ನಡೆಯಬೇಕಿದೆ ಎಂದು ಶಾಸಕರ ಗಮನಕ್ಕೆ ತರಲಾಯಿತು. ಕೆರೆಯ ದುರಸ್ತಿ ಮತ್ತು ಅಭಿವೃದ್ಧಿಗೆ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸಾಕಷ್ಟು ಹಣವಿದ್ದು ಈ ಕಾರ್ಯವನ್ನು ಕೈಗೆತ್ತಿಗೊಳ್ಳುವಂತೆ ಶಾಸಕರು ಮುಡಾ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಅವರಿಗೆ ನಿರ್ದೇಶನವಿತ್ತರು. ಉಳಿದ ಅಭಿವೃದ್ಧಿ ಕಾರ್ಯಗಳಿಗೆ ಮುಖ್ಯಮಂತ್ರಿಯವರು ಹಾಗೂ ಧಾರ್ಮಿಕ ದತ್ತಿ ಇಲಾಖಾ ಸಚಿವರ ಗಮನಕ್ಕೆ ತಂದು ಮಂಜೂರಾತಿ ಒದಗಿಸುವುದಾಗಿ ಡಾ. ಮಂತರ್ ಗೌಡ ಭರವಸೆಯಿತ್ತರು. ಐತಿಹಾಸಿಕ ಓಂಕಾರೇಶ್ವರ ದೇಗುಲಕ್ಕೆ ಬಹುತೇಕ ಪ್ರವಾಸಿಗರೇ ತೆರಳುತ್ತಾರೆ.

ಸ್ಥಳೀಯ ಭಕ್ತಾದಿಗಳೂ ಅಧಿಕ ಸಂಖ್ಯೆಯಲ್ಲಿ ತೆರಳುವಂತೆ ಕೆಲವೊಂದು ವಿಶೇಷ ಉತ್ಸವಗಳನ್ನು ಪ್ರಾರಂಭಿಸುವAತೆ ಶಾಸಕರು ಸಮಿತಿಗೆ ಸಲಹೆಯಿತ್ತರು.

ಈ ಸಂದರ್ಭ ಓಂಕಾರೇಶ್ವರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ, ಸದಸ್ಯರುಗಳಾದ ಅಂಬೆಕಲ್ ಕುಶಾಲಪ್ಪ, ಪ್ರಕಾಶ್ ಆಚಾರ್ಯ, ಕನ್ನಂಡ ಬಿ. ಕವಿತಾ ಕಾವೇರಮ್ಮ, ಕೆ.ವೀಣಾಕ್ಷಿ, ಜಿ.ರಾಜೇಂದ್ರ ಹಾಗೂ ಮುಡಾ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಉಪಸ್ಥಿತರಿದ್ದರು.