ಒಂದು ಕಾಲವಿತ್ತು ರಾಜರು ತಮ್ಮ ಪತ್ರ ವ್ಯವಹಾರಗಳನ್ನು ಮಾಡಲು ರಾಜಧೂತರನ್ನು ಅಥವಾ ಸೇವಕರನ್ನು ಅಥವಾ ಸೈನ್ಯದ ಅಧಿಕಾರಿಯನ್ನು ಕಳುಹಿಸುತ್ತಿದ್ದರು. ನಂತರದ ಕಥೆಗಳಲ್ಲಿ ಪಾರಿವಾಳದ ಮೂಲಕ ಸಂದೇಶ ರವಾನೆ ನಡೆಯುತ್ತಿತ್ತು.

ಕಾಳಿದಾಸನ ಮೇಘ ಸಂದೇಶ ಕತೆಯಲ್ಲಿ ಅಳಕಾಪುರಿಯ ರಾಜನಾದ ಕುಬೇರನ ಬಳಿ ಕೆಲಸ ಮಾಡುತ್ತಿದ್ದ ಯಕ್ಷನೊಬ್ಬನು ತನ್ನ ಕರ್ತವ್ಯದಲ್ಲಿ ಲೋಪವೆಸಗಿದ ಕಾರಣ ಕೋಪಗೊಂಡ ಕುಬೇರನು ಅವನಿಗೆ ಒಂದು ವರ್ಷ ತನ್ನ ಪತ್ನಿಯನ್ನು ಅಗಲಿರಬೇಕೆಂದು ಶಾಪ ನೀಡಿ, ರಾಮಗಿರಿ ಪರ್ವತಕ್ಕೆ ಗಡಿಪಾರು ಮಾಡುತ್ತಾನೆ. ಹೆಂಡತಿಯನ್ನು ಅಗಲಿದ ಯಕ್ಷನು ರಾಮಗಿರಿಯಲ್ಲಿ ವಿರಹವೇದನೆಯನ್ನು ಅನುಭವಿಸುತ್ತಿರುತ್ತಾನೆ. ಆಷಾಢ ಮಾಸದ ಮೊದಲ ದಿನ ಆಕಾಶದಲ್ಲಿ ಸುಂದರವಾದ ಕಾರ್ಮೋಡವನ್ನು (ಮೇಘ) ನೋಡುತ್ತಾನೆ. ಅಳಕಾಪುರಿಯಲ್ಲಿರುವ ಹೆಂಡತಿಗೆ ಸಂದೇಶ ಕಳುಹಿಸಲು ಮೇಘವನ್ನೇ ತನ್ನ ದೂತನನ್ನಾಗಿ (ಸಂದೇಶವಾಹಕ) ಮಾಡಿಕೊಂಡು ಮೇಘ ಸಂದೇಶ ಕಳುಹಿಸುತ್ತಾನೆ.

ಮಗಧ ಸಾಮ್ರಾಜ್ಯದ ರಾಜಭವನದ ಮಹಾಸಭೆ ನಡೆಯುವ ಭವ್ಯ ಸಭಾಂಗಣದ ಮುಂಭಾಗದಲ್ಲಿ ಮಗಧ ರಾಜ್ಯದ ವಿಜಯದ ಸಂಕೇತವಾಗಿ ಗಗನಚುಂಬಿಯಾಗಿ ನಿಂತಿದ್ದ ವಿಶಾಲವಾದ ಧ್ವಜ ಸ್ತಂಭವಿತ್ತು. ಇದ್ದಕ್ಕಿದ್ದಂತೆ ಗಾಳಿಯಲ್ಲಿ ತೇಲಿಬಂದ ಒಂದು ರಹಸ್ಯ ಪತ್ರವು ನೇರವಾಗಿ ಬಂದು ಆ ಧ್ವಜ ಸ್ತಂಭದ ಬುಡಕ್ಕೆ ಬೀಳುತ್ತದೆ. ಶತ್ರು ರಾಜ ತನ್ನ ರಾಜ್ಯದಿಂದ ಬಾಣ ಬಿಡುವುದರ ಮೂಲಕ ಕಳುಹಿಸಿದ್ದ ಪತ್ರವಾಗಿತ್ತು. ಹೀಗೆ ಪತ್ರ ವ್ಯವಹಾರವು ಹಲವಾರು ರೀತಿಯಲ್ಲಿ ನಡೆಯುತ್ತಿತ್ತು. ಸಾವಿನ ಸುದ್ದಿಯನ್ನು ತಿಳಿಸಲು ಒಂದೂರಿನಿAದ ಒಂದೂರಿಗೆ ಕಾಲುದಾರಿಯಲ್ಲಿ ನಡೆದು ಬೆಳಗಿನ ಜಾವ ಒಬ್ಬ ವ್ಯಕ್ತಿ ಸುದ್ದಿ ಹೊತ್ತು ತರುತ್ತಿದ್ದ.

