ಮಡಿಕೇರಿ, ಅ. ೧೦: ರಾಜಕೀಯ ಎನ್ನುವದೇ ಸ್ವಾರಸ್ಯವೂ ಹೌದು..ಗಂಭೀರವೂ ಹೌದು.. ಇಲ್ಲಿ ಏನು ಬೇಕಾದರೂ ನಡೆಯುತ್ತದೆ. ಯಾರೂ ಶತ್ರುಗಳಲ್ಲ ಮಿತ್ರರೂ ಅಲ್ಲ ಎಂಬುದು ಒಂದು ಮಾತು. ಇದರ ನಡುವೆ ಶತ್ರುಗಳಾಗಿದ್ದವರು ಮಿತ್ರರೂ ಆಗಬಹುದು. ಮಿತ್ರರಂತಿದ್ದವರೂ ಶತ್ರುಗಳೂ ಆಗಬಹುದು. ನಂತರದಲ್ಲಿ ಇದು ಮತ್ತೊಂದು ತಿರುವು ಪಡೆಯಬಹುದು. ಇದೀಗ ಕೊಡಗು ಜಿಲ್ಲೆಯಲ್ಲಿ ಇಂತಹ ಒಂದು ಸ್ಫೋಟಕ ವಿಚಾರ ಗುಲ್ಲಾಗುತ್ತಿದೆ.

ಈ ಗುಸು-ಗುಸು ಚರ್ಚೆ ಇದೀಗ ಬೀದಿಗೂ ಬರುತ್ತಿದೆ. ಇದು ನಡೆಯುತ್ತಿರುವುದು ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ. ಅದರಲ್ಲೂ ಇಬ್ಬರು ಯುವಶಾಸಕರುಗಳ ನಡುವಿನ ಶೀತಲ ಸಮರ ಪ್ರಸ್ತುತ ಬಿಸಿಬಿಸಿಯಾಗುತ್ತಿದೆ ಎಂಬ ಮಾತು ಕಾಂಗ್ರೆಸ್ ಪಾಳಯಕ್ಕೆ ನುಂಗಲಾರದ ಬಿಸಿತುಪ್ಪದಂತಾಗುತ್ತಿದೆ ಎಂಬುದು ದಟ್ಟ ವದಂತಿ (!) ಅಲ್ಲಲ್ಲ ವದಂತಿಯಲ್ಲ ನಿಜವೂ ಹೌದು ಎಂಬುದು ಮತ್ತೊಂದು ಖಚಿತ ವರ್ತಮಾನವಾಗಿದೆ.

ಶಾಸಕದ್ವಯರ ಮುನಿಸು.. ಭಿನ್ನಾಭಿಪ್ರಾಯಗಳು ದಿನೇ ದಿನೇ ಉಲ್ಭಣಗೊಳ್ಳುತ್ತಿದೆಯಂತೆ. ಇದಕ್ಕೆ ಕಾರಣವಾಗುತ್ತಿರುವುದು ಉತ್ತರ-ದಕ್ಷಿಣ ಎಂಬ ಫೈಟ್. ಈ ಊಹಾಪೋಹಗಳನ್ನು ಪುಷ್ಟೀಕರಿಸಿರುವುದು ತಾ. ೯ ರಂದು ನಡೆದ ಕಾಂಗ್ರೆಸ್ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆ. ಇಲ್ಲಿ ಉತ್ತರ-ದಕ್ಷಿಣ ಜಗಳದ ರೂಪಕ್ಕೂ ಬಂದು ನಿಂತಿತ್ತು. ಇದರಿಂದಾಗಿ ಇಬ್ಬರು ಶಾಸಕರ ನಡುವೆ ಕಂದಕವೇರ್ಪಟ್ಟಿದೆ ಎಂದು ಹೇಳಲಾಗುತ್ತಿದೆ. ಇದು ಕೆಳಹಂತದ ನಾಯಕರು, ಮುಂಚೂಣಿ ಘಟಕದ ಪ್ರಮುಖರು, ಕಾರ್ಯಕರ್ತರಿಗೆ ಕಗ್ಗಂಟಾಗಿದೆ.

ಜೊತೆಗೆ ಇದ್ದರೂ ಪರಸ್ಪರ ಮಾತನಾಡದಷ್ಟು ‘ಹಾಯ್..ಬಾಯ್’ ಇಲ್ಲದಷ್ಟು ಹಂತಕ್ಕೆ ಇದು ತಲುಪಿತ್ತು ಎಂಬುದು ಕಾಂಗ್ರೆಸ್ ವಲಯದಿಂದಲೇ ಇದೀಗ ಬಯಲಾಗುತ್ತಿರುವ ವಾಸ್ತವ. ಇದು ಕೇವಲ ಕಾಂಗ್ರೆಸ್‌ಗೆ ಮಾತ್ರ ಸೀಮಿತವಲ್ಲ. ಈ ಹಿಂದೆ ಬಿಜೆಪಿಯ ಶಾಸಕದ್ವಯರು ಇದ್ದಾಗಲೂ ಇತ್ತು. ನಂತರದಲ್ಲಿ ಮುನಿಸು ಇತ್ಯರ್ಥವಾಗುತ್ತಿತ್ತು. ಇದೇ ಕಾಂಗ್ರೆಸ್ಸಿಗರಲ್ಲಿ ಒಂದಷ್ಟು ಆಶಾಭಾವನೆಯೂ ನಂಬಿಕೆ-ಅನುದಾನ, ಅಧಿಕಾರ ಹಂಚಿಕೆ, ಸ್ಥಾನಮಾನದ ವಿಚಾರದಲ್ಲಿ ಇಂತಹ ಭಿನ್ನಾಭಿಪ್ರಾಯಗಳು ಸಹಜವಾಗಿ ಎದುರಾಗುತ್ತವೆ. ಆದರೆ, ನಂತರದಲ್ಲಿ ತಿಳಿಯಾಗುತ್ತದೆ. ಇಂತಹ ಕದನಗಳು ಪಕ್ಷಕ್ಕೆ ಡ್ಯಾಮೇಜ್ ಆಗಲಾರದು ಎಂಬ ವಿಶ್ವಾಸ ಪಕ್ಷದ ಕಾರ್ಯಕರ್ತರಲ್ಲಿ ಇದೆಯಾದರೂ ಸದ್ಯಕ್ಕಂತೂ ಇರಿಸು-ಮುರಿಸು ಅನುಭವಿಸುತ್ತಿರುವುದು ಸುಳ್ಳಲ್ಲ.. - (ಮೂನ್)