ನಾಪೋಕ್ಲು, ಅ. ೮: ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವರ ಸಹಯೋಗದಲ್ಲಿ ೨೦೨೬-೨೭ನೇ ಸಾಲಿನ ದಿ. ಮಂಡೆಪAಡ ಅಕ್ಕಮ್ಮ ಗಣಪತಿ ದತ್ತಿ ಉಪನ್ಯಾಸ ಹಾಗೂ ದಿ. ದಂಬೆಕೋಡಿ ಚಿಣ್ಣಪ್ಪ ದತ್ತಿ ಪುರಸ್ಕಾರ ಕಾರ್ಯಕ್ರಮ ಕಡಗದಳು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಿತು. ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕಡ್ಲೆರ ತುಳಸಿ ಮೋಹನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಶಾಲೆಯ ಮುಖ್ಯ ಶಿಕ್ಷಕರಾದ ಡೈಸಿ ಸಿಸಿ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಅವರು ಮಾತನಾಡಿ ದತ್ತಿ ಕಾರ್ಯಕ್ರಮದಲ್ಲಿ ಮಾಡುವ ಉಪನ್ಯಾಸದಿಂದ ವಿದ್ಯಾರ್ಥಿಗಳಿಗೆ ಉತ್ತಮ ಸಂದೇಶ ಹಾಗೂ ಮಾಹಿತಿಗಳು ದೊರೆಯುತ್ತವೆ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು ಈ ವರ್ಷ ಕಡಗದಾಳು ಶಾಲೆಯ ವಿದ್ಯಾರ್ಥಿನಿ ಮಡಿಕೇರಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದು ದತ್ತಿ ಪುರಸ್ಕಾರಕ್ಕೆ ಭಾಜನರಾಗಿರುವುದು ಶಾಲೆಯ ಕೀರ್ತಿಯನ್ನು ಇಮ್ಮಡಿಗೊಳಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ನಿವೃತ್ತ ಪ್ರಾಂಶುಪಾಲ ಕೆ. ಜಿ. ದಿವಾಕರ ಅವರು ಕೊಡಗು ಜಿಲ್ಲೆಯ ಮಹಿಳಾ ಸಾಹಿತಿಗಳು ಎಂಬ ವಿಷಯದ ಕುರಿತು ದತ್ತಿ ಉಪನ್ಯಾಸ ನೀಡಿದರು. ಕೊಡಗು ಜಿಲ್ಲೆಯಲ್ಲಿ ಮಹಿಳಾ ಸಾಹಿತಿಗಳು ಪುರುಷರಿಗಿಂತ ಮೇಲುಗೈ ಸಾಧಿಸಿದ್ದಾರೆ. ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡು ಪುರುಷರಿಗೆ ಸರಿ ಸಮಾನವಾಗಿ ಉನ್ನತ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕೂಡ ಹಲವಾರು ದತ್ತಿ ಪ್ರಶಸ್ತಿಗಳು ಮಹಿಳೆಯರ ಪಾಲಿಗೆ ಮೀಸಲಾಗಿರುವುದು ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರು ಗಮನಾರ್ಹವಾಗಿ ಗುರುತಿಸಿಕೊಂಡಿರುವುದಕ್ಕೆ ಸಾಕ್ಷಿಯಾಗಿದೆ. ಕೊಡಗಿನ ಗೌರಮ್ಮ ಪ್ರಶಸ್ತಿಯನ್ನು ಜಿಲ್ಲೆಯ ೨೩ ಮಹಿಳಾ ಸಾಹಿತಿಗಳು ಸ್ವೀಕರಿಸಿರು ವುದು ಸಾಹಿತ್ಯ ಕ್ಷೇತ್ರಕ್ಕೆ ಜಿಲ್ಲೆಯ ಮಹಿಳೆಯರ ಕೊಡುಗೆಯಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಶಿಕ್ಷಕಿ ಕೊರವಂಡ ರೇವತಿ ತಿಮ್ಮಯ್ಯ ಅವರು ಪೌಷ್ಟಿಕಾಂಶ ಮತ್ತು ಸ್ವಾಸ್ಥ್ಯ ಸಮಾಜ ಕುರಿತು ಮಾತನಾಡಿ ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯ ಮನುಷ್ಯನಿಗೆ ಅತಿ ಮುಖ್ಯ ಇದರೊಂದಿಗೆ ಸತ್ವಯುತ ಆಹಾರ ಸೇವನೆ ನಿಯಮಿತ ವ್ಯಾಯಾಮ ನಿಗದಿತ ಪಠ್ಯಕ್ರಮ, ಗುರು ಹಿರಿಯರಿಗೆ ಗೌರವ ನೀಡುವುದನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಂಡಾಗ ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯ ಉಜ್ವಲವಾಗುವುದು ಎಂದು ಕಿವಿಮಾತು ಹೇಳಿದರು. ಕಡ್ಲೇರ ತುಳಸಿ ಮೋಹನ್ ಅವರು ಮಾಧ್ಯಮ ಮತ್ತು ಅಂತರ್ಜಾಲದ ಬಳಕೆ ಈ ಕುರಿತು ಮಾತನಾಡಿ ಮಾಧ್ಯಮ ಸಮಾಜದ ಕಣ್ಣು ಮತ್ತು ಕಿವಿ ಇದ್ದಂತೆ. ಮಾಧ್ಯಮ ಎಂದರೆ ಮಾಹಿತಿ ವಿಚಾರಗಳು ಮತ್ತು ಮನರಂಜನೆಯನ್ನು ಜನರಿಗೆ ತಲುಪಿಸಲು ಅಥವಾ ಹಂಚಿಕೊಳ್ಳಲು ಬಳಸುವ ಪ್ರಮುಖ ಸಾಧನ ಅಥವಾ ಮಾರ್ಗ. ಮಾಧ್ಯಮ ಮತ್ತು ಅಂತರ್ಜಾಲ ದೈನಂದಿನ ಜೀವನದಲ್ಲಿ ಮಾಹಿತಿಯನ್ನು ಪಡೆಯಲು ಕಲಿಯಲು ಮತ್ತು ಸಂಪರ್ಕ ಸಾಧಿಸಲು ಅತ್ಯಂತ ಮುಖ್ಯವಾದ ಸಾಧನೆಗಳಾಗಿವೆ . ಇದರಿಂದ ಜಗತ್ತಿನ ಯಾವುದೇ ಮೂಲೆಯ ಸುದ್ದಿಗಳು ಮತ್ತು ಶೈಕ್ಷಣಿಕ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಡೆಯಬಹುದು.

ಅಂತರ್ಜಾಲದಿAದ ನಾವು ಬಹಳ ಬೇಗ ಮಾಹಿತಿಗಳನ್ನು ಪಡೆದುಕೊಂಡು ಹಂಚಿಕೊಳ್ಳ ಬಹುದು. ಸಾಮಾಜಿಕ ಜಾಲತಾಣವನ್ನು ಅವಶ್ಯಕತೆಗೆ ಮಾತ್ರ ಬಳಸಿಕೊಳ್ಳಬೇಕು. ತಂತ್ರಜ್ಞಾನ ಮುಂದುವರಿದAತೆ ಅನುಕೂಲದ ಜೊತೆಯಲ್ಲಿಯೇ ಅವಘಡಗಳು ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಆದ್ದರಿಂದ ವಿದ್ಯಾರ್ಥಿಗಳು ಇದನ್ನು ಒಳ್ಳೆಯ ವಿಚಾರಗಳಿಗೆ ಬಳಸಿಕೊಳ್ಳ ಬೇಕು ಹಾಗೂ ಬಹಳ ಸೂಕ್ಷ್ಮವಹಿಸಬೇಕು ಎಂದರು. ಈ ಸಂದರ್ಭ ೨೦೨೫-೨೬ ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಮಡಿಕೇರಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಕಡಗದಾಳು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಹರ್ಷಿತಾ ಬಿ ಎಸ್ ಇವರಿಗೆ ದಿ. ದಂಬೆಕೋಡಿ ಚಿನ್ನಪ್ಪ ದತ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ವಿದ್ಯಾರ್ಥಿನಿ ಹರ್ಷಿತಾ ಬಿ ಎಸ್ ಪೋಷಕರ ಸಹಕಾರ ಪ್ರೋತ್ಸಾಹ ಶಿಕ್ಷಕರ ಮಾರ್ಗದರ್ಶನದೊಂದಿಗೆ ಸ್ವತಹ ಛಲ ಪ್ರಯತ್ನವಿದ್ದರೆ ಮಾತ್ರ ಉನ್ನತ ಫಲಿತಾಂಶ ಪಡೆಯಲು ಸಾಧ್ಯ ಎಂದು ನುಡಿದರು.

ಕಾರ್ಯಕ್ರಮದಲ್ಲಿ ದತ್ತಿ ದಾನಿ ಗಳಾದ ಶ್ರೀಮತಿ ದಂಬೆಕೋಡಿ ಲೀಲಾ ಚಿಣ್ಣಪ್ಪ ಮೃಣಾಲಿ ಚಿಣ್ಣಪ್ಪ, ಸಾಹಿತಿ, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ರಾದ ಗೌರಮ್ಮ ಮಾಧಮಯ್ಯ, ಗೌರವ ಕಾರ್ಯದರ್ಶಿ ಗುಡ್ಡೆರ ಲಕ್ಷು ಸೋಮಣ್ಣ ಸೇರಿದಂತೆ ಮುಖ್ಯ ಪಟ್ಟವರು ಭಾಗವಹಿಸಿದ್ದರು. ಇದೇ ಸಂದರ್ಭ ಕೊರವಂಡ ತಿಮ್ಮಯ್ಯ ಮತ್ತು ರೇವತಿ ದಂಪತಿ ಕನ್ನಡ ಸಾಹಿತ್ಯ ಪರಿಷತ್ತಿಗೆ ದತ್ತಿ ಸ್ಥಾಪನೆ ಮಾಡಲು ಎರಡು ಲಕ್ಷದ ಐವತ್ತು ಸಾವಿರ (೨೫೦೦೦೦) ರೂಪಾಯಿಗಳ ಚೆಕ್ ನೀಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಶಿಯಾ ಮತ್ತು ತಂಡದವರು ಪ್ರಾರ್ಥಿಸಿ ಶಿಕ್ಷಕಿ ಭಾರತಿ ಸ್ವಾಗತಿಸಿ, ವಿಮಲಾ ಪಿ ಎಸ್ ಕಾರ್ಯಕ್ರಮ ನಿರೂಪಿಸಿ, ಪವಿತ್ರ ಕೆಎಸ್ ವಂದಿಸಿದರು.