ಈ ಎಲ್ಲಾ ಹಿನ್ನೆಲೆಯೊಂದಿಗೆ "ವಿಶ್ವ ಅಂಚೆ ದಿನ"ವು ಇಂದು ನಡೆಯುತ್ತಿದೆ. ೧೮೪೦ ರಿಂದ ವಿಶ್ವ ಅಂಚೆ ದಿನದ ಇತಿಹಾಸವನ್ನು ಹೊಂದಿದೆ. ಇಂಗ್ಲೆAಡ್‌ನಲ್ಲಿ ಸರ್ ರೋಲ್ಯಾಂಡ್ ಹಿಲ್ ಅವರು ಅಂದು ಒಂದು ಹೊಸ ವ್ಯವಸ್ಥೆಯನ್ನು ತಂದಿದ್ದರು. ದೇಶೀಯ ಸೇವೆಯಲ್ಲಿ ಒಂದು ನಿರ್ದಿಷ್ಟ ಶ್ರೇಣಿಯ ತೂಕವನ್ನು ಹೊಂದಿರುವ ಎಲ್ಲಾ ಅಕ್ಷರಗಳಿಗೆ ಒಂದೇ ದರವನ್ನು ವಿಧಿಸಲಾಗುವುದು ಎಂದು ಹೇಳುವ ಮೂಲಕ ಅವರು ವಿಶ್ವದ ಮೊದಲ ಅಂಚೆ ಚೀಟಿಯನ್ನು ಪರಿಚಯಿಸಿದ್ದರು.

ಮಾನವ ಸಂವಹನ ವಿನಿಮಯ ಅತ್ಯಂತ ಹಳೆಯ ರೂಪಗಳಲ್ಲಿ ಒಂದಾದ ಅಂಚೆ ಸೇವೆ ವಿಶ್ವದಾದ್ಯಂತ ಸಂದೇಶಗಳನ್ನು ಕಳುಹಿಸಲು ಸಹಾಯ ಮಾಡಿವೆ. ಅತ್ಯಂತ ದೂರದ ಸ್ಥಳಗಳಲ್ಲಿದ್ದ ಜನರೊಂದಿಗೆ ಪರಸ್ಪರ ಸಂಹವನ ನಡೆಸಲು ಅಂಚೆ ಸೇವೆ ನೆರವಾಗಿದೆ. ಈ ವಿಶೇಷ ಸೇವಾ ವಲಯವನ್ನು ಗುರುತಿಸಿ ಗೌರವಿಸಲು ಪ್ರತಿ ವರ್ಷ ಅಕ್ಟೋಬರ್ ೯ ರಂದು ವಿಶ್ವ ಅಂಚೆ ದಿನವಾಗಿ ಆಚರಿಸಲಾಗುತ್ತದೆ. ಭಾರತೀಯ ಅಂಚೆ ಇಲಾಖೆಯು ದೇಶದ ಮೂಲೆಮೂಲೆಗೂ ನೀಡಿರುವ ಅಮೂಲ್ಯ ಸೇವೆಗಳನ್ನು ಮತ್ತು ಕೊಡುಗೆಗಳನ್ನು ಸ್ಮರಿಸಲು ಭಾರತದಲ್ಲಿ ಅಕ್ಟೋಬರ್ ೧೦ ರಂದು ರಾಷ್ಟಿçÃಯ ಅಂಚೆ ದಿನವನ್ನಾಗಿ ಆಚರಿಸಲಾಗುತ್ತದೆ.

ಅಲ್ಲಾವುದ್ದೀನ್ ಖಿಲ್ಜಿ (೧೨೯೬) ಮತ್ತು ಮುಹಮ್ಮದ್ ಬಿನ್ ತುಘಲಕ್ (೧೩೪೧) ಕಾಲದಲ್ಲಿ ಕುದುರೆ ಮತ್ತು ಕಾಲಾಳು ಅಂಚೆ ವ್ಯವಸ್ಥೆ ಮಾಡಿದ್ದರು.

೧೫೪೧ ರಲ್ಲಿ ಬಂಗಾಳದಿAದ ಸಿಂಧ್‌ವರೆಗಿನ ರಸ್ತೆಯಲ್ಲಿ ಕುದುರೆ ಅಂಚೆ ಜಾರಿಗೆ ತಂದನು.

ಕರ್ನಾಟಕದಲ್ಲಿ ಮೈಸೂರು ಅಂಚೆಯನ್ನು ೧೬೭೨ ರಲ್ಲಿ ಮಹಾರಾಜ ಚಿಕ್ಕದೇವರಾಯ ಒಡೆಯರ್ ಸ್ಥಾಪಿಸಿದರು.

೧೮೭೪ರಲ್ಲಿ ಸ್ವಿಟ್ಜರ್‌ಲ್ಯಾಂಡ್‌ನ ಬರ್ನ್ನಲ್ಲಿ ಯುನಿವರ್ಸಲ್ ಫೋಸ್ಟಲ್ ಯೂನಿಯನ್ ಸ್ಥಾಪನೆಯ ನೆನಪಿಗಾಗಿ ಅಕ್ಟೋಬರ್ ೯ ಅನ್ನು ವಿಶ್ವ ಅಂಚೆ ದಿನವನ್ನಾಗಿ ಆಚರಿಸಲಾಗುತ್ತಿದೆ. ೧೯೬೯ರಲ್ಲಿ ಜಪಾನ್‌ನ ಟೋಕಿಯೋದಲ್ಲಿ ಈ ದಿನವನ್ನು ವಿಶ್ವ ಅಂಚೆ ದಿನವನ್ನಾಗಿ ಘೋಷಿಸಲಾಯಿತು ದೂರವಾಣಿ ಇಲ್ಲದ ಕಾಲದಲ್ಲಿ ಸುದ್ದಿಯನ್ನು, ಪ್ರೀತಿ ಯನ್ನು, ಭಾವನೆಯನ್ನು ಮತ್ತು ಬಾಂಧವ್ಯವನ್ನು ಹೊತ್ತು ಸಾಗುತ್ತಿದ್ದ ಕೆಂಪು ಪೆಟ್ಟಿಗೆಯ ಅಂಚೆ ಜೀವನದ ಒಂದು ಭಾಗವೇ ಆಗಿತ್ತು.

ಎಲ್ಲಿಗೆ ಹೊರಟಿದ್ದು ಎಂದು ಕೇಳಿದರೆ ಪೋಸ್ಟ್ ತರೋದಕ್ಕೆ ಪೋಸ್ಟ್ ನೋಡೋದಕ್ಕೆ ಎಂಬ ಉತ್ತರವು ಸಿಗುತ್ತಿತ್ತು. ಹಾಗೆಯೇ ಮನೆಗೊಂದು ಅಂಚೆ ಬಂದರೆ ಅಂಚೆ ಚೀಟಿಯನ್ನು ಹಳೆಯ ನೋಟು ಬುಕ್‌ನಲ್ಲಿ ಅನ್ನದ ಅಗಳಿನಲ್ಲಿ ಅಂಟಿಸಿ ಸಂಗ್ರಹಿಸುವ ಸಂಭ್ರಮವೇ ಬೇರೆ ಇತ್ತು.

ಕಾಲೇಜಿನಿಂದ ಮನೆಗೆ ಬರುತ್ತಿದ್ದ ಅಂಕಪಟ್ಟಿಯನ್ನು ನಾವೇ ಸಂಗ್ರಹಿಸುವ ಮನೆಯಲ್ಲಿ ಯಾರಿಗೂ ಗೊತ್ತಾಗದೆ ಬಚ್ಚಿಡುವ, ನೆಮ್ಮದಿಯ ನಿಟ್ಟುಸಿರು ಬಿಡುವ, ಬೇರೆ ಮನೆಯ ಮಕ್ಕಳಿಗೆ ಅಂಕಪಟ್ಟಿ ದೊರೆತು ನಮ್ಮ ಮನೆಯಲ್ಲಿ ಸಿಕ್ಕಿಲ್ಲವೆಂದು ಹಿರಿಯರು ಪತ್ತೇದಾರಿ ಕೆಲಸ ಮಾಡುವ, ಎಲ್ಲವೂ ಆಗಿನ ನೆಮ್ಮದಿ ಕೆಡಿಸಿದ್ದರೆ ಈಗ ಅದನ್ನೆಲ್ಲ ಕಳೆದುಕೊಂಡ ನೋವಿನ ಭಾರವಿದೆ.

ಅಂಚೆ ಅಣ್ಣ ಮನೆಗೆ ಬರುವುದೆಂದರೆ ಖುಷಿಯೊಂದಿಗೆ ಕುತೂಹಲವು ಇರುತ್ತಿತ್ತು. ಬಂದ ಪತ್ರವನ್ನು ತೆರೆದು ಓದುವ ಧೈರ್ಯವಿಲ್ಲದೆ ಅದರ ಒಂದು ಬದಿಯನ್ನು ಅಗಲಿಸಿ ಇಣುಕಿ ನೋಡಿ ಬರೆದವರು ಯಾರೆಂದು ಗುರುತಿಸಿ ೪ ಸಾಲುಗಳನ್ನು ಓದಿಕೊಂಡು ಏನು ತಿಳಿಯದವರಂತೆ ಪತ್ರ ಹೇಗಿತ್ತೋ ಹಾಗೆ ಮೇಜಿನ ಮೇಲಿಟ್ಟು ವಿಷಯ ತಿಳಿದು ಬಿಗುತ್ತಿದ್ದ ದಿನಗಳು ಅವು.

ಬ್ರಿಟಿಷ್ ಕಾಲದ ಆಧುನಿಕ ಅಂಚೆ ವ್ಯವಸ್ಥೆ : ರಾಬರ್ಟ್ ಕ್ಲೈವ್ ೧೭೬೬ ರಲ್ಲಿ ಕ್ರಮಬದ್ಧವಾದ ಅಂಚೆ ವ್ಯವಸ್ಥೆಯನ್ನು ಪ್ರಾರಂಭಿಸಿದರು.

೧೭೭೪ ರಲ್ಲಿ ಸಾರ್ವಜನಿಕರಿಗೆ ಅಂಚೆ ಸೇವೆಯನ್ನು ಮುಕ್ತಗೊಳಿಸಿ, ಕಲ್ಕತ್ತಾದಲ್ಲಿ ಮೊದಲ ಜನರಲ್ ಪೋಸ್ಟ್ ಆಫೀಸ್ (ಉPಔ) ಸ್ಥಾಪಿಸಿದರು. ೧೮೫೪ ರಲ್ಲಿ ಏಕರೂಪದ ಅಂಚೆ ದರಗಳು ಮತ್ತು ‘ಪೋಸ್ಟ್ ಆಫೀಸ್ ಆಕ್ಟ್' ಜಾರಿಗೆ ತಂದರು. ೧೮೭೬ ಭಾರತವು ‘ಯೂನಿವರ್ಸಲ್ ಪೋಸ್ಟಲ್ ಯೂನಿಯನ್' (UPU) ಸದಸ್ಯತ್ವ ಪಡೆಯಿತು.

೧೮೭೯ ಅಂಚೆ ಕಾರ್ಡ್ಗಳು (Posಣಛಿಚಿಡಿಜs) ಮತ್ತು ಮನಿ ಆರ್ಡರ್ ವ್ಯವಸ್ಥೆ, ೧೮೮೨ ಅಂಚೆ ಉಳಿತಾಯ ಬ್ಯಾಂಕ್ (Sಚಿviಟಿgs ಃಚಿಟಿಞ), ೧೯೮೬ ಸ್ಪೀಡ್ ಪೋಸ್ಟ್ (Sಠಿeeಜ Posಣ) ಆರಂಭವಾಯಿತು. ಹಾಗೆಯೇ ಪೂರ್ಣಚಂದ್ರ ತೇಜಸ್ವಿ ಅವರ ಪ್ರಸಿದ್ಧ ಕಥೆ ‘ಅಬಚೂರಿನ ಪೋಸ್ಟಾಫೀಸು' ಕಥೆಯಲ್ಲಿ ಬರುವ ಬೋಬಣ್ಣ ಎಂಬ ಪೋಸ್ಟ್ಮಾಸ್ಟರ್‌ನ ಕುತೂಹಲ ಹಾಗೂ ಅದರಿಂದ ಉಂಟಾಗುವ ಹಾಸ್ಯಭರಿತ ಹಾಗೂ ಅನಿರೀಕ್ಷಿತ ರೋಚಕ ಘಟನೆಗಳ ಸುತ್ತ ನಡೆಯುವ ಕಥೆ ಮೆಲುಕು ಹಾಕುವಂತೆ ಮಾಡುತ್ತದೆ.

ಹೊಸದಾಗಿ ತೆರೆದ ತಾತ್ಕಾಲಿಕ ಪೋಸ್ಟ್ ಆಫೀಸಿನ ಪೋಸ್ಟ್ಮಾಸ್ಟರ್ ಬೋಬಣ್ಣ. ಊರಿನ ಜನರಿಗೆ ಬರುವ ಪತ್ರಗಳನ್ನು ಓದುವ ಹಾಗೂ ರಹಸ್ಯಗಳನ್ನು ತಿಳಿದುಕೊಳ್ಳುವ ವಿಚಿತ್ರ ಕುತೂಹಲ ಮತ್ತು ಚಟ ಇತ್ತು. ಅಕ್ಷರ ಬರೆಯಲು ಓದಲು ಬಾರದ ಜನರಿಗೆ ಪತ್ರಗಳನ್ನು ಜೋರಾಗಿ ಓದಿ ಹೇಳುವಾಗ, ಬೋಬಣ್ಣ ಕೆಲವೊಮ್ಮೆ ತನಗೆ ಬೇಕಾದಂತೆ ಅಥವಾ ತನ್ನ ಕುತೂಹಲಕ್ಕೆ ತಕ್ಕಂತೆ ತಿರುಚಿ ಹೇಳುತ್ತಿದ್ದ. ಈ ಚಟವೇ ಅವನಿಗೆ

ಮುಳುವಾಗುತ್ತದೆ. ಒಂದು ಪತ್ರದ ವಿಚಾರದಲ್ಲಿ ಊರಿನಲ್ಲಿ ದೊಡ್ಡ ಎಡವಟ್ಟು, ಗೊಂದಲ ಹಾಗೂ ಫಜೀತಿ ಉಂಟಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಕೊನೆಗೆ ಬೋಬಣ್ಣ ಊರೇ ಬಿಡಬೇಕಾದಂತಹ ಸ್ಥಿತಿ ಎದುರಾಗುತ್ತದೆ.

ಮಾನವನ ಸಹಜ ಕುತೂಹಲ ಅಧಿಕಪ್ರಸಂಗತೆ ಮತ್ತು ಗ್ರಾಮೀಣ ಸಮಾಜದ ಹಿನ್ನೆಲೆಯಲ್ಲಿ ನಡೆಯುವ ಮಾನವನ ಇಂಥ ವರ್ತನೆಗಳನ್ನು ತೇಜಸ್ವಿ ಕಥೆಯಲ್ಲಿ ಅತ್ಯಂತ ಹಾಸ್ಯಮಯವಾಗಿ ಹಾಗೂ ವಾಸ್ತವಿಕವಾಗಿ ಚಿತ್ರಿಸಿದ್ದಾರೆ.

ಈ ರೀತಿಯ ವಾಸ್ತವ ಕಥೆಗಳು ಆಗಿನ ಕಾಲಕ್ಕೆ ಅದೆಷ್ಟು ಊರುಗಳಲ್ಲಿ ನಡೆದಿದೆ ಎನ್ನಲು ಯಾವುದೇ ಅನುಮಾನವಿಲ್ಲ ಅಲ್ಲವೇ ಅಂಚೆ ವೃಂದದವರು ಧರಿಸುವ ಸಮವಸ್ತ್ರವು ಮುಗ್ಧ ಮಕ್ಕಳಲ್ಲಿ ಪೊಲೀಸ್ ಅವರನ್ನು ಕಂಡAತೆ ಭಾಸವಾದದ್ದು ಇದೆ.

ಎಷ್ಟೋ ಜನರ ಬಾಳಿಗೆ ಪ್ರೇಮ ಪತ್ರವನ್ನು, ವಿವಾಹದ ಆಹ್ವಾನ ಪತ್ರವನ್ನು, ವೃತ್ತಿ ಬದುಕಿಗೆ ಆಹ್ವಾನಿಸುವ ಆದೇಶ ಪತ್ರವನ್ನು, ಹೆಸರಿಲ್ಲದೆ ಬರುವ ಮುಗರ್ಜಿಗಳನ್ನು ಹೊತ್ತು ತಂದು ಇಂದು ಸದ್ದಿಲ್ಲದೆ ತನ್ನ ಕಾಯಕವನ್ನು ಮಾಡುತ್ತಲೇ ಇದೆ.

ಡಿಜಿಟಲ್ ಸಂವಹನವು ಜನರ ಸಂಪರ್ಕ ಸಾಧಿಸುವ ವಿಧಾನವನ್ನು ಪರಿವರ್ತಿಸಿದ್ದರೂ ದಾಖಲೆಗಳು, ಹಣಕಾಸು ಸೇವೆಗಳು, ಔಷಧಿಗಳು, ಸರ್ಕಾರಿ ಪತ್ರವ್ಯವಹಾರಗಳು, ಇ-ಕಾಮರ್ಸ್ ಪ್ಯಾಕೇಜ್‌ಗಳು ಮತ್ತು ವೈಯಕ್ತಿಕ ಪತ್ರಗಳನ್ನು ಮಳೆ, ಗಾಳಿ, ಚಳಿ, ಬಿಸಿಲೆನ್ನದೆ ದೂರದೂರಿಗೆ ದಣಿವರಿಯದೆ ತಲುಪಿಸುತ್ತಿರುವ ಅಂಚೆ ನೌಕರ ಬಾಂಧವರಿಗೆ, ಅಂಚೆ ಅಕ್ಕ ಅಣ್ಣಂದಿರಿಗೆ "ಅಂಚೆ ದಿನ"ದ ಶುಭಾಶಯ ಹೇಳೋಣ.

ಕೊನೆಹನಿ: "ಬಹುದೂರವನ್ನು ದೂರವಾಗಿಸಿ ಬಾಂಧವ್ಯವನ್ನು ಬಂಧಿಸುವ ಅಂಚೆ."

-ರಜನಿ ಎಸ್. ಎಂ., ಸಹಾಯಕ ಪ್ರಾಧ್ಯಾಪಕರು

ಕಾವೇರಿ ಕಾಲೇಜು,

ಗೋಣಿಕೊಪ್ಪ